ಭಾರತದ ಹವಾಮಾನ ವ್ಯವಸ್ಥೆಯಲ್ಲಿ ಮುಂಗಾರು ಮಳೆಯ ಪಾತ್ರ ಅತ್ಯಂತ ಮಹತ್ವದ್ದು. ದೇಶದ ಕೃಷಿ, ಆರ್ಥಿಕತೆ, ಜಲಸಂಪನ್ಮೂಲ ಮತ್ತು ಜನಜೀವನ ಎಲ್ಲವೂ ಬಹುಪಾಲು ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದೆ. ಪ್ರತಿವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಬೀಸುವ ನೈಋತ್ಯ ಮುಂಗಾರು ದೇಶಕ್ಕೆ ಒಟ್ಟು ಬೀಳುವ ಮಳೆಯ ಶೇ.75ರಷ್ಟು ಪಾಲು ನೀಡುತ್ತದೆ. ಬಳಿಕ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಈಶಾನ್ಯ ಮುಂಗಾರು ಸಕ್ರಿಯವಾಗುತ್ತದೆ.
ಪ್ರತಿವರ್ಷ ನೈಋತ್ಯ ಮುಂಗಾರು ಮೊದಲು ಕೇರಳದ ಮೂಲಕವೇ ಭಾರತ ಪ್ರವೇಶಿಸುತ್ತದೆ. ಇದಕ್ಕೆ ಭೂಮಿಯ ತಿರುಗುವಿಕೆ, ಸಮುದ್ರದ ತೇವಾಂಶ ಮತ್ತು ಗಾಳಿಯ ಚಲನೆಯೇ ಪ್ರಮುಖ ಕಾರಣ. ಬೇಸಿಗೆಯಲ್ಲಿ ಭಾರತದ ಭೂಭಾಗ ಹೆಚ್ಚು ಬಿಸಿಯಾಗುವುದರಿಂದ ನೆಲದ ಮೇಲಿನ ಗಾಳಿ ಮೇಲಕ್ಕೆ ಏರುತ್ತದೆ. ಆಗ ಸಮುದ್ರದ ತೇವಾಂಶಭರಿತ ತಂಪು ಗಾಳಿ ಭೂಭಾಗದತ್ತ ಹರಿಯುತ್ತದೆ. ಇದೇ ಚಕ್ರ ನಿರಂತರವಾಗಿ ನಡೆಯುತ್ತಾ ಮಳೆಯ ಮಾರುತಗಳಿಗೆ ಕಾರಣವಾಗುತ್ತದೆ.ಈ ಮಾರುತಗಳು ಅರಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ಹೆಚ್ಚಿನ ತೇವಾಂಶವನ್ನು ಪಡೆದು ಮತ್ತಷ್ಟು ಶಕ್ತಿಶಾಲಿಯಾಗುತ್ತವೆ. ಹೀಗಾಗಿ ಮಳೆ ಸುರಿಸುವ ಗಾಳಿಗಳು ನೈಋತ್ಯ ದಿಕ್ಕಿನಿಂದ, ಅಂದರೆ ಕೇರಳದ ಮೂಲಕ ಭಾರತ ಪ್ರವೇಶಿಸುತ್ತವೆ.
ಭಾರತದ ದಕ್ಷಿಣ ಭಾಗದ ಚೂಪಾದ ಭೌಗೋಳಿಕ ರಚನೆಯಿಂದ ಮುಂಗಾರು ಮಾರುತಗಳು ಎರಡು ಭಾಗಗಳಾಗಿ ವಿಭಜನೆಯಾಗುತ್ತವೆ. ಒಂದು ಭಾಗ ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ಭಾರೀ ಮಳೆ ಸುರಿಸುತ್ತದೆ. ಪಶ್ಚಿಮ ಘಟ್ಟಗಳು ಈ ಮಾರುತಗಳನ್ನು ತಡೆಯುವುದರಿಂದ ಈ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತದೆ.ಇನ್ನೊಂದು ಭಾಗ ತಮಿಳುನಾಡಿನತ್ತ ಸಾಗುತ್ತದೆ. ಅಲ್ಲಿಂದ ಈಶಾನ್ಯ ಭಾರತದತ್ತ ಚಲಿಸಿ ಬಾಂಗ್ಲಾದೇಶದ ಖಾಸಿ ಬೆಟ್ಟಗಳನ್ನು ಅಪ್ಪಳಿಸುತ್ತದೆ. ಇದರಿಂದ ಮೇಘಾಲಯದ ಮೌಸಿನ್ರಾಮ್ ಮತ್ತು ಚಿರಾಪುಂಜಿ ಪ್ರದೇಶಗಳಲ್ಲಿ ಜಗತ್ತಿನ ಅತಿಹೆಚ್ಚು ಮಳೆಯಾಗುತ್ತದೆ.
ಮೇಘಾಲಯದ ಮೌಸಿನ್ರಾಮ್ ಮತ್ತು ಚಿರಾಪುಂಜಿ ಪ್ರದೇಶಗಳಲ್ಲಿ ವರ್ಷಕ್ಕೆ 11 ಸಾವಿರ ಮಿ.ಮೀ.ಗಿಂತ ಹೆಚ್ಚು ಮಳೆಯಾಗುತ್ತದೆ. ಇನ್ನೊಂದೆಡೆ ರಾಜಸ್ಥಾನದ ಜೈಸಲ್ಮೇರ್ ಭಾಗ ಮರುಭೂಮಿ ಪ್ರದೇಶವಾಗಿದ್ದು, ಅಲ್ಲಿ ಮಳೆಯ ಪ್ರಮಾಣ ಅತ್ಯಂತ ಕಡಿಮೆ. ಕಾರಣ, ಮುಂಗಾರು ಮಾರುತಗಳು ಆ ಭಾಗಕ್ಕೆ ಸಮರ್ಪಕವಾಗಿ ತಲುಪುವುದಿಲ್ಲ.ಪೆಸಿಫಿಕ್ ಮಹಾಸಾಗರದಲ್ಲಿ ಉಂಟಾಗುವ “ಎಲ್ ನಿನೋ” ಪ್ರಕ್ರಿಯೆ ಭಾರತದ ಮುಂಗಾರು ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಸಮುದ್ರದ ತಂಪು ನೀರು ಮತ್ತು ಗಾಳಿಯ ಚಲನೆ ಮಳೆ ಮಾರುತಗಳಿಗೆ ಶಕ್ತಿ ತುಂಬುತ್ತದೆ. ಆದರೆ ಎಲ್ ನಿನೋ ಸಂದರ್ಭದಲ್ಲಿ ಸಮುದ್ರದ ಬಿಸಿ ನೀರು ಮಧ್ಯಭಾಗದಲ್ಲೇ ಉಳಿದುಕೊಳ್ಳುತ್ತದೆ. ಇದರಿಂದ ಮಾರುತಗಳು ದುರ್ಬಲಗೊಂಡು ಭಾರತದಲ್ಲಿ ಮಳೆ ಕೊರತೆ ಅಥವಾ ಬರ ಪರಿಸ್ಥಿತಿ ಉಂಟಾಗಬಹುದು.
ಭಾರತೀಯ ಹವಾಮಾನ ಇಲಾಖೆ India Meteorological Department (IMD) ಆಧುನಿಕ ತಂತ್ರಜ್ಞಾನಗಳ ಮೂಲಕ ಮುಂಗಾರು ಆಗಮನದ ಮುನ್ಸೂಚನೆ ನೀಡುತ್ತದೆ. ಪೆಸಿಫಿಕ್ ಸಮುದ್ರದ ತಾಪಮಾನ, ಇಂಡಿಯನ್ ಓಷಿಯನ್ ಡೈಪೋಲ್, ಹಿಮಾಲಯ ಪ್ರದೇಶದ ಹಿಮಪಾತ ಸೇರಿದಂತೆ ಹಲವು ಅಂಶಗಳನ್ನು ಅಧ್ಯಯನ ಮಾಡಿ ಮುಂಗಾರು ಪ್ರವೇಶದ ದಿನಾಂಕ ಅಂದಾಜಿಸಲಾಗುತ್ತದೆ.ಭಾರತದ ಅರ್ಧಕ್ಕಿಂತ ಹೆಚ್ಚು ಕೃಷಿಭೂಮಿ ಇನ್ನೂ ಮಳೆಆಧಾರಿತವಾಗಿರುವುದರಿಂದ ರೈತರು ಮುಂಗಾರು ಮಳೆಯನ್ನೇ ಅವಲಂಬಿಸಿದ್ದಾರೆ. ಉತ್ತಮ ಮಳೆಯಾದರೆ ಬೆಳೆ ಉತ್ಪಾದನೆ ಹೆಚ್ಚಾಗಿ ರೈತರ ಆದಾಯ ಏರಿಕೆಯಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಾಗಿ ದೇಶದ ಆರ್ಥಿಕ ಚಟುವಟಿಕೆಗೂ ಚೈತನ್ಯ ಸಿಗುತ್ತದೆ.
ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಾದರೆ ಬೆಲೆ ಏರಿಕೆ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ಮುಂಗಾರು ಕೇವಲ ಮಳೆಯಲ್ಲ, ಭಾರತದ ಆರ್ಥಿಕ ಸ್ಥಿರತೆಗೆ ಜೀವನಾಡಿಯಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















