ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 20 : ಹಿರಿಯ ಸಾಹಿತಿ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪನವರ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಒನಕೆ ಓಬವ್ವ ವೃತ್ತದಲ್ಲಿ ಶನಿವಾರ ನುಡಿನಮನ ಸಲ್ಲಿಸಲಾಯಿತು.
sಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಒನಕೆ ಓಬವ್ವ ವೃತ್ತದಲ್ಲಿ ಪಾರ್ಥಿವ ಶರೀರವನ್ನಿರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.


ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ನುಡಿ ನಮನದಲ್ಲಿ ಪಾಲ್ಗೊಂಡು ಮಾತನಾಡುತ್ತ ಜಿ.ಎಸ್.ಉಜ್ಜಿನಪ್ಪನವರು ಪತ್ರಕರ್ತರಾಗಿ ಇಡಿ ಜೀವನವನ್ನು ಸಮಾಜದಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸಕ್ಕೆ ಮುಡುಪಾಗಿಟ್ಟಿದ್ದರು. ಅವರ ನಿಧನ ಅಪಾರ ನೋವುಂಟು ಮಾಡಿದೆ. ಅವರ ಬರವಣಿಗೆ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ನಾವುಗಳು ಎಚ್ಚೆತ್ತುಕೊಂಡು ಸಮಸ್ಯೆಗಳ ಪರಿಹಾರದ ಕಡೆ ಗಮನ ಕೊಡುತ್ತಿದ್ದೇವೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಿ ದುಃಖತಪ್ತ ಕುಟುಂಬಕ್ಕೆ ನೋವು ಮರೆಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಜಯಲಕ್ಷ್ಮಿ ಮಿಲ್‍ನಲ್ಲಿ 35 ವರ್ಷಗಳ ಕಾಲ ಲೇಬರ್ ಆಫೀಸರ್ ಆಗಿ ಕೆಲಸ ಮಾಡಿದ ಜಿ.ಎಸ್.ಉಜ್ಜಿನಪ್ಪನವರು ಸಾಹಿತಿ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದರು. ಕಲೆ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಯಲ್ಲಿ ಸದಾ ಕ್ರಿಯಾಶೀಲರಾಗಿರುತ್ತಿದ್ದರು. ಸ್ನೇಹ ಜೀವಿಯಾಗಿದ್ದ ಅವರು ಸಾರ್ವಜನಿಕರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿದ್ದರು. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿಗಾರರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆಂದು ಕಂಬನಿ ಮಿಡಿದರು.
ಕಬೀರಾನಂದಾಶ್ರಮದ ಶಿಲಿಂಗಾನಂದಸ್ವಾಮಿ ಮಾತನಾಡುತ್ತ ಜಿ.ಎಸ್.ಉಜ್ಜಿನಪ್ಪ ನಮ್ಮ ಮಠದ ಜೊತೆ ಉತ್ತಮ ಸಂಪರ್ಕವಿಟ್ಟುಕೊಂಡಿದ್ದರು. ಪ್ರತಿ ವರ್ಷವೂ ನಡೆಯುವ ಮಹಾಶಿವರಾತ್ರಿ ಮಹೋತ್ಸವದಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಪಂಚ ಪೀಠಗಳ ಬಗ್ಗೆ ಮಾತನಾಡುತ್ತಿದ್ದರು. ಪತ್ರಕರ್ತ, ಸಾಹಿತಿಯೆಂದು ಎಂದಿಗೂ ಬೀಗಿದವರಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವಿಸಿದರು. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ ಮೂರ್ನಾಲ್ಕು ದಶಕಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಜಿ.ಎಸ್.ಉಜ್ಜಿನಪ್ಪ ನಿಷ್ಟುರವಾದಿಯಾಗಿದ್ದರು. ತಮಗೆ ಅನಿಸಿದ್ದನ್ನು ನೇರವಾಗಿ ಮಾತನಾಡುವ ಸ್ವಭಾವ ಅವರದು. ಅನ್ಯಾಯ, ಶೋಷಣೆ, ದಬ್ಬಾಳಿಕೆಯನ್ನು ಕಂಡರೆ ಸಹಿಸುತ್ತಿರಲಿಲ್ಲ. ಪ್ರತಿಭಟಿಸುತ್ತಿದ್ದರು. ಆದರ್ಶ ಜೀವನ ಅವರದು. ಒಳ್ಳೆಯ ಹಾಡುಗಾರರಾಗಿದ್ದರು. ಅವರ ಅಗಲಿಕೆ ಕೇವಲ ಚಿತ್ರದುರ್ಗಕ್ಕಷ್ಟೆ ಅಲ್ಲ. ನಾಡಿಗೆ ನಷ್ಟವುಂಟಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡುತ್ತ ಜಿ.ಎಸ್.ಉಜ್ಜಿನಪ್ಪನವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರ ಅಗಲಿಕೆ ಹಿರಿಯ ಕೊಂಡಿಯನ್ನು ಕಳಚಿದಂತಾಗಿದೆ. ಅವರ ಅನೇಕ ಪುಸ್ತಕಗಳನ್ನು ಓದಿದ್ದೇನೆ. ಅಪಾರ ವಿದ್ವತ್ತಿತ್ತು. ಸಾಹಿತ್ಯ ಲೋಕದ ಹಿರಿಯ ಚೇತನರಾಗಿದ್ದ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪನವರು ಮಾತನಾಡಿ ಹಿರಿಯ ಆತ್ಮೀಯರು, ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇವೆ. ಅವರಲ್ಲಿ ಜೀವನೋತ್ಸಾಹವಿತ್ತು. ಒಳ್ಳೆಯ ಹಾಡುಗಾರ, ಮಾತುಗಾರ, ಎಲ್ಲದಕ್ಕಿಂತ ಮಿಗಿಲಾಗಿ ಒಳ್ಳೆಯ ಮನುಷ್ಯರಾಗಿದ್ದ ಜಿ.ಎಸ್.ಉಜ್ಜಿನಪ್ಪನವರ ಸಾವು ನಮಗೆಲ್ಲಾ ಅಪಾರ ನೋವು ತಂದಿದೆ. ಆತ್ಮೀಯ ಸ್ವಭಾವದವರಾಗಿದ್ದ ಅವರಿಗೆ ಭಗವಂತ ಶಾಂತಿ ಕರುಣಿಸಲಿ ಎಂದರು.
ಅಪರಾಧಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ.ನಟರಾಜ್ ಮಾತನಾಡುತ್ತ ಅನೇಕ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದ ಜಿ.ಎಸ್.ಉಜ್ಜಿನಪ್ಪನವರ ನಿಧನದಿಂದ ಹಿರಿಯ ಜೀವಿಯನ್ನು ಕಳೆದುಕೊಂಡಿದ್ದೇವೆ. ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಪ್ರೋತ್ಸಾಹಿಸುವ ಗುಣ ಅವರಲ್ಲಿತ್ತು. ಸಾಹಿತ್ಯ, ಕಲೆ, ಸಾಂಸ್ಕøತಿಕ, ಜೀವ ಪರ ಹೋರಾಟಗಳಲ್ಲಿ ಸದಾ ಭಾಗವಹಿಸುತ್ತಿದ್ದರೆಂದು ಸ್ಮರಿಸಿದರು.
ನಿವೃತ್ತ ಪ್ರಾಚಾರ್ಯರಾದ ಜೆ.ಯಾದವರೆಡ್ಡಿ ಮಾತನಾಡಿ ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪನವರ ನಿಧನದಿಂದ ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟವುಂಟಾಗಿದೆ.
ಇಂಗ್ಲಿಷನ್‍ನಲ್ಲಿ ಪಾಂಡಿತ್ಯ ಹೊಂದಿದ್ದರು. ಭಾಷಾ ಪ್ರಭುತ್ವ ಅವರಲ್ಲಿತ್ತು. ಕಳೆದ ಒಂದು ವರ್ಷದ ಹಿಂದೆ ಸಂಗಾತಿಯನ್ನು ಕಳೆದುಕೊಂಡು ಕುಗ್ಗಿದ್ದರು. ಜೀವನದುದ್ದಕ್ಕು ಅನೇಕರಿಗೆ ಮಾದರಿಯಾಗಿ ಬದುಕಿದವರು ಎಂದು ಗುಣಗಾನ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ನಮ್ಮ ಕುಟುಂಬದ ಜೊತೆ ನಿಕಟವಾದ ಸಂಪರ್ಕವಿಟ್ಟುಕೊಂಡಿದ್ದ ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಜಿಲ್ಲೆಯ ಅಭಿವೃದ್ದಿ ಬಗ್ಗೆ ಚರ್ಚಿಸುತ್ತಿದ್ದರು. ಪರಿಸರದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರು. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಕೋರಿದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ ನಮಗೆ ಚಿರಪರಿಚಿತರಾಗಿದ್ದ ಜಿ.ಎಸ್.ಉಜ್ಜಿನಪ್ಪನವರು ಇಪ್ಪತ್ತು ವರ್ಷಗಳ ಕಾಲ ದೊಡ್ಡಪೇಟೆಯಲ್ಲಿದ್ದರು. ಎಲ್ಲರೊಂದಿಗೆ ಒಡನಾಡಿಯಾಗಿದ್ದ ಅವರ ನಿಧನದಿಂದ ಅಪಾರ ನೋವುಂಟಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡುತ್ತ ಬಯಲುಸೀಮೆಯ ಜೀವನ ಚಿತ್ರಿಸುವ ಕಾದಂಬರಿಯನ್ನು ಕೊಡುಗೆಯಾಗಿ ಕೊಟ್ಟ ಹಿರಿಯ ಜೀವಿ
ಜಿ.ಎಸ್.ಉಜ್ಜಿನಪ್ಪನವರ ನಿಧನ ನಮಗಂತೂ ಅತೀವ ನೋವುಂಟಾಗಿದೆ. ಬದುಕೆಂಬ ಮಹಾಪ್ರಸಾದ ಆತ್ಮಕಥನವನ್ನು ಬರೆದರು. ಬದುಕು ಹೇಗೆ ಬರುತ್ತೋ ಹಾಗೆ ಸ್ವೀಕರಿಸಬೇಕೆಂಬ ಛಲ ಅವರಲ್ಲಿತ್ತೆಂದು ತಮ್ಮ ಒಡನಾಟವನ್ನು ಹಂಚಿಕೊಂಡರು.
ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುದೀನ್‍ಕುಮಾರ್ ಡಿ.ಜೆ, ಶಿವಲಿಂಗಪ್ಪ, ರಮಾನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ನಿವೃತ್ತ ಪ್ರಾಚಾರ್ಯರಾದ ಅಶೋಕ್‍ಕುಮಾರ್ ಸಂಗೇನಹಳ್ಳಿ, ಡಿ.ಎನ್.ಮೈಲಾರಪ್ಪ, ನವೀನ್ ಮಸ್ಕಲ್, ಶ್ರೀಮತಿ ಯಶೋಧ ಬಿ.ರಾಜಶೇಖರಪ್ಪ, ತೋಟಗಾರಿಕೆ ಇಲಾಖೆಯ ದೇವರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಹಿರಿಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿನಾಯಕ ತೊಡರನಾಳ್, ಹಿರಿಯ ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ಎಂ.ಜಿ.ಆರ್. ಶ.ಮಂಜುನಾಥ್, ಅಹೋಬಲಪತಿ, ರವಿಕುಮಾರ್, ಕೆ.ಎಂ.ಮುತ್ತುಸ್ವಾಮಿ(ಕಣ್ಣನ್), ದರ್ಶನ್, ಎನ್.ಕುಮಾರ್ ಸೇರಿದಂತೆ ದೃಶ್ಯ ಮಾಧ್ಯಮದವರು, ಅಪಾರ ಅಭಿಮಾನಿಗಳು ಹಾಗೂ ಒಡನಾಡಿಗಳು ನುಡಿನಮನದಲ್ಲಿ ಮೃತರ ಅಂತಿಮ ದರ್ಶನ ಪಡೆದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















