ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿ ಏನಾಗಬಹುದು ಎಂಬತ್ತ ಎಲ್ಲರ ಚಿತ್ತ ಇದೆ. ಸಂಪುಟ ಪುನರ್ ರಚನೆಯಾಗುತ್ತೆ, ಅದು ಸಹಜ ಎಂಬಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಸಿಎಂ ಬದಲಾವಣೆಯ ವಿಚಾರದ ಬಗ್ಗೆಯೇ ಎಲ್ಲರ ಕುತೂಹಲ ಹೆಚ್ಚಾಗಿದೆ. ಈ ಬೆನ್ನಲ್ಲೆ ಸಚಿವ ಕೃಷ್ಣ ಭೈರೇಗೌಡ ಅವರ ಹೇಳಿಕೆ ಅಶ್ಚರ್ಯವನ್ನುಂಟು ಮಾಡಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಕೃಷ್ಣ ಭೈರೇಗೌಡ ಅವರು, ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂಬ ಮಾತನ್ನ ಹೇಳಿದ್ದಾರೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಅರ್ಹತೆಗೂ ಮೀರಿ ಅವಕಾಶಗಳನ್ನು ಕೊಟ್ಟಿದೆ. ನನ್ನನ್ನು ಗುರುತಿಸಿ ಸಾಕಷ್ಟು ಅವಕಾಶಗಳನ್ನು ಕೊಟ್ಟಿರುವುದಕ್ಕೆ ಆಭಾರಿಯಾಗಿದ್ದೇನೆ. ಸಚಿವ ಸ್ಥಾನದ ತ್ಯಾಗಕ್ಕೂ ನಾನು ಸಿದ್ಧನಿದ್ದೇನೆ ಎಂಬ ಮಾತನ್ನ ಹೇಳಿದ್ದಾರೆ. ಸಂಪುಟ ಪುನರ್ ರಚನೆಯಲ್ಲಿ ಬೇರೆಯವರಿಗೂ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಈ ಮಾತನ್ನ ಹೇಳಿದ್ರಾ ಎಂಬ ಪ್ರಶ್ನೆಗಳು ಕಾಡುತ್ತಿವೆ.
ಈ ಬಾರಿ ಹಾಸನಾಂಬೆಯ ದರ್ಶನಕ್ಕೆ ಅನುಕೂಲಕರ ವಾತಾವರಣ ಮಾಡಿಕೊಟ್ಟಿದ್ದರು. ಜಿಲ್ಲಾ ಉಸ್ತುವಾರಿಯಾಗಿದ್ದ ಕೃಷ್ಣ ಭೈರೇಗೌಡ ಅವರು ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದರು. ಈ ಬಗ್ಗೆ ಮಾತನಾಡಿದ್ದು, ಈ ಬಾರಿ 26 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ. ಹಾಸನಾಂಬೆ ದೇವಿ ಎಂದರೆ ಹಸನ್ಮುಖಿ, ಪ್ರಸನ್ನತೆಯ ಸಂಕೇತ. ದೇವಿಯ ದರ್ಶನ ಪಡೆದ ಭಕ್ತರು ಸಂತೋಷದಿಂದ ಹೋಗಿದ್ದಾರೆ. 26 ಲಕ್ಷ ಭಕ್ತರಲ್ಲಿ ಶೇಕಡ 60 ರಷ್ಟು ಮಹಿಳೆಯರೇ ಆಗಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಸಾಮಾನ್ಯರಿಗೂ ದರ್ಶನ ಸಿಗುವಂತೆ ಮಾಡಿದ್ದೇವೆ ಎಂದಿದ್ದಾರೆ.
