ಚಿತ್ರದುರ್ಗ ಜಿಲ್ಲೆಯಲ್ಲಿ 1152 ಶಾಲೆಗಳನ್ನು ಮುಚ್ಚಲು ಪಟ್ಟಿ ಸಿದ್ದ : ಎಐಡಿಎಸ್ಓ ಪ್ರತಿಭಟನೆ…!

3 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 26 : ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ರಾಜ್ಯ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಇಂದು ನಗರದ ಡಿಸಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್ಓ ರಾಜ್ಯ ಕಛೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರು ಅವರು ಮಾತನಾಡಿದರು. ರಾಜ್ಯದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸರ್ಕಾರವು ಹೇಳುತ್ತಿದೆ. ಆದರೆ ಸರ್ಕಾರದ ದಾಖಲೆಗಳೇ ಹೇಳುವಂತೆ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಗ್ರಾಮ ಪಂಚಾಯಿತಿಗೆ ಒಂದರಂತೆ ರಾಜ್ಯದಲ್ಲಿ 6,000 ಕೆಪಿಎಸ್ ಮ್ಯಾಗ್ನೆಟ್ ಶಾಲೆಯನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರವು ಹೊಂದಿದೆ. ಮೊದಲ ಹಂತದಲ್ಲಿ ರಾಜ್ಯದ 1000 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳೆಂದು ಗುರುತಿಸಲಾಗಿದೆ.

ಕೇವಲ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 1152 ಶಾಲೆಗಳನ್ನು ಮುಚ್ಚಲು ಪಟ್ಟಿ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಸಮುದ್ರ  ಗೊಲ್ಲರಹಟ್ಟಿಗೆ ಹರಳಿಕಟ್ಟೆ, ಈಸಮುದ್ರ, ಪಮರಹಳ್ಳಿ, ಕೊಡಿರಂಗವನಹಳ್ಳಿ ಹೊಸಹಟ್ಟಿ, ಹೆಗಡೆಹಾಳ್ , ಸುಲ್ತಾನಿಪುರ ಸೇರಿದಂತೆ 7 ಸರ್ಕಾರಿ ಪ್ರಾಥಮಿಕ ಶಾಲೆಗಳು ವಿಲೀನ‌.  ಬ್ಯಾಲಹಾಳ್ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಹಿರೆಕಬ್ಬಿಗೇರಿ ಗೊಲ್ಲರಹಟ್ಟಿ, ಮಲೆನಹಳ್ಳಿ, ಕಲ್ಕುಂಟೆ , ಬಸವನಶಿವನಕೇರಿ, ಬಲಿಗಟ್ಟೆ, ಚಿಕ್ಕಬ್ಬಿಗೇರಿ ಗೊಲ್ಲರಹಟ್ಟಿ 7 ಶಾಲೆಗಳು, ಸಿರಿಗೆರೆ ಶಾಲೆಗೆ ಎಂಟು ಶಾಲೆಗಳು, ಬಹದ್ದೂರ್ ಗಟ್ಟ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 7 ಶಾಲೆಗಳು ವಿಲೀನಗೊಳಿಸುತ್ತಾರೆ. ಇದೇ ರೀತಿ ಜಿಲ್ಲೆಯಾದ್ಯಂತ 1152 ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರವು ಮುಂದಾಗಿದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂಬ ಹೆಸರಲ್ಲಿ ರಾಜ್ಯದ ಜನತೆಯನ್ನು ವಂಚಿಸಿ ಬಡ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಸಿದುಕೊಳ್ಳುವ ಸರ್ಕಾರದ ಘೋರ ಹುನ್ನಾರ ಇದಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದುವರಿದು, ಈ ಯೋಜನೆಯನ್ನು Pilot project ಅಡಿ ಜಾರಿಗೊಳಿಸಲು ರಾಮನಗರದ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಯೆಂದು ಗುರುತಿಸಲಾಗಿದೆ. ಹೊಂಗನೂರಿನಿಂದ 6 ಕಿಮೀ ವ್ಯಾಪ್ತಿಯೊಳಗಿರುವ ಶಾಲೆಗಳನ್ನು ಹೊಂಗನೂರಿನ  KPSಗೆ  ತುರ್ತಾಗಿ  ವಿಲೀನಗೊಳಿಸಿ ಕ್ರಮಕೈಗೊಳ್ಳಲು ಆದೇಶ ನೀಡಲಾಗಿದೆ. ತತ್ಪರಿಣಾಮ, ಯಾವುದೇ ಕಾರಣಕ್ಕೂ ತಮ್ಮ ಊರಿನ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ ಮತ್ತು ಅದೇ ಶಾಲೆಗಳನ್ನು ಅಭಿವೃದ್ಧಿಪಡಿಸಿ ಊರಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಬೇಕೆಂದು ಸುತ್ತ ಹಳ್ಳಿಗಳ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ. ಇದೇ ರೀತಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಡಿ ರಾಜ್ಯದ 40,000ಕ್ಕೂ ಅಧಿಕ ಶಾಲೆಗಳು ವಿಲೀನಗೊಳ್ಳುತ್ತವೆ. ಸಮುದಾಯ, ಹಳ್ಳಿಗಳ ನಡುವಿನ ಶಾಲೆ ಊರು ದಾಟಿ ಪಕ್ಕದೂರಿಗೆ ಹೋಗುತ್ತದೆ. ಎಂದು ಹೇಳಿದರು.

ಅಷ್ಟೇ ಅಲ್ಲದೆ, ವಿಲೀನದ ನೆಪದಲ್ಲಿ ಮುಚ್ಚುವ ಶಾಲಾ ಕಟ್ಟಡಗಳನ್ನು ಇತರ ಕೆಲಸಗಳಿಗೆ ವಿನಿಯೋಗಿಸಲು ಸರ್ಕಾರವು ಮುಂದಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಮಸೂದೆ ಮಂಡಿಸುವುದಾಗಿ ಹೇಳಿದೆ. ಪ್ರತಿಷ್ಠಿತ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಸರ್ಕಾರಿ ಶಾಲಾ ಕಟ್ಟಡಗಳನ್ನು ಸ್ವಸಹಾಯ ಗುಂಪುಗಳಿಗೆ ನೀಡಲಾಗುವುದೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಒಂದೇ ಒಂದು ಶಾಲೆಯನ್ನು ಮುಚ್ಚದಿದ್ದ ಮೇಲೆ ಸರ್ಕಾರಿ ಶಾಲೆಗಳನ್ನು ಬೇರೆ ಉದ್ದೇಶಕ್ಕೆ ವಿನಿಯೋಗಿಸುವ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ?

ಈ ದೇಶದಲ್ಲಿ ಶಿಕ್ಷಣಕ್ಕಾಗಿ ಧ್ವನಿಯೆತ್ತಿದ ಮಹಾನ್ ನವೋದಯ ಚಿಂತಕರಾದ ಈಶ್ವರ್ ಚಂದ್ರ ವಿದ್ಯಾಸಾಗರ್, ಜ್ಯೋತಿರಾವ್ ಪುಲೆ, ಸಾವಿತ್ರಿಬಾಯಿ ಫುಲೆ  ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳಾದ ಭಗತ್ ಸಿಂಗ್- ನೇತಾಜಿ ಸುಭಾಷ್ ಚಂದ್ರ ಬೋಸ್, ನಮ್ಮ ನಾಡಿನ ಕುವೆಂಪು, ಕುದ್ಮುಲ್ ರಂಗರಾವ್, ಪಂಡಿತ್ ತಾರಾನಾಥ್ ಮುಂತಾದ ಮಹನೀಯರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರವು ಶಿಕ್ಷಣದ ಮೇಲೆ ಪ್ರಹಾರ ನಡೆಸಿದೆ. ಇದರ ವಿರುದ್ಧ ಪ್ರಬಲ ಹೋರಾಟವನ್ನು ಬೆಳೆಸಲು ಮತ್ತು ಎಲ್ಲ ರೀತಿಯ ತ್ಯಾಗಕ್ಕೆ ಸಿದ್ದರಾಗಲು ನಾಡಿನ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಗೂ ಶಿಕ್ಷಣ ಪ್ರೇಮಿ ಜನತೆಗೆ ಸರ್ಕಾರವು ಸವಾಲು ಎಸಗಿದೆ. ಇತಿಹಾಸದ ಎಲ್ಲ ಮಹಾನ್ ವ್ಯಕ್ತಿಗಳ ಕರೆಗೆ ಓಗೊಟ್ಟು ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟಕ್ಕೆ ಮುಂದಾಗುವಂತೆ ಕರೆ ನೀಡಿದರು.

ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಐಡಿಎಸ್ಓ ಜಿಲ್ಲಾ ಸಂಚಾಲಕ ಕೆ.ಈರಣ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ನಿಖಿಲ್, ಭರತ್, ಶಂಕರ್, ವೀರೇಶ್,  ಪ್ರದೀಪ್, ಮಗದೀರ್, ಹೇಮಂತ್ ಹಾಗು ಇನ್ನಿತರರು ಭಾಗವಹಿಸಿದ್ದರು.

Share This Article