ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಶಾಸಕರ ಮನೆಯ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ವೀರೇಂದ್ರ ಪಪ್ಪಿಯನ್ನ ವಶಕ್ಕೆ ಪಡೆದುಕೊಂಡಿದ್ದರು. ಆನ್ಲೈನ್ ಗೇಮಿಂಗ್ ಆಪ್ ಗಳಿಗೆ ಅಕ್ರಮ ಹಣ ವರ್ಗಾವಣೆಯ ಆರೋಪ ಇತ್ತು. ಇಂದು ಕೋರ್ಟ್ ಮುಂದೆ ವೀರೇಂದ್ರ ಪಪ್ಪಿಯನ್ನ ಹಾಜರುಪಡಿಸಲಾಗಿತ್ತು. ವಾದ – ಪ್ರತಿವಾದ ಆಲಿಸಿದ ಕೋರ್ಟ್ ಇಡಿಗೆನೆ ತರಾಟೆ ತೆಗೆದುಕೊಂಡಿದೆ. ಹಾಗಾದ್ರೆ ಕೋರ್ಟ್ ನಲ್ಲಿ ನಡೆದ ವಾದ ಪ್ರತಿವಾದ ಹೇಗಿತ್ತು ಎಂಬ ಮಾಹಿತಿ ಇಲ್ಲಿದೆ.
ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಜಡ್ಜ್ ಗಜಾನನ ಭಟ್ ಪೀಠದಲ್ಲಿ ವಿಚಾರಣೆ ನಡೆದಿದೆ. ವೀರೇಂದ್ರ ಪಪ್ಪಿ ಅವರಿಗೆ ನಿದ್ದೆ ಮಾಡುವುದಕ್ಕೆ ಸಮಯ ಕೊಡಬೇಕು, ಶುದ್ಧ ಕುಡಿಯುವ ನೀರು, ಔಷಧ, ವಿಶ್ರಾಂತಿಗೆ ಅವಕಾಶ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಕೋರ್ಟ್ ಆದೇಶ ನೀಡಿದೆ. ಜೊತೆಗೆ 30 ನಿಮಿಷಗಳ ಕಾಲ ವಕೀಲರ ಜೊತೆಗೆ ಮಾತನಾಡುವುದಕ್ಕೂ ಸಮಯಾವಕಾಶ ನೀಡುವಂತೆ ಸೂಚಿಸಿದೆ.
ಶಾಸಕ ವೀರೇಂದ್ರ ಪಪ್ಪಿ ಅವರ ಕಸ್ಟಡಿ ಇಂದಿಗೆ ಅಂತ್ಯವಾಗಿತ್ತು. ಹೀಗಾಗಿ ಇಡಿ ಅಧಿಕಾರಿಗಳು ಕೋರ್ಟ್ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ಇಡಿ ಅಧಿಕಾರಿಗಳು ಮತ್ತೆ 15 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೇಳಿದ್ದರು. ಇಡಿ ಪರ ವಕೀಲರಾದ ಎಸ್ಪಿಪಿ ಪ್ರಮೋದ್ ಚಂದ್ರ ವಾದ ಮಂಡಿಸಿದರು. ಇದಕ್ಕೆ ಆಕ್ಷೇಪಿಸಿದ ವೀರೇಂದ್ರ ಪಪ್ಪಿ ಪರ ಹಿರಿಯ ವಕೀಲ ಕಿರಣ್ ಜವಳಿ, ಇಡಿ ಅಧಿಕಾರಿ ಯಾವುದೇ ಸೌಲಭ್ಯ ನೀಡದೆ ಕಿರುಕುಳ ನೀಡಿದ್ದಾರೆ. ಹೀಗಾಗಿ ಜಾಮೀನು ನೀಡುವಂತೆ ಮನವಿ ಮಾಡಿದರು. ಇಡಿ ಬುದ್ಧಿ ಹೇಳಿದ ಕೋರ್ಟ್, ವೀರೇಂದ್ರ ಪಪ್ಪಿ ಅವರಿಗೆ ಮತ್ತೆ ಆರು ದಿನಗಳ ಕಾಲ ಕಸ್ಟಡಿಗೆ ನೀಡಿದೆ.






