ಬೆಂಗಳೂರು: ಅದ್ಯಾಕೋ ಏನೋ ಮಂತ್ರಿ ಮಾಲ್ ಗೂ ಬಿಬಿಎಂಪಿ ಗೂ ಬಿಟ್ಟಿರದ ಬಾಂಧವ್ಯ ಬೆಳೆದಮನತೆ ಕಾಣುತ್ತಿದೆ. 15/20 ದಿನಗಳಿಗೊಮ್ಮೆ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್ ಗೆ ಹೋಗ್ತಾನೆ ಇದ್ದಾರೆ. ಹಾಗಂತ ಅವರೋಗ್ತಾ ಇರೋದು ಶಾಪಿಂಗ್ ಮಾಡೋದಕ್ಕಲ್ಲ, ಬದಲಿಗೆ ಮಾಲ್ ಗೆ ಬೀಗ ಹಾಕೋದಕ್ಕೆ.
ಹೌದು, ಸಿಲಿಕಾನ್ ಸಿಟಿಯಲ್ಲಿ ಮಂತ್ರಿ ಮಾಲ್ ಗೆ ದೊಡ್ಡ ಹೆಸರಿದೆ. ವೀಕೆಂಡ್ ಬಂತು ಅಂದ್ರೆ ಶಾಪಿಂಗ್, ಟೈಪಾಸ್ ಅಂತ ಜನ ಚೂಸ್ ಮಾಡೋದು ಇದೇ ಮಂತ್ರಿಮಾಲ್ ಅನ್ನ. ವೀಕೆಂಡ್ ಗಳಲ್ಲಿ ತುಂಬಿ ತುಳುಕುವ ಮಾಲ್ ಮಾಮೂಲಿ ದಿನಗಳಲ್ಲೂ ಖಾಲಿ ಅಂತು ಇರಲ್ಲ. ಇಷ್ಟು ದೊಡ್ಡ ವ್ಯಾಪಾರ ವಹಿವಾಟು ನಡೆಸೋ ಮಾಲ್ ಬಿಬಿಎಂಪಿ ಗೆ ತೆರಿಗೆ ಕಟ್ಟದೆ, ಈ ರೀತಿ ಆಗಾಗ ಬೀಗ ಹಾಕಿಸಿಕೊಳ್ಳುತ್ತಿದೆ.
ಮಂತ್ರಿ ಮಾಲ್ ಬಿಬಿಎಂಪಿ ಗೆ ಒಟ್ಟು 36 ಕೋಟಿ ಹಣವನ್ನ ತೆರಿಗೆ ಕಟ್ಟಬೇಕಿತ್ತು. ಅದರಲ್ಲಿ ಅಕ್ಟೋಬರ್ ನಲ್ಲಿ ಒಮ್ಮೆ ಬೀಗ ಹಾಕಲು ಹೋದಾಗ 5ಕೋಟಿ ತೆರಿಗೆ ಕಟ್ಟಿತ್ತು. ಆ ಬಳಿಕ ಸಮಯಾವಾಕಾಶ ಕೇಳಿದ್ದ ಮಾಲ್ ಸಮಯ ಮುಗಿದರು ಕಟ್ಟಿರಲಿಲ್ಲ. ನವೆಂಬರ್ 15 ರಂದು ಮತ್ತೆ ಬೀಗ ಜಡಿದಾಗ ಆಗಲು ಸ್ವಲ್ಪ ತೆರಿಗೆ ಕಟ್ಟಿ ಮತ್ತೆ ಸಮಯಾವಾಕಾಶ ಕೇಳಿತ್ತು. ಆದರೀಗ ಸಮಯ ಮುಗಿದರು ಕಟ್ಟಿಲ್ಲ. ನೋಟೀಸ್ ನೀಡಿದರು ಕಟ್ಟಿಲ್ಲ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಮತ್ತೆ ಬೀಗ ಜಡಿದಿದ್ದಾರೆ.