Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲೆಯಲ್ಲಿ  ಶ್ರೀ ರಾಮನ ಹೆಜ್ಜೆ ಗುರುತು…!

Facebook
Twitter
Telegram
WhatsApp

 

    ವಿಶೇಷ ಲೇಖನ : ಡಾ. ಕೆ.ವಿ. ಸಂತೋಷ್ ,              ದಂತ ವೈದ್ಯರು, ಚಿತ್ರದುರ್ಗ, ಮೊ : 9342466936

ಜೈ ಶ್ರೀ ರಾಮ್

ಸುದ್ದಿಒನ್, ಚಿತ್ರದುರ್ಗ,  ಜನವರಿ 22 : ಇಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ದೇವಾಲಯ ಉದ್ಘಾಟನೆಯಾಗಲಿದೆ. ಒಂದು ಕಾಲದಲ್ಲಿ ಶ್ರೀರಾಮನಿಗೂ ಚಿತ್ರದುರ್ಗ ಜಿಲ್ಲೆಗೂ ಅವಿನಾಭಾವ ಸಂಬಂಧ ಇತ್ತು ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಜಿಲ್ಲೆಯಲ್ಲಿ ಶ್ರೀರಾಮನ ಹೆಜ್ಜೆ ಗುರುತುಗಳಿವೆ ಎನ್ನಲಾಗುತ್ತಿದೆ.  ಜಿಲ್ಲೆಯು ಪುರಾಣ ಕಾಲದಿಂದಲೂ  ದೇವರುಗಳು ನಡೆದಾಡಿದ ಸ್ಥಳವೆಂದು ಪ್ರಸಿದ್ಧಿ ಪಡೆದುಕೊಂಡಿದೆ.

ಮಹಾಭಾರತದ ಕಾಲ ಹಾಗೂ ರಾಮಾಯಣದ ಕಾಲದ ಐತಿಹ್ಯಗಳು ಇಂದಿಗೂ ಜನಮಾನಸದಲ್ಲಿ ಹಚ್ಚಹಸಿರಾಗಿವೆ.ಅದರಲ್ಲೂ ರಾಮಾಯಣದ ತ್ರೇತಾಯುಗದಲ್ಲಿ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕ್ಷಾತ್ ಶ್ರೀರಾಮಚಂದ್ರನು ತನ್ನ ಮಡದಿ ಸೀತಾಮಾತೆ,  ತಮ್ಮ ಲಕ್ಷ್ಮಣನ ಜೊತೆಗೆ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಕೆಲವು ಕಾಲ ತಂಗಿದ್ದು, ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಎಂಬ ನಂಬಿಕೆ ಇದೆ.

ಇದಕ್ಕೆ ಪೂರಕವಾಗುವಂತೆ ಅಯೋಧ್ಯೆಯಿಂದ ಬಂದಿದ್ದ
ರಾಮನ್ಯಾಸ ಟ್ರಸ್ಟ್‌  ಎಂಬ ಆಧ್ಯಾತ್ಮಿಕ ಸಂಸ್ಥೆಯು
ಶ್ರೀ ರಾಮನು ನಡೆದಾಡಿದ ಸ್ಥಳಗಳನ್ನು ವೈಜ್ಞಾನಿಕ ಆಧಾರದಲ್ಲಿ ಗುರುತಿಸಿ,  ಶ್ರೀರಾಮಚಂದ್ರನು ಲಂಕೆಯಿಂದ ಮರಳಿ ಅಯೋಧ್ಯೆಗೆ ಹೋಗುವಾಗ ತಂಗಿದ್ದ ಜಾಗಗಳು ಹಾಗೂ ಆತನು ಪ್ರತಿಷ್ಠಾಪಿಸಿದ ಶಿವಲಿಂಗಗಳನ್ನು ನೈಜವಾಗಿ, ವೈಜ್ಞಾನಿಕವಾಗಿ ಗುರುತಿಸುವ ಕೆಲಸವನ್ನು ಮಾಡಿ, ಆಯಾ ಸ್ಥಳಗಳಲ್ಲಿ ನಾಮಫಲಕಗಳನ್ನು ಅಳವಡಿಸಿದೆ.
ಶ್ರೀರಾಮನು ನಡೆದಾಡಿರುವ ಬಗ್ಗೆ ನಕ್ಷೆಯಲ್ಲಿ ಕೂಡ ಗುರುತಿಸಬಹುದಾಗಿದೆ. ಅಲ್ಲದೆ ರಾಮನು ನಡೆದ ಮಾರ್ಗಗಳ ರಸ್ತೆಯುದ್ದಕ್ಕೂ  ಶ್ರೀ ರಾಮಗಮನ್ ಮಾರ್ಗ ಎಂಬ ಫಲಕಗಳನ್ನು ಅಳವಡಿಸಿದ್ದಾರೆ.

ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿ ಎರಡು, ಹೊಳಲ್ಕೆರೆ ತಾಲೂಕಿನಲ್ಲಿ ಒಂದು. ಹೀಗೆ ಒಟ್ಟು ಮೂರು ಜಾಗಗಳಲ್ಲಿ ಶ್ರೀ ರಾಮನು ತಂಗಿದ್ದು, ಈ ಮಾರ್ಗದಲ್ಲಿ ಸಂಚರಿಸಿದ ಎಂಬುದನ್ನು ಅಳವಡಿಸಿರುವ ನಾಮಫಲಕ ತಿಳಿಸುತ್ತದೆ.

ದಶರಥ ರಾಮೇಶ್ವರ ದೇವಾಲಯ :
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಗುಡ್ಡದ ನೇರಲಕೆರೆ ಹತ್ತಿರವಿರುವ ದಶರಥ ರಾಮೇಶ್ವರ, ದೊಡ್ಡವಜ್ರ ಎಂಬ ಪ್ರದೇಶಕ್ಕೂ ಅಯೋಧ್ಯೆಗೂ ಒಂದು ನಂಟಿದೆ ಎನ್ನುತ್ತದೆ ಪುರಾಣ. ಅಂದು ಅಯೋಧ್ಯೆಯ ಅರಸ ದಶರಥ ಮಹಾರಾಜನು ಪ್ರಜೆಗಳ ರಕ್ಷಣೆಗಾಗಿ ದಕ್ಷಿಣಾಭಿಮುಖವಾಗಿ ಭೇಟೆಗೆ ಬಂದಿದ್ದನು.

ಈ ವೇಳೆ ಶ್ರವಣಕುಮಾರ ಎಂಬ ಯುವಕ, ವಯಸ್ಸಾದ ಅಂಧ ತಂದೆ ತಾಯಿಯನ್ನು ಇಲ್ಲಿಗೆ ಕರೆತಂದಿದ್ದನು. ಆಗ ಬಾಯಾರಿಕೆಯಿಂದ ಕಂಗಾಲಾಗಿದ್ದ ಪೋಷಕರಿಗೆ ನೀರು ತರಲು ಶ್ರವಣಕುಮಾರ ಹೋಗಿದ್ದನು. ಬೇಟೆಯ ಗುಂಗಿನಲ್ಲಿದ್ದ ದಶರಥನು ಶ್ರವಣಕುಮಾರ ನೀರು ತುಂಬಿಕೊಳ್ಳುತ್ತಿದ್ದ ಶಬ್ದ ಆಲಿಸಿ ‘ಶಬ್ದವೇಧಿ ‘ ಎಂಬ ಬಾಣ ಪ್ರಯೋಗ ಮಾಡಿದ್ದರಿಂದ ಶ್ರವಣಕುಮಾರ ಅಲ್ಲಿಯೇ ಹತನಾದನು. ತನ್ನ ತಪ್ಪಿನಿಂದಾದ ಕೃತ್ಯಕ್ಕೆ ಶ್ರವಣಕುಮಾರನ ವೃದ್ಧ ತಂದೆ ತಾಯಿಯ ಬಳಿಗೆ ತೆರಳುವ ದಶರಥ ಮಹಾರಾಜನು ಕ್ಷಮೆಯಾಚಿಸುತ್ತಾನೆ.

ಕ್ಷಮೆ ಯಾಚಿಸಿದರೂ ಶ್ರವಣ ಕುಮಾರನ ತಂದೆ ತಾಯಿಯು ದಶರಥರಿಗೆ ನೀನು ಸಹ ನಮ್ಮಂತೆ ನಿನ್ನ ವೃದ್ಧಾಪ್ಯದಲ್ಲಿ ನಿನ್ನ ಮಕ್ಕಳಿಂದ ದೂರವಾಗು ಹಾಗೂ ನಿನ್ನ ಮಕ್ಕಳು ಇಲ್ಲದ ಸಮಯದಲ್ಲಿ ನಿನಗೆ ಸಾವು ಬರಲಿ ಎಂದು ಶಾಪ ಕೊಟ್ಟರು. ಆಗ ದಶರಥನು ಪಾಪ ವಿಮೋಚನೆಗಾಗಿ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದನು. ಮುಂದೆ ಶ್ರೀ ರಾಮನು ಇಲ್ಲಿಗೆ ಆಗಮಿಸಿದಾಗ  ಇದೇ ಲಿಂಗವನ್ನು  ಪೂಜಿಸಿದನೆಂಬ ಪ್ರತೀತಿ ಇದೆ. ಇಂದಿಗೂ  ದಶರಥ ರಾಮೇಶ್ವರ ಕ್ಷೇತ್ರದಲ್ಲಿ ಶ್ರವಣಕುಮಾರನ ಹಾಗೂ ಅವನ ತಂದೆ ತಾಯಿಯ ಸಮಾಧಿ ಇದೆ. ದಶರಥನ ಪ್ರಾಚೀನ ವಿಗ್ರಹ (ಉಬ್ಬುಕೆತ್ತನೆ ) ದಶರಥ ಮತ್ತು ರಾಮ ಪೂಜಿಸಿದ ಈಶ್ವರಲಿಂಗ ಹಾಗೂ ವೀರಭದ್ರ ದೇವರ ಶಿಲಾ ವಿಗ್ರಹಗಳಿವೆ. ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ ನಡೆಯುವ ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಕ್ಷೇತ್ರಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಗ್ರಾಮ ದೇವರುಗಳನ್ನು, ಉತ್ಸವಮೂರ್ತಿಗಳನ್ನು ಪುಣ್ಯ ಸ್ನಾನಕ್ಕಾಗಿ, ಹೊಳೆಪೂಜೆಗಾಗಿ ಪ್ರತಿ ವರ್ಷ ಶ್ರದ್ಧಾಭಕ್ತಿಗಳಿಂದ ಕರೆತರುತ್ತಾರೆ .ಇಲ್ಲಿಂದ ಪುಣ್ಯ ಜಲವನ್ನು ದೇವಸ್ಥಾನಗಳಿಗೆ ಶಾಸ್ತ್ರವಾಗಿ ಕೊಂಡೊಯ್ಯುವರು. ದಶರಥರಾಮೇಶ್ವರ ದೇವರ ಉತ್ಸವ ಮೂರ್ತಿಯು ಹತ್ತಿರದ ಗುಡ್ಡದನೇರಲಕೆರೆ ದೇವಸ್ಥಾನದಲ್ಲಿದೆ. ಅದನ್ನು ಜಾತ್ರೆಯ ಕಾಲದಲ್ಲಿ ಕ್ಷೇತ್ರಕ್ಕೆ ಕರೆತರುತ್ತಾರೆ. ದಶರಥರಾಮೇಶ್ವರ ಕ್ಷೇತ್ರವನ್ನು ದೊಡ್ಡವಜ್ರ ಎಂದೂ, ಹಾಲುರಾಮೇಶ್ವರ ಕ್ಷೇತ್ರವನ್ನು ಚಿಕ್ಕ ವಜ್ರವೆಂದೂ  ಜನರು ಕರೆಯುತ್ತಾರೆ. ಜನಪದ ತ್ರಿಪದಿಗಳಲ್ಲಿ ದಶರಥರಾಮೇಶ್ವರ ಕ್ಷೇತ್ರವನ್ನು ದಶರಥ ರಾಮಯ್ಯನ ಹೊಳೆ  ಎಂದಿದ್ದಾರೆ. ಕ್ರಿಸ್ತ ಶಕ 17 ನೇ ಶತಮಾನದ “ಸಿರುಮನ ಸಾಂಗತ್ಯ” ಕೃತಿಗಳಲ್ಲಿ ದಶರಥರಾಮೇಶ್ವರ ಕ್ಷೇತ್ರದ ಗುಡಿಯ ಕಳಶ ಗೋಪುರಗಳು ಅರಣ್ಯ ಮಧ್ಯದಲ್ಲಿ ಹೊಳೆಯುತ್ತಿದ್ದವೆಂಬ ವರ್ಣನೆ ಇದೆ. ಇಲ್ಲಿಗೆ ಬರುವ ಭಕ್ತರು ಹೋಳಿಗೆ ತುಪ್ಪ ಎಡೆಯನ್ನು ಮೊದಲು ಕ್ಷೇತ್ರದ ವಾನರಗಳಿಗೆ ತಿನ್ನಲು ಇಡುತ್ತಾರೆ. ನಂತರ ದೇವರಿಗೆ ಎಡೆ ನೀಡುವ ಪದ್ಧತಿ ಇದೆ.

ಹಾಲುರಾಮೇಶ್ವರ  ಕ್ಷೇತ್ರಕ್ಕೂ ಶ್ರೀರಾಮನ ನಂಟು:
ಹೊಸದುರ್ಗದ ಶ್ರೀ ಹಾಲುರಾಮೇಶ್ವರಕ್ಕೂ ಮತ್ತು ಶ್ರೀರಾಮನಿಗೂ ನಂಟು ಇದೆ ಎನ್ನಲಾಗಿದೆ. ಇದರಿಂದ ಹಾಲು ರಾಮೇಶ್ವರ ದೇವಾಲಯವು ರಾಮಾಯಣ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಕ್ಷೇತ್ರವಾಗಿದೆ. ಇಲ್ಲಿ ರಾಮೇಶ್ವರ ದೇವರಾಗಿದ್ದು, ಇದನ್ನು ದಕ್ಷಿಣ ಕಾಶಿ ಎಂತಲೂ ಕರೆಯುತ್ತಾರೆ. ಇಲ್ಲಿಗೆ ದಿನನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಪ್ರಮುಖವಾಗಿ ಗಂಗಾಮಾತೆಯ ಕೊಳ ಎಂದೂ ಬತ್ತದ ನೀರಿನ ಚಿಲುಮೆಯಾಗಿದೆ. ಭಕ್ತರು ತಮ್ಮ ಮನಸ್ಸಿನಲ್ಲಿ ಬೇಡಿಕೊಂಡಿದ್ದು ನೀರಿನ ಮೂಲಕ ಪ್ರಸಾದ ರೂಪದಲ್ಲಿ ವಸ್ತುಗಳು ತೇಲಿ ಬರುತ್ತವೆ, ಅವರ ನಂಬಿಕೆಗೆ ಸಾಕ್ಷಿಯಾಗುತ್ತದೆ.

ಶ್ರೀರಾಮನು ಇಲ್ಲಿನ ಪ್ರಶಾಂತ ವಾತಾವರಣವನ್ನು ನೋಡಿ ಇಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ಇಲ್ಲೊಂದು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಅದಕ್ಕೆ ರಾಮೇಶ್ವರ ಎಂಬ ಹೆಸರನ್ನು ನೀಡಿದನೆಂಬ ಐತಿಹ್ಯವಿದೆ.

ಶಿವರಾತ್ರಿ ಹಬ್ಬದಲ್ಲಿ  ಶಿವರಾತ್ರಿ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಶ್ರೀ ರಾಮನು ಇಲ್ಲಿನ ಹತ್ತಿರದ ದೊಡ್ಡಘಟ್ಟದ( ಡಿ.ಮಲ್ಲಾಪುರ ) ಶಬರಿವನದ ಬಳಿ ಹಾದು ಹೋಗುವಾಗ ಶ್ರೀ ರಾಮನ ದರ್ಶನಕ್ಕಾಗಿ ಅನೇಕ ವರ್ಷಗಳಿಂದ ಕಾಯುತ್ತಿದ್ದ ಶಬರಿಗೆ ಮೋಕ್ಷವನ್ನು ನೀಡಿದನೆಂದು ಹೇಳಲಾಗುತ್ತದೆ.

ಜಟಂಗಿ ರಾಮೇಶ್ವರಕ್ಕೆ ಭೇಟಿ : ಇದಲ್ಲದೆ ಮತ್ತೊಂದು ಸ್ಥಳಕ್ಕೆ ಶ್ರೀರಾಮ ಭೇಟಿ ನೀಡಿದನು ಎನ್ನಲಾಗುತ್ತಿದೆ.
ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರ ಹೋಬಳಿ ಜಟಂಗಿ ರಾಮೇಶ್ವರ ಬೆಟ್ಟಕ್ಕೆ ಶ್ರೀರಾಮಚಂದ್ರನು ಭೇಟಿ ನೀಡಿದನೆಂಬ ಐತಿಹ್ಯವಿದೆ. ಸೀತಾಮಾತೆಯನ್ನು ಅಪಹರಣ ಮಾಡಿಕೊಂಡು ಪುಷ್ಪಕ ವಿಮಾನದಲ್ಲಿ ಹೋಗುವಾಗ ಅಡ್ಡ ಬರುವ ಜಟಾಯು ಪಕ್ಷಿಯು ರಾವಣನೊಂದಿಗೆ ಹೋರಾಡಿ ರೆಕ್ಕೆ ಕಳೆದುಕೊಂಡು ಈ ಬೆಟ್ಟದ ಮೇಲೆ ಶ್ರೀರಾಮನ ಕಾಯುವಿಕೆಗಾಗಿ ಪ್ರಾಣ ಉಳಿಸಿಕೊಂಡು ಬಿದ್ದಿರುತ್ತದೆ. ಸೀತೆಯನ್ನು ಹುಡುಕುತ್ತಾ ಶ್ರೀರಾಮ ಈ ಮಾರ್ಗದಲ್ಲಿ ಬಂದಾಗ ಗಾಯಗೊಂಡಿದ್ದ ಜಟಾಯು ಪಕ್ಷಿಯು ಸೀತೆಯನ್ನು ಕದ್ದೊಯ್ದ ರಾವಣನ ಬಗ್ಗೆ ತಿಳಿಸಿ ಪ್ರಾಣ ಬಿಡುತ್ತದೆ. ಆಗ ಶ್ರೀರಾಮನು ಈ ಪಕ್ಷಿಗೆ ಸಮಾಧಿಯನ್ನು ಮಾಡಿ ಈ ಜಾಗದಲ್ಲಿ ಒಂದು ಲಿಂಗವನ್ನು ಸ್ಥಾಪಿಸಿ ಅದಕ್ಕೆ ಜಟ್ಟಂಗಿ ರಾಮೇಶ್ವರ ಎಂದು ಹೆಸರು ನೀಡಿದನಂತೆ.
ಆದರೆ ಶ್ರೀ ರಾಮನ್ಯಾಸ ಟ್ರಸ್ಟ್ ನವರು ಇದನ್ನು ಅಧಿಕೃತವಾಗಿ  ಗುರುತಿಸಿಲ್ಲ ಎನ್ನಬಹುದು. ಇದನ್ನು ಹೆಚ್ಚಾಗಿ ಗುರುತಿಸಲು ಮತ್ತಷ್ಟು ಸಂಶೋಧನೆಗಳು, ವೈಜ್ಞಾನಿಕ ಪುರಾವೆಗಳು ಬೇಕಾಗಿವೆ‌ ಎನ್ನಲಾಗುತ್ತಿದೆ.

ಇಡೀ ಕರ್ನಾಟಕದಲ್ಲಿ  ಕ್ರಿ. ಶ.961 ರ ಪ್ರಥಮ ರಾಮಾಯಣ ಕುರಿತಾದ ಶಾಸನವು ಇಲ್ಲಿ ಲಭ್ಯವಿದೆ ಎಂದು ಹಂಪಿ ವಿವಿಯ ಡಾ. ಎಸ್. ವೈ.ಸೋಮಶೇಖರ್ ಹೇಳುತ್ತಾರೆ.

ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಗ್ರಾಮದ ಕರಿಸಿದ್ದೇಶ್ವರ ಸ್ವಾಮಿ ಬೆಟ್ಟದ ರಾಮೇಶ್ವರ ಲಿಂಗ  ಪರಿಚಯ.

ಹೊಳಲ್ಕೆರೆಯಿಂದ 16 ಕಿ.ಮೀ. ನೈರುತ್ಯ ದಿಕ್ಕಿಗೆ ಇರುವ
ರಾಮಗಿರಿ ಗ್ರಾಮದ ಬೆಟ್ಟದ ಮೇಲಿರುವ ಶ್ರೀಕರಿಸಿದ್ದೇಶ್ವರ ಸ್ವಾಮಿ ದೇವಸ್ಥಾನವು ವಿಜಯನಗರ ಶೈಲಿಯಲ್ಲಿ ನಿರ್ಮಾಣವಾಗಿದ್ದು ,ಕ್ರಿಸ್ತಶಕ 14 -15 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ .

ಕ್ರಿ.ಶ.1418 ರ ಹೊತ್ತಿಗೆ ವಿಜಯನಗರ ಅರಸರ ಕಾಲದಲ್ಲಿ ಈ ದೇವಾಲಯಕ್ಕೆ ದಾನದತ್ತಿಗಳನ್ನು ನೀಡಲಾಗಿದೆ.
ಮೂಲತಃ ರಾಮಗಿರಿಯು ಧಾರ್ಮಿಕ ,ಐತಿಹಾಸಿಕ ಮತ್ತು ಶಾಸನಸ್ಥ ಸ್ಥಳವಾಗಿದೆ.

ಈ ಗ್ರಾಮದಲ್ಲಿರುವ ಗಿರಿಯಲ್ಲಿ( ಬೆಟ್ಟದಲ್ಲಿ) ಹಿಂದೆ ರಾಮಾಯಣ ಕಾಲದಲ್ಲಿ ಶ್ರೀರಾಮನು ಕೆಲಕಾಲ ತಂಗಿದ್ದು, ಇಲ್ಲೊಂದು ಲಿಂಗವನ್ನು ಪ್ರತಿಷ್ಠಾಪಿಸಿದ ಬಗ್ಗೆ ಐತಿಹ್ಯವಿದೆ. ಶ್ರೀರಾಮನು ಕೆಲಕಾಲ ನಿಂತ ಕಾರಣಕ್ಕೆ,
ರಾಮನು ನೆಲೆಸಿದ ಗಿರಿಯಾದ್ದರಿಂದ ಈ ಊರಿನ ಹೆಸರು ರಾಮಗಿರಿ ಆಗಿದೆ ಎಂದು ಹೇಳಲಾಗುತ್ತದೆ.

ಶ್ರೀರಾಮನು ಪ್ರತಿಷ್ಠಾಪಿಸಿದ ಲಿಂಗವು ಶ್ರೀರಾಮೇಶ್ವರ ಲಿಂಗವೆಂದೇ ಹೆಸರಾಗಿದೆ. ಬೆಟ್ಟದ ಮೇಲ್ಭಾಗದ  ದೇವಾಲಯದ ಒಳಗಡೆ ಬಾವಿ ಇದ್ದು ಇದನ್ನು ಶ್ರೀರಾಮನು ತನ್ನ ಬಾಣವನ್ನು ಬಿಟ್ಟು ನೀರನ್ನು ಚಿಮ್ಮಿಸಿದನೆಂದು ಹೇಳಲಾಗುತ್ತದೆ. ಈ ಬಾವಿಯ ನೀರು ಬರಗಾಲದಲ್ಲಿ ಮೇಲಕ್ಕೆ ಬರುತ್ತದೆ ಹಾಗೂ ಉತ್ತಮ ಮಳೆಯಾದ ವರ್ಷದಲ್ಲಿ ನೀರು ತಳಭಾಗಕ್ಕೆ ತಲುಪುತ್ತದೆ. ಶ್ರೀರಾಮ ನ್ಯಾಸ ಟ್ರಸ್ಟ್ ನವರು ಬೋರ್ಡ್ ಹಾಗೂ ರಾಮನು ನಡೆದಾಡಿದ ಭಾರತೀಯ ಜಾಗಗಳ ನಕ್ಷೆಯನ್ನು ಇಲ್ಲಿ ಅಳವಡಿಸಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ಹೊನವಳ್ಳಿಯ ಶ್ರೀ ಕರಿಸಿದ್ದೇಶ್ವರ ಎಂಬ ಯತಿಗಳು( ಶಿವಶರಣರು) 16ನೇ ಶತಮಾನದಲ್ಲಿ ಇಲ್ಲಿಗೆ ಬಂದು ನೆಲೆನಿಂತು ಲಿಂಗೈಕ್ಯರಾದರು. ಅವರ ಗದ್ದುಗೆ ಬೆಟ್ಟದ ಮೇಲೆ ಮಂದಿರದ ಪಕ್ಕದಲ್ಲಿ ಇದೆ. ಇದು ಹಿಂದೆ ರಾಮಲಿಂಗದೇವರ ಬೆಟ್ಟವಾಗಿದ್ದು ಮುಂದೆ ಶರಣರ ಗದ್ದುಗೆ ನಿರ್ಮಾಣವಾದ ಬಳಿಕ ಶ್ರೀ ಕರಿಸಿದ್ದೇಶ್ವರ ಸ್ವಾಮಿ ಕ್ಷೇತ್ರವಾಯಿತು.

ವಿಶೇಷ ಲೇಖನ : ಡಾ. ಕೆ.ವಿ. ಸಂತೋಷ್ ,              ದಂತ ವೈದ್ಯರು, ಚಿತ್ರದುರ್ಗ, ಮೊ : 9342466936

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಪೋಸ್ಟ್ ಹಾಕಿ ಕಮೆಂಟ್ ಆಫ್ ಮಾಡಿದ ಪ್ರಜ್ವಲ್ ರೇವಣ್ಣ..!

ಬೆಂಗಳೂರು: ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಸೀದಾ ಜರ್ಮನಿ ಪ್ರವಾಸಕ್ಕೆ ಹೊರಟಿದ್ದರು. ವಿಚಾರ ದೊಡ್ಡದಾದ ಕೂಡಲೇ ಎಚ್ಚೆತ್ತ ರಾಜ್ಯ ಸರ್ಕಾರ, ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು. ಎಸ್ಐಟಿ

ಹೆಚ್ಚಾದ ಬಿಸಿಲು ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ರಕ್ಷಿಸಿಕೊಳ್ಳಿ : ವಿ.ಎ.ಪ್ರಕಾಶ್‍ರೆಡ್ಡಿ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 01 : ಈ ವರ್ಷದ ಬೇಸಿಗೆ ಬಿಸಿಲು ಅತಿಯಾಗಿರುವುದರಿಂದ ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ಬೆಳಿಗ್ಗೆ ಆರು

ಪ್ರಜ್ವಲ್ ಹಾಗೂ ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ : ಗೀತಾ ನಂದಿನಿಗೌಡ ಒತ್ತಾಯ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 01 : ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ

error: Content is protected !!