Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಾರ್ವಜನಿಕರ ದೂರುಗಳಿಗೆ ತಕ್ಷಣದ ಪರಿಹಾರ: ರಾಜ್ಯದಲ್ಲಿ ‘ಪ್ರಜಾಸೇವೆ ಇಲಾಖೆ ಸ್ಥಾಪನೆ : ಸಿಎಂ ಡಿಕೆಶಿ ಘೋಷಣೆ

---Advertisement---

ಚಿತ್ರದುರ್ಗ. ಜು.25: ರಾಜ್ಯದಲ್ಲಿ ಜನಕೇಂದ್ರೀಯ ಆಡಳಿತ ತರಲು ‘ಪ್ರಜಾಸೇವೆ ಇಲಾಖೆ’ ಎಂಬ ನೂತನ ಇಲಾಖೆಯನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದ ಪ್ರಸಿದ್ಧ ಮುರುಘಾ ಮಠದ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಬೆಂಗಳೂರು ವಿಭಾಗ ಮಟ್ಟದ ಪರಿಶೀಲನಾ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ಜನರ ಆಶೀರ್ವಾದದಿಂದ ಈ ಹುದ್ದೆಗೆ ಬಂದ ನಂತರ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಗೆ ಒಂದು ಹೊಸ ರೂಪ ನೀಡಲು ಹಲವು ಮುಖ್ಯ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಆ ಪೈಕಿ ‘ಪ್ರಜಾಸೇವೆ ಇಲಾಖೆ’ಯ ಸ್ಥಾಪನೆ ಅತ್ಯಂತ ಪ್ರಮುಖವಾದದ್ದು” ಎಂದರು.

​ಜನರ ಬಳಿಗೇ ಸರ್ಕಾರ: ಸಾರ್ವಜನಿಕರ ಕುಂದುಕೊರತೆಗಳು ಮತ್ತು ಅಹವಾಲುಗಳನ್ನು ನೇರವಾಗಿ ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ತಕ್ಷಣವೇ ಪರಿಹಾರ ಒದಗಿಸುವುದು ಈ ಇಲಾಖೆಯ ಮುಖ್ಯ ಉದ್ದೇಶ.

ಸಚಿವರ ಪ್ರವಾಸ: ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರುಗಳು ಕಡ್ಡಾಯವಾಗಿ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.

ತಳಮಟ್ಟದಲ್ಲಿ ಸಭೆಗಳು: ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಹೋಬಳಿ, ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು.

ಕಟ್ಟುನಿಟ್ಟಿನ ಕ್ರಮ: ಸ್ವೀಕೃತವಾಗುವ ಪ್ರತಿಯೊಂದು ಅರ್ಜಿಗೂ ನಿಗದಿತ ನಮೂನೆಯಲ್ಲಿ ಆಡಳಿತಾತ್ಮಕವಾಗಿ ಕ್ರಮ ಕೈಗೊಂಡು, ಕೊನೆಯ ಹಂತದವರೆಗೂ ಅರ್ಜಿದಾರರಿಗೆ ಸೂಕ್ತ ನ್ಯಾಯ ಸಿಗುವಂತೆ ನೋಡಿಕೊಳ್ಳಲಾಗುವುದು.
​ಮುಂದಿನ ವಾರ ಸಂಪುಟ ವಿಸ್ತರಣೆಯ ಸೂಚನೆ ನೀಡಿದ ಮುಖ್ಯಮಂತ್ರಿಗಳು, ತದನಂತರ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಜನಪ್ರತಿನಿಧಿಗಳನ್ನು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರವಾಸ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಪ್ರತಿಯೊಂದು ಕ್ಷೇತ್ರಕ್ಕೂ ಸಚಿವರು ಭೇಟಿ ನೀಡಿದ ನಂತರ, ಎರಡನೇ ಹಂತದಲ್ಲಿ ಹೋಬಳಿ ಮಟ್ಟಕ್ಕೂ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸ್ಪಷ್ಟ ಮಾರ್ಗದರ್ಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್ ಹೇಳಿದರು.

ಕುಡಿಯುವ ನೀರು ಹಾಗೂ ಬರ ಪರಿಹಾರಕ್ಕೆ ಮೊದಲ ಆದ್ಯತೆ :

ಬೆಂಗಳೂರು ವಿಭಾಗದ ಸಭೆಗಳನ್ನು ರಾಜಧಾನಿಯಲ್ಲೇ ನಡೆಸಬಹುದಾಗಿದ್ದರೂ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲ್ಲಿಗೆ ಬಂದು ಸಭೆ ನಡೆಸಲಾಗುತ್ತಿದೆ.

​ಸಭೆಗೆ ಮುನ್ನ ಹಲವು ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಹಾಗೂ ರೈತರ ಸ್ಥಿತಿಗತಿಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿರುವುದಾಗಿ ತಿಳಿಸಿದ ಮುಖ್ಯಮಂತ್ರಿ ಅವರು, “ಜಿಲ್ಲಾಡಳಿತದ ಬಳಿ ಸಾಕಷ್ಟು ಅನುದಾನ ಲಭ್ಯವಿದೆ. ಬೆಳಗಾವಿ ಅಧಿವೇಶನದಲ್ಲಿ ತೆಗೆದುಕೊಂಡ ಐತಿಹಾಸಿಕ ತೀರ್ಮಾನದಂತೆ, ಬರ ಪರಿಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಸಕರ ಅಧ್ಯಕ್ಷತೆಯ ಸಭೆಗಳಲ್ಲಿ ರೂ.1 ಕೋಟಿವರೆಗೆ ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗಿದೆ” ಎಂದು ವಿವರಿಸಿದರು.

​ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಕೊಳವೆಬಾವಿಗಳ ದುರಸ್ತಿಗೆ ಆದ್ಯತೆ ನೀಡಬೇಕು. ಹೊಸದಾಗಿ ಕೊಳವೆಬಾವಿ ಕೊರೆಯುವಾಗ ದುರುಪಯೋಗ ತಡೆಯಲು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು ‘ಜಿಪಿಎಸ್’ (GPS) ಟ್ರ್ಯಾಕಿಂಗ್ ಕಡ್ಡಾಯಗೊಳಿಸಲಾಗಿದೆ. ಶಾಸಕರು ಕೂಡ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಗ್ರಾಮೀಣ ಪ್ರದೇಶದ ಜನರ ಬದುಕಿನ ಸುಧಾರಣೆ ಮತ್ತು ಸಮಸ್ಯೆಗಳ ಪರಿಹಾರವೇ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದರು. ರಾಜ್ಯದಲ್ಲಿ ಎದುರಾಗಿರುವ ಭೀಕರ ಬರದ ಛಾಯೆಯನ್ನು ತಡೆದು, ಜನರಿಗೆ ನೆರವಾಗಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಿಬಿ ಜಿ ರಾಮ್ ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದ್ದು, ರಾಜ್ಯ ಸರ್ಕಾರವು ಅದಕ್ಕಾಗಿ ಶೇಕಡಾ 40 ರಷ್ಟು ಅನುದಾನ ಭರಿಸುತ್ತಿದೆ. ಎಷ್ಟೇ ಆರ್ಥಿಕ ಅಭಾವವಿದ್ದರೂ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

​ಇದೇ ವೇಳೆ ಗೃಹಲಕ್ಷ್ಮಿ ಹಾಗೂ ವಿದ್ಯುತ್ ಸೌಲಭ್ಯಗಳಂತಹ ಗ್ಯಾರಂಟಿ ಯೋಜನೆಗಳಲ್ಲಿ ಕಂಡುಬರುತ್ತಿರುವ ದುರುಪಯೋಗ, ತಾಂತ್ರಿಕ ಲೋಪ ಹಾಗೂ ಖಾತೆಗಳ ಗೊಂದಲಗಳನ್ನು ತಡೆಗಟ್ಟಲು ಸೂಕ್ತ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಅಲ್ಲದೆ, ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಸಿಎಸ್‌ಆರ್ (CSR) ನಿಧಿಯನ್ನು ಸರಿಯಾಗಿ ಬಳಸಿ, ಮಾದರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

​ಆಲಮಟ್ಟಿ ಭಾಗವನ್ನು ಹೊರತುಪಡಿಸಿ ರಾಜ್ಯದ ಉಳಿದೆಡೆ ತೀವ್ರ ನೀರಿನ ಅಭಾವ ಉಂಟಾಗಿದ್ದು, ಜನರಲ್ಲಿ ವಿಶ್ವಾಸ ಮೂಡಿಸುವ ರೀತಿಯಲ್ಲಿ ಅಧಿಕಾರಿಗಳು ಹಾಗೂ ಶಾಸಕರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ರಾಜ್ಯದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಮತ್ತು ವಿವಿಧ ಪ್ರಾದೇಶಿಕ ವಿಚಾರಗಳ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ಪ್ರಧಾನಮಂತ್ರಿ ಹಾಗೂ ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಪರಿಸ್ಥಿತಿ ಪರಿಶೀಲಿಸಲು ಶೀಘ್ರದಲ್ಲೇ ಕೇಂದ್ರದ ತಂಡ ಆಗಮಿಸುವ ಸಾಧ್ಯತೆಯಿದೆ ಎಂದರು.

​ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ ಡಿ.ಕೆ. ಶಿವಕುಮಾರ್, ಆರ್‌ಒ (RO) ಪ್ಲಾಂಟ್‌ಗಳ ದುರಸ್ತಿಗೆ ಅನುದಾನದ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು. ಕೆಟ್ಟಿರುವ ಆರ್‌ಒ ಪ್ಲಾಂಟ್‌ಗಳ ದುರಸ್ತಿಗೆ ನಿಯಮಾನುಸಾರ ವಿಚಕ್ಷಣಾ ಫಂಡ್ ಬಳಸಲು ಸಾರಿಗೆ ಕಮಿಷನರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದರು.

​ರೈತರ ಹಿತರಕ್ಷಣೆ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಅಧಿಕಾರಿಗಳು ಹಾಗೂ ಸಮಿತಿಗಳು ನೀಡುವ ಮಾರ್ಗದರ್ಶನದಂತೆಯೇ ರೈತರು ಬೆಳೆಗಳನ್ನು ಬೆಳೆಯಬೇಕು. ಸರ್ಕಾರದ ಸೂಚನೆಗಳನ್ನು ಮೀರಿ ಬೆಳೆ ಬೆಳೆದು ಆನಂತರ ಒತ್ತಡ ಹೇರಿದರೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಕಾವೇರಿ ನೀರು ನಿರ್ವಹಣಾ ಸಮಿತಿಯು ನೀರು ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿರುವುದರಿಂದ ಲಭ್ಯವಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಆಗಸ್ಟ್ ತಿಂಗಳಲ್ಲಿ ಶಾಸನ ಸಭೆಯನ್ನು ಕರೆಯಲು ಅಥವಾ ಸೂಕ್ತ ದಿನಾಂಕವನ್ನು ನಿಗದಿಪಡಿಸಲು ಈಗಾಗಲೇ ರಾಜ್ಯಪಾಲರ ಕಚೇರಿಗೆ ಮಾಹಿತಿ ನೀಡಲಾಗಿದೆ. ಶೀಘ್ರದಲ್ಲೇ ದಿನಾಂಕ ತೀರ್ಮಾನವಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ವೇಳೆ ತಿಳಿಸಿದರು.

ಎಸ್‌ಐಆರ್ (SIR) ಕಾರಣದಿಂದಾಗಿ ಸಭೆಯನ್ನು ಮುಂದೂಡಬೇಕಾದ ಪರಿಸ್ಥಿತಿ ಎದುರಾಗಿತ್ತು, ಆದರೆ ಈಗ ಆ ಪ್ರಕ್ರಿಯೆ ಒಂದು ಹಂತಕ್ಕೆ ಬಂದಿದೆ ಎಂದರು.

​ಸಭೆಯಲ್ಲಿ ಶಾಸಕರು ಮುಕ್ತ ಮನಸ್ಸಿನಿಂದ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.

ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಹೀಗಾಗಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವುದು ಮತ್ತು ಬರ ಪರಿಹಾರ ಯೋಜನೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ನೀರಿನ ಅಭಾವ ಎದುರಿಸಲು ಜಿಲ್ಲಾಧಿಕಾರಿಗಳ ಬಳಿ ಅಗತ್ಯ ಅನುದಾನವಿದ್ದು, ಅಗತ್ಯ ಬಿದ್ದಲ್ಲಿ ಹೆಚ್ಚಿನ ಅನುದಾನ ನೀಡಲು ಸರ್ಕಾರ ಸಿದ್ಧವಿದೆ.

ಕಂದಾಯ, ಗ್ರಾಮೀಣ ಅಭಿವೃದ್ಧಿ (RDPR), ನೀರಾವರಿ ಹಾಗೂ ಆಹಾರ ಇಲಾಖೆಗಳು ‘ಟೀಮ್ ಕರ್ನಾಟಕ’ ಮಾದರಿಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಮುಖ್ಯಮಂತ್ರಿ ನಿರ್ದೇಶಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now