ಕೋಲಾರ.ಜೂನ್.22: ಮಾವಿನ ಹಣ್ಣಿಗೆ ಕನಿಷ್ಠ ಬೆಂಬಲ ಬೆಲೆ (MSP) ಘೋಷಿಸುವಂತೆ ಆಗ್ರಹಿಸಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮಾವು ಬೆಳೆಗಾರರ ಸಂಘಟನೆಯಿಂದ ಇಂದು ಬೃಹತ್ ಪ್ರತಿಭಟನೆ ಮತ್ತು ಬಂದ್ ನಡೆಸಲಾಯಿತು.
ಪ್ರತಿಭಟನೆಯ ಅಂಗವಾಗಿ ಆಕ್ರೋಶಗೊಂಡ ರೈತರು ರಸ್ತೆ ತುಂಬೆಲ್ಲಾ ಮಾವಿನ ಹಣ್ಣುಗಳನ್ನು ಸುರಿದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಟನ್ ಮಾವಿಗೆ ಕೇವಲ 3,000 ದಿಂದ 4,000 ರೂಪಾಯಿ ಸಿಗುತ್ತಿದ್ದು, ಇದರಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ ಪ್ರತಿ ಟನ್ ಮಾವಿಗೆ ಕನಿಷ್ಠ 8,000 ದಿಂದ 10,000 ರೂಪಾಯಿಗಳ ಬೆಂಬಲ ಬೆಲೆಯನ್ನು ಘೋಷಿಸಬೇಕು ಎಂದು ರೈತರು ಕಟ್ಟುನಿಟ್ಟಾಗಿ ಒತ್ತಾಯಿಸಿದ್ದಾರೆ.
ಶ್ರೀನಿವಾಸಪುರ ಪಟ್ಟಣದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ವಿವಿಧ ಸಂಘಟನೆಗಳ ಮುಖಂಡರು ಬೆಳ್ಳಂಬೆಳಗ್ಗೆಯೇ ಬೀದಿಗಿಳಿದು ಹೋರಾಟ ನಡೆಸಿದರು. ಚಿಂತಾಮಣಿ ರಸ್ತೆಯ ಕಾಲೋನಿ ಗೇಟ್ ಬಳಿ ಪ್ರತಿಭಟನಾಕಾರರು ರಸ್ತೆಗೆ ಅಡ್ಡಲಾಗಿ ಟ್ರ್ಯಾಕ್ಟರ್ ಗಳನ್ನು ನಿಲ್ಲಿಸಿ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಯಿತು.
ಕಳೆದ ವರ್ಷವೂ ಮಾವು ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದು, ಈ ವರ್ಷವಾದರೂ ಸರ್ಕಾರ ತಕ್ಷಣವೇ ಬೆಂಬಲ ಬೆಲೆ ಘೋಷಿಸಿ ರೈತರ ನೆರವಿಗೆ ಧಾವಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.






