Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಲೋಕದ ಡೊಂಕು ತಿದ್ದಿದ ಮಹಾಯೋಗಿ ವೇಮನ : ಮುದ್ದುಕಿರಣ ಎಂ ಅವರ ವಿಶೇಷ ಲೇಖನ

---Advertisement---

 

ಚಿತ್ರದುರ್ಗ ಜ. 17 :  ‘ಉಪ್ಪಿಗಿಂತ ರುಚಿಯಾದ ವಸ್ತುವಿಲ್ಲ, ತಾಯಿಗಿಂತ ಮಿಗಿಲಾದ  ದೇವರಿಲ್ಲ’ ಎಂಬಂತಹ ಸರಳ  ಸತ್ಯಗಳನ್ನು ಜನಸಾಮಾನ್ಯರ ಭಾಷೆಯಲ್ಲೇ ಹೇಳಿದವರು ಮಹಾಯೋಗಿ ವೇಮನರು. ಇಂದು ಅವರ 614ನೇ ಜಯಂತಿಯ ಸಂದರ್ಭದಲ್ಲಿ,  ತೆಲುಗು ಸಾಹಿತ್ಯದ ಅತ್ಯಂತ ಜನಪ್ರಿಯ ಕವಿ ಮತ್ತು ದಾರ್ಶನಿಕರಾದ ಇವರು, ಕೇವಲ ಪದ್ಯಗಳನ್ನು ಬರಿಯಲಿಲ್ಲ ಬದಲಾಗಿ ಲೋಕದ ಅಂಕು-ಡೊಂಕುಗಳನ್ನು ತಿದ್ದುವ ‘ಕ್ರಾಂತಿಕಾರಿ ಕನ್ನಡಿ’ ಯಾದರು ಎಂಬುದರ ವಿಶೇಷ ನೋಟ ಇಲ್ಲಿದೆ.

 

ಭೋಗದಿಂದ ಯೋಗದ ಕಡೆಗೆ-ವೇಮನ ಜೀವನ ಪಯಣ : ವೇಮನ ಕ್ರಿ.ಶ.1421ರಲ್ಲಿ ಆಂಧ್ರಪ್ರದೇಶದ ಮೂಗಚಿಪಲ್ಲಿಯ ಕೋಮಗಿರಿ ವೇಮ ಭೂಪಾಲ ಮತ್ತು ಮಲ್ಲಮಾಂಬೆ ಎಂಬ ದಂಪತಿಗಳ ಮಗನಾಗಿ ಜನಿಸಿದರು. ವೇಮನ ಅವರ ಆರಂಭಿಕ ಜೀವನವು ವಿಲಾಸಿ ಮತ್ತು ಭೋಗದಾಯಕವಾಗಿತ್ತು ಎಂದು ಹೇಳಲಾಗುತ್ತದೆ. ಅವರು ಆಂಧ್ರಪ್ರದೇಶದ ನೆಲ್ಲೂರು ಅಥವಾ ಕಡಪ ಜಿಲ್ಲೆಯ ಶ್ರೀಮಂತ ಕುಟುಂಬಕ್ಕೆ ಸೇರಿದವರು. ಆದರೆ ಬದುಕಿನ ಯಾವುದೋ ಒಂದು ಘಟನೆ ಅವರಲ್ಲಿ ವೈರಾಗ್ಯವನ್ನು ಮೂಡಿಸಿತು.

 

ತದನಂತರದಲ್ಲಿ ತನ್ನ ಅತ್ತಿಗೆಯ ಬುದ್ಧಿಮಾತು ಮತ್ತು ಅವರ ಜೀವನದ ಸರಳತೆಯಿಂದ ಪ್ರಭಾವಿತರಾಗಿ ಹಾಗೂ ಶಿವಯೋಗಿಯ ಸಂಪರ್ಕಕ್ಕೆ ಬಂದು ಭೋಗದ ಬೆನ್ನತ್ತಿದ್ದ ವ್ಯಕ್ತಿ, ಸಂಸಾರದ ಮಾಯೆಯನ್ನು ಬಿಟ್ಟು ಆಧ್ಯಾತ್ಮದ ಕಡೆಗೆ ಮುಖ ಮಾಡಿದ ಅವರು, ಸತ್ಯದ ಅನ್ವೇಷಣೆಯಲ್ಲಿ ಯೋಗಿಯಾಗಿ ಬದಲಾದರು.  ಈ ರೂಪಾಂತರವೇ ಅವರ ಪದ್ಯಗಳಿಗೆ ಅತಿದೊಡ್ಡ ಪ್ರೇರಣೆಯಾಯಿತು.

 

ಸಾಮಾಜಿಕ ಸುಧಾರಣೆ :
ಅಂದಿನ ಕಾಲದಲ್ಲಿದ್ದ ಮೂಢನಂಬಿಕೆಗಳು, ಜಾತಿಪದ್ಧತಿ ಮತ್ತು ಆಡಂಬರದ ಭಕ್ತಿಯನ್ನು ವೇಮನರು ಕಟುವಾಗಿ ಟೀಕಿಸಿದರು. ‘ಜಾತಿ ಪದ್ಧತಿ’ ಎಲ್ಲರ ರಕ್ತವೂ ಕೆಂಪೇ ಇರುವಾಗ ಜಾತಿ ಭೇದವೇಕೆ? ಎಂದು ನೇರವಾಗಿ ಪ್ರಶ್ನಿಸಿದರು. ‘ಆಡಂಬರ’ ಮನಸಿನಲ್ಲಿ ಕೊಳಕನ್ನಿಟ್ಟುಕೊಂಡು ತೀರ್ಥಯಾತ್ರೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸಾರಿದರು.

 

ವೇಮನ ಪದ್ಯಗಳು ವಿಶ್ವವ್ಯಾಪಿ :
‘ವಿದ್ಯ ಲೇನಿವಾಡು ವಿಂತ ಪಶುವು.’ ವಿದ್ಯೆ ಇಲ್ಲದವನು ವಿಚಿತ್ರ ಪ್ರಾಣಿಯಂತೆ. ಮನುಷ್ಯನಿಗೆ ಜ್ಞಾನ ಮತ್ತು ಸಂಸ್ಕಾರ ಅತಿ ಅವಶ್ಯಕ ಎಂದರು. ‘ಮೇಡಿಪಂಡು ಚೂಡ ಮೇಲಿಮೈ ಯುಂಡು.’ ಅತ್ತಿಹಣ್ಣು ಮೇಲ್ನೋಟಕ್ಕೆ ಸುಂದರವಾಗಿ ಕಂಡರೂ ಒಳಗೆ ಹುಳುಗಳಿರುತ್ತವೆ. ಹಾಗೆಯೇ ಹೊರಗಿನ ಆಡಂಬರಕ್ಕಿಂತ ಮನುಷ್ಯನ ಅಂತರಂಗದ ಶುದ್ಧತೆ ಮುಖ್ಯ ಎಂದು ಹೇಳಿದರು. ಹಾಗೂ ವೇಮನ ಅವರ ವಿಚಾರಧಾರೆಗಳು ಕೇವಲ ತೆಲುಗು ನಾಡಿಗೆ ಸೀಮಿತವಾಗಿಲ್ಲ. ಬ್ರಿಟೀಷ್ ಅಧಿಕಾರಿ ಸಿ.ಪಿ. ಬ್ರೌನ್ ಅವರು ವೇಮನ ಪದ್ಯಗಳಿಂದ ಪ್ರಭಾವಿತರಾಗಿ, ಅವುಗಳನ್ನು ಸಂಗ್ರಹಿಸಿ ಇಂಗ್ಲೀಷ್‍ಗೆ ಅನುವಾದಿಸಿದರು. ಇದರಿಂದಾಗಿ ವೇಮನ ಅವರ ತತ್ವಗಳು ಜಗತ್ತಿಗೆ ಪರಿಚಯವಾದವು. ಇಂದಿಗೂ ಅವರ ಪದ್ಯಗಳು ನೈತಿಕ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ.

 

ವಿಶ್ವದಾಭಿರಾಮ ವಿನುರ ವೇಮ-ಸರಳತೆಯೇ ಶಕ್ತಿ :
ವೇಮನರ ಪ್ರತಿಯೊಂದು ಪದ್ಯವೂ ‘ವಿಶ್ವದಾಭಿರಾಮ ವಿನುರ ವೇಮ’ ಎಂಬ ಅಂಕಿತನಾಮದೊಂದಿಗೆ ಕೊನೆಗೊಳ್ಳುತ್ತದೆ. ಅವರು ಬಳಸಿದ ಭಾಷೆ ಪಂಡಿತರಿಗಷ್ಟೇ ಸೀಮಿತವಾಗದೆ, ಜನಸಾಮಾನ್ಯರಿಗೂ ಅರ್ಥವಾಗುವಂತಿತ್ತು. ಸಂಕೀರ್ಣವಾದ ವೇದಾಂತವನ್ನು ಅಡುಗೆಮನೆಯ ಉದಾಹರಣೆಗಳ ಮೂಲಕ (ಉದಾಹರಣೆಗೆ: ಉಪ್ಪು, ಹಾಲು, ಬೇವಿನ ಎಲೆ) ವಿವರಿಸಿದ್ದು ಇವರ ವಿಶೇಷತೆ.

 

614ನೇ ಜಯಂತಿಯ ಸಂದೇಶ:
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೊದಲು ಮನುಷ್ಯ ತನ್ನೊಳಗಿನ ಅರಿವನ್ನು ಜಾಗೃತಗೊಳಿಸಿಕೊಳ್ಳಬೇಕು. ನಾವು ಸತ್ಯವನ್ನು ಧೈರ್ಯವಾಗಿ ಅಳವಡಿಸಿಕೊಂಡು, ಮಾನವ ಗೌರವವನ್ನು ಕಾಪಾಡಿ, ಜ್ಞಾನ-ವಿವೇಕದ ದಾರಿಯಲ್ಲಿ ಸಮಾಜವನ್ನು ಮುನ್ನಡೆಸುವ ಸಂಕಲ್ಪ ಮಾಡೋಣ.

ವೇಮನರ ಜಯಂತಿಯು ಕೇವಲ ಸಂಭ್ರಮದ ಆಚರಣೆಯಾಗದೆ, ಅವರು ಬರೆದಂತಹ ಪದ್ಯಗಳ ಸಾರಂಶವನ್ನು ತಿಳಿದು, ಪ್ರತಿಯಬ್ಬರೂ ತಮ್ಮ ಜೀವನದಲ್ಲಿ ಸತ್ಯಾಸತ್ಯತೆ ತಿಳಿದು ಬದುಕುವಂತಹ ಆಚರಣೆಯ ದಿನವಾಗಿರಲಿ.

ವರದಿ: ಮುದ್ದುಕಿರಣ ಎಂ
ಪ್ರಶಿಕ್ಷಣಾರ್ಥಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚಿತ್ರದುರ್ಗ

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...