ಸುದ್ದಿಒನ್, ಬೆಂಗಳೂರು, ಏಪ್ರಿಲ್. 16 : ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ತಂಡದ ಪ್ರವೇಶವಾಗಿರುವ ‘ಲವ್ ಸೀಸನ್ಸ್’ ಚಿತ್ರದ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಇತ್ತೀಚೆಗೆ ಚಿತ್ರೀಕರಣ ಪೂರ್ಣಗೊಳಿಸಿದ್ದ ಈ ಚಿತ್ರವು, ಟೀಸರ್ ಬಿಡುಗಡೆ ಕಾರ್ಯಕ್ರಮದ ಮೂಲಕ ಸಿನಿಪ್ರೇಮಿಗಳ ಗಮನ ಸೆಳೆದಿದೆ.
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಜೇಶ್ ನಟರಂಗ, ನಿರ್ದೇಶಕ ಕೃತ್ವಿಕ್ ಅವರ ಕೆಲಸವನ್ನು ಮೆಚ್ಚಿಕೊಂಡು ಮಾತನಾಡಿದರು. ತಾವು ಚಿತ್ರದಲ್ಲಿ ಜವಾಬ್ದಾರಿಯುತ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಸುಳಿವು ನೀಡಿದ ಅವರು, ಪ್ರೀತಿ ಯಾವ ಕಾಲಕ್ಕೂ ಹಳೆಯದಾಗದ ವಿಷಯವಾಗಿದ್ದು, ಅದನ್ನೇ ಆಧಾರವನ್ನಾಗಿ ಮಾಡಿಕೊಂಡು ಸಿನಿಮಾ ರೂಪುಗೊಂಡಿದೆ ಎಂದು ತಿಳಿಸಿದರು. ಚಿತ್ರವನ್ನು ಪ್ರೇಕ್ಷಕರು ಬೆಂಬಲಿಸಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಈ ಚಿತ್ರದ ಮೂಲಕ ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಂಗಭೂಮಿಯಲ್ಲಿ ಅನುಭವ ಹೊಂದಿರುವ ಕೃತ್ವಿಕ್, ‘ಲವ್ ಸೀಸನ್ಸ್’ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ನಾಯಕನಾಗಿ ಮುಕುಂದ ರಾಮಸ್ವಾಮಿ ಹಾಗೂ ನಾಯಕಿಯರಾಗಿ ದಿಯಾ ಕೀರ್ತಿ ಮತ್ತು ಚಂದನಾ ಗೌಡ ಅಭಿನಯಿಸಿದ್ದು, ತಮ್ಮ ಪಾತ್ರಗಳ ಕುರಿತು ಅವರು ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಸಂಗೀತ ನಿರ್ದೇಶಕ ವೀರ್ ಸಮರ್ಥ್, ಚಿತ್ರದ ಹಾಡುಗಳು ವಿಭಿನ್ನ ಶೈಲಿಯಲ್ಲಿದ್ದು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿವೆ ಎಂದು ಹೇಳಿದರು. ಟೀಸರ್ ಮೂಲಕವೇ ಚಿತ್ರ ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಾಡುಗಳು ಹಾಗೂ ಟ್ರೈಲರ್ ಹಂತ ಹಂತವಾಗಿ ಬಿಡುಗಡೆಯಾಗಲಿದೆ.
‘ಲವ್ ಸೀಸನ್ಸ್’ ಚಿತ್ರವು ನಂಬಿಕೆಯ ಮಹತ್ವವನ್ನು ಪ್ರತಿಬಿಂಬಿಸುವ ಪ್ರೇಮಕಥೆಯನ್ನು ಒಳಗೊಂಡಿದ್ದು, ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಎನ್.ಆರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕೃತ್ವಿಕ್ ನಿರ್ದೇಶನ, ವೀರ್ ಸಮರ್ಥ್ ಸಂಗೀತ, ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಮತ್ತು ಭಜರಂಗಿ ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಮಂಡ್ಯ ರಮೇಶ್, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.







