ಚಿತ್ರದುರ್ಗ, (ಜೂ.29) : ಹೊಲಕ್ಕೆ ಹೋಗುವ ಕಾಲುದಾರಿ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಕೊನೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ಲಕ್ಷ್ಮಿ ದೇವರಹಳ್ಳಿ ಗ್ರಾಮದಲ್ಲಿ ಬುಧವಾರ ಇಂತಹುದೊಂದು ದಾರುಣ ಘಟನೆ ನಡೆದಿದೆ.
ಈ ಘಟನೆಯಲ್ಲಿ ಪಾಲಕ್ಷಮ್ಮ (40) ಎಂಬ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು,ಆಕೆಯ ಪತಿ ಪ್ರಸನ್ನ (46) ಮಾರಣಾಂತಿಕ ಹಲ್ಲೆಗೊಳಗಾಗಿ ಎರಡು ಕೈಗಳನ್ನು ಮುರಿದುಕೊಂಡು ಗಂಭೀರವಾಗಿ ಗಾಯಗೊಂಡಿದ್ದಾನೆ.
ಗ್ರಾಮದಲ್ಲಿ ಪ್ರಸನ್ನ ಮತ್ತು ಪಾಲಾಕ್ಷಮ್ಮ ಅವರಿಗೆ ಸೇರಿದ ಕೃಷಿ ಜಮೀನಿನ ಮೂಲಕ ಮುಂದಿನ ಹೊಲದವರು ಇವರ ಹೊಲದ ಮೂಲಕ ಹಾದು ಹೋಗಬೇಕಿತ್ತು. ಈ ವಿಚಾರವಾಗಿ ರಾಜಣ್ಣ ಎಂಬುವವರೊಂದಿಗೆ ಕಳೆದ ಕೆಲವು ದಿನಗಳಿಂದ ಪದೇಪದೇ ಜಗಳವಾಗುತ್ತಿತ್ತು. ಈ ವಿಚಾರವಾಗಿ
ಕಳೆದ ನಾಲ್ಕೈದು ತಿಂಗಳಿಂದ ಜಮೀನಿನಲ್ಲಿ ಹಾದು ಹೋಗಿರುವ ಕಾಲು ದಾರಿಯೂ ನಮಗೆ ಸೇರಿದ್ದು, ಅದರಲ್ಲಿ ಯಾರು ಓಡಾಡಕೂಡದು ಎಂದು ಪ್ರಸನ್ನ ಹಾಗೂ ಪತ್ನಿ ಪಾಲಾಕ್ಷಮ್ಮ ಪದೇ ಪದೇ ತಕರಾರು ತೆಗೆಯುತ್ತಿದ್ದರು. ಗಲಾಟೆ ದೊಡ್ಡದಾಗಿ ಪಾಲಾಕ್ಷಮ್ಮ ರಾಜಣ್ಣ ಮತ್ತು ಇತರರ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಆದರೆ ಬುಧವಾರ ಪ್ರಸನ್ನ ಹಾಗೂ ಪಾಲಾಕ್ಷಮ್ಮ ವಿವಾದಕ್ಕೆ ಕಾರಣವಾಗಿದ್ದ ಅದೇ ಕಾಲುದಾರಿಯಲ್ಲಿ ಬೇರೆಯವರು ಓಡಾಡದಂತೆ ತೆಂಗಿನ ಸಸಿ ನೀಡುತ್ತಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ರಾಜಣ್ಣ ಹಾಗೂ ಇನ್ನಿತರರ ನಡುವೆ ಗಲಾಟೆ ಜೋರಾಗಿದೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ರಾಜಣ್ಣ ಮತ್ತಿತರರು ಪ್ರಸನ್ನ ಹಾಗೂ ಪಾಲಾಕ್ಷಮ್ಮ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಪಾಲಾಕ್ಷಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಆಕೆಯ ಪತಿ ಪ್ರಸನ್ನ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರು ಭೇಟಿ ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.