ಸುದ್ದಿಒನ್,ಚಿತ್ರದುರ್ಗ,ಮೇ.11: ಅಕಾಲಿಕ ನಿಧನರಾದ ಸಚಿವ ಡಿ. ಸುಧಾಕರ್ ಅವರ ಪಾರ್ಥಿವ ಶರೀರ ಇಂದು ಅವರ ತವರು ಕ್ಷೇತ್ರವಾದ ಚಳ್ಳಕೆರೆಗೆ ಆಗಮಿಸಿದ್ದು, ಸಾರ್ವಜನಿಕರ ಅಂತಿಮ ದರ್ಶನ ಹಾಗೂ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಬೆಳಿಗ್ಗೆ ಚಳ್ಳಕೆರೆಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರ ಒತ್ತಡದ ಹಿನ್ನೆಲೆಯಲ್ಲಿ ನಂತರ ಪಾರ್ಥಿವ ಶರೀರವನ್ನು ಆಂಬುಲೆನ್ಸ್ ಮೂಲಕ ಸ್ಥಳೀಯ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರು ದರ್ಶನ ಪಡೆದಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗಮಿಸಿ ಅಂತಿಮ ನಮನ ಸಲ್ಲಿಸಲಿದ್ದಾರೆ. ಸಚಿವ ಸುಧಾಕರ್ ಅವರ ಪುತ್ರ ಸುಹಾಸ್ ಮಾಹಿತಿ ನೀಡಿರುವಂತೆ, ಮಧ್ಯಾಹ್ನ 4 ಗಂಟೆಗೆ ಪಾವಗಡ ರಸ್ತೆಯ ಜೈನ ಮುಕ್ತಿಧಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.ಜೈನ ಧರ್ಮದ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಕೋರಲಾಗುವುದು. ಪುತ್ರ ಸುಹಾಸ್ ಅವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ.






