ಜನವರಿ 7 ರಂದು ಮೇದಾರ ಕೇತೇಶ್ವರ ಗುರುಪೀಠದಲ್ಲಿ ಬೃಹತ್ ಸಮಾವೇಶ

suddionenews
1 Min Read

ಚಿತ್ರದುರ್ಗ: ಸೀಬಾರ ಸಮೀಪವಿರುವ ಮೇದಾರ ಕೇತೇಶ್ವರ ಗುರುಪೀಠದಲ್ಲಿ ಜ.7 ರಂದು ಅಖಿಲ ಭಾರತ ಮೇದಾರ ಪರಿಶಿಷ್ಠ ಪಂಗಡದ ಬುಡಕಟ್ಟು ಬೃಹತ್ ಸಮಾವೇಶ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಮೇದಾರ ಕೇತೇಶ್ವರ ಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಮಹಾಸ್ವಾಮೀಜಿ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ ಅಂದು ಬೆಳಿಗ್ಗೆ 11-30 ಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮಾವೇಶ ಉದ್ಘಾಟಿಸಲಿದ್ದಾರೆ.

ಕೇಂದ್ರದ ಗೃಹಮಂತ್ರಿ ರಾಜನಾಥ್‍ಸಿಂಗ್, ಭಗವಂತ್‍ಕೂಬ, ಪ್ರಹ್ಲಾದ್‍ಜೋಶಿ, ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ, ಶೋಭ ಕರಂದ್ಲಾಜೆ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರುಗಳು ಆಗಮಿಸಲಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಜನ ಆಗಮಿಸಲಿದ್ದು, ಎರಡು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ, ಸಮಾವೇಶದಲ್ಲಿ ಇಪ್ಪತ್ತೈದು ಸಾವಿರ ಮಹಿಳೆಯರಿಗೆ ಹುಡಿ ತುಂಬಲಾಗುವುದು ಎಂದು ಹೇಳಿದರು.

ಆದಿವಾಸಿ ಬುಡಕಟ್ಟಿಗೆ ಸೇರಿದ ನಮ್ಮ ಜನಾಂಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದು, ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಮಹಾಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸತತವಾಗಿ ಹೋರಾಟ ನಡೆಸಿದ್ದರ ಪರಿಣಾಮವಾಗಿ ಪರಿಶಿಷ್ಠ ಪಂಗಡಕ್ಕೆ ಶೇ.3 ರಿಂದ 7.5 ಹಾಗೂ ಪರಿಶಿಷ್ಟ ಜಾತಿಗೆ ಶೇ.15 ರಿಂದ 17 ರಷ್ಟು ಮೀಸಲಾತಿಯನ್ನು ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಸಮಾವೇಶದಲ್ಲಿ ಕೃತಜ್ಞತೆ ಸಲ್ಲಿಸಲಾಗುವುದು. ನಾಡಿನಾದ್ಯಂತ 30 ಸ್ವಾಮೀಜಿಗಳು ಸಮಾವೇಶಕ್ಕೆ ಬರಲಿದ್ದಾರೆಂದು ತಿಳಿಸಿದರು.

ಆದಿವಾಸಿ ಬುಡಕಟ್ಟಿಗೆ ಸೇರಿದ ಮೇದಾರ ಜನಾಂಗ ರಾಜ್ಯದಲ್ಲಿ ಹತ್ತರಿಂದ ಹದಿನೈದು ಲಕ್ಷದಷ್ಠಿದ್ದು, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ಜನ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ಅದಕ್ಕಾಗಿ ಈಗನಿಂದಲೇ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಮಾಧ್ಯಮ ವಕ್ತಾರ ಉಮೇಶ್, ಕೆ.ಎನ್.ಮಂಜುನಾಥ್, ಶ್ರೀನಿವಾಸ್, ಲೋಕೇಶ್ ಇವರುಗಳು ಪತ್ರಿಕಾಗೋಷ್ಟಿಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *