ಕೋತಿರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಚಿತ್ರದುರ್ಗ ಮೂಲದವರು. ಜ್ಯೋತಿರಾಜ್ ಮೂಲ ಹೆಸರಾದರೂ ಮಾಡುವ ಸಾಹಸಗಳಿಂದ ಕೋತಿರಾಜ್ ಎಂದೇ ಖ್ಯಾತಿ ಪಡೆದಿದ್ದಾರೆ. ಇದೀಗ ಹೊಸದೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವುದಕ್ಕೆ ಮುಂದಾಗಿದ್ದಾರೆ.

ನಾಳೆಯೇ ಕಾರಿಂಜೇಶ್ವರ ಬೆಟ್ಟವನ್ನು ಏರಲಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿದೆ. ಮೊದಲ ಬಾರಿಗೆ ಬಂಟ್ವಾಳದತ್ತ ಕೋತಿರಾಜ್ ಪಯಣ ಬೆಳೆಸಿದ್ದಾರೆ. ಈ ಕೋತಿರಾಜ್ ಅವರನ್ನು ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಕರೆಯುತ್ತಾರೆ. ಈಗ ಕಾರಿಂಜೇಶ್ವರ ಬೆಟ್ಟವನ್ನು ಏರಲು ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಕೋತಿರಾಜ್ ಸಾಹಸ ಮಾತ್ರವಲ್ಲ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾರೆ. ಬಡವರ ಕಲ್ಯಾಣಕ್ಕಾಗಿ ತಮ್ಮದೇ ಆದ ಟ್ರಸ್ಟ್ ಅನ್ನು ಮಾಡಿದ್ದಾರೆ. ಈ ಟ್ರಸ್ಟ್ ಮೂಲಕ ಬಡವರಿಗೆ ಅಗತ್ಯವಿರುವ ಸಹಾಯವನ್ನು ಮಾಡುತ್ತಾ ಇರುತ್ತಾರೆ. ಅದಕ್ಕೆ ಹಣ ಹೊಂದಿಸಲು ಈ ರೀತಿಯ ಸಾಹಸಕ್ಕೂ ಕೈ ಹಾಕುತ್ತಾರೆ.

ನಾಳೆ ಭಾನುವಾರ ಕಾರಿಂಜೇಶ್ವರ ಬೆಟ್ಟವನ್ನು ಕೋತಿರಾಜ್ ಹತ್ತಲಿದ್ದಾರೆ. ಈ ಸಂಬಂಧ ದೇವಸ್ಥಾನ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಅಧಿಜೃತವಾಗಿ ಪತ್ರದ ಮೂಲಕ ತಿಳಿಸಿದ್ದಾರೆ. ಹಾಗೇ ಬಂಟ್ವಾಳ ಜನತೆಯ ಸಹಾಯವನ್ನು ಕೇಳಿದ್ದಾರೆ. ಇತ್ತೀಚೆಗಷ್ಟೇ ಕುಂದಾಪುರದ ಹನುಮಾನ್ ವಿಗ್ರಹ ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ವಿಭಿನ್ನ ಸಾಹಸದ ಮೂಲಕ ಜನಪ್ರಿಯರಾದ ಕೋತಿರಾಜ್ ತನ್ನ ಇಷ್ಟದೇವರಾದ 85 ಅಡಿ ಎತ್ತರದ ಹನುಮಂತನ ವಿಗ್ರಹದ ತುತ್ತ ತುದಿಗೆ ಏರಿ ಎಲ್ಲರನ್ನು ಚಕಿತರನ್ನಾಗಿ ಮಾಡಿದ್ದಾರೆ. ಈಗಾಗಲೇ ಬಹಳಷ್ಟು ಕಡೆ ಎತ್ತರದ ಕಟ್ಟಡಗಳನ್ನು ಏರುವ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಹಿಂದೆಯೂ ಕೂಡ ಉಡುಪಿಯ ಅನೇಕ ಬಹು ಮಹಡಿ ಕಟ್ಟಡಗಳನ್ನು ಇವರು ಏರಿ ಸಾಹಸ ಮೆರೆದಿದ್ದರು.


