Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಮಿತಿ 3 ಲಕ್ಷ ರೂ.ಗೆ ಹೆಚ್ಚಳಕ್ಕೆ ಚಿಂತನೆ: ಸಚಿವ ಕೆ.ಹೆಚ್. ಮುನಿಯಪ್ಪ

---Advertisement---

ಬೆಂಗಳೂರು.ಜುಲೈ.25: ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಲು ಮುಂದಾಗಿದೆ.

ಇನ್ಮುಂದೆ ಬಿಪಿಎಲ್ (BPL) ಪಡಿತರ ಚೀಟಿ ಪಡೆಯಲು ಅರ್ಹತೆಯಾಗಿರುವ ವಾರ್ಷಿಕ ಆದಾಯದ ಮಿತಿಯನ್ನು ಗಣನೀಯವಾಗಿ ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಆಲೋಚನೆ ನಡೆಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ, ಶೀಘ್ರದಲ್ಲೇ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸುಳಿವು ನೀಡಿದ್ದಾರೆ.

ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಬಿಪಿಎಲ್ ಕಾರ್ಡ್ ಹೊಂದಲು ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಒಳಗಿರಬೇಕಿತ್ತು. ಆದರೆ, ಬದಲಾದ ಆರ್ಥಿಕ ಪರಿಸ್ಥಿತಿ ಹಾಗೂ ಆಡಳಿತಾತ್ಮಕ ಸುಧಾರಣಾ ಆಯೋಗದ ಶಿಫಾರಸನ್ನು ಪುರಸ್ಕರಿಸಿ, ಈ ಆದಾಯ ಮಿತಿಯನ್ನು 3 ಲಕ್ಷ ರೂಪಾಯಿಗೆ ಏರಿಸಲು ಇಲಾಖೆ ಯೋಜನೆ ರೂಪಿಸಿದೆ. ಸರ್ಕಾರದ ಈ ನಡೆ ಜಾರಿಗೆ ಬಂದರೆ, ರಾಜ್ಯದ ಇನ್ನುಳಿದ ಅನೇಕ ಕುಟುಂಬಗಳಿಗೆ ಬಿಪಿಎಲ್ ವ್ಯಾಪ್ತಿಗೆ ಸೇರ್ಪಡೆಯಾಗುವ ಹೊಸ ಅವಕಾಶ ಸಿಗಲಿದೆ.

ಇದೇ ವೇಳೆ, ಆದಾಯ ತೆರಿಗೆ ಪಾವತಿ ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದ ಬಿಪಿಎಲ್ ಸೌಲಭ್ಯ ಅಮಾನತಿನಲ್ಲಿರುವ ಕಾರ್ಡುಗಳನ್ನು ಸಂಪೂರ್ಣ ರದ್ದುಗೊಳಿಸದೆ, ಅವುಗಳನ್ನು ಎಪಿಎಲ್ (APL) ಕಾರ್ಡುಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ.

ಅಲ್ಲದೆ, ಪಡಿತರ ಚೀಟಿಯಲ್ಲಿದ್ದ ಮನೆಯ ಯಜಮಾನಿ ನಿಧನರಾದರೆ ಅವರ ಸ್ಥಾನಕ್ಕೆ ಮಗಳು ಅಥವಾ ಸೊಸೆಯ ಹೆಸರನ್ನು ಸೇರ್ಪಡೆಗೊಳಿಸುವ ನಿಯಮದಲ್ಲೂ ದೊಡ್ಡ ಮಟ್ಟದ ವಿನಾಯಿತಿ ನೀಡಲಾಗಿದೆ. ಈ ಹಿಂದೆ ಹೆಸರು ಬದಲಾವಣೆಯ ಅನುಮೋದನೆಗೆ ಸುಮಾರು ಮೂರು ತಿಂಗಳು ಕಾಯಬೇಕಿತ್ತು. ಆದರೆ ಇನ್ಮುಂದೆ ಅರ್ಜಿ ಸಲ್ಲಿಸಿದ ಒಂದೇ ತಿಂಗಳಿನಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Join WhatsApp

Join Now

Join Telegram

Join Now