ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಖರ್ಗೆ, ಎಐಎಡಿಎಂಕೆ ಪಕ್ಷವು ಅಣ್ಣಾ ದುರೈ ಅವರ ಹೆಸರನ್ನು ಬಳಸಿಕೊಂಡು ಬಿಜೆಪಿ ಜೊತೆ ಕೈಜೋಡಿಸಿರುವುದನ್ನು ಪ್ರಶ್ನಿಸಿದರು. ಇದೇ ವೇಳೆ, ಮೋದಿ ಮತ್ತು ಅವರ ಪಕ್ಷ ಸಮಾನತೆ ಹಾಗೂ ನ್ಯಾಯದ ಮೌಲ್ಯಗಳಲ್ಲಿ ನಂಬಿಕೆ ಇಲ್ಲ ಎಂದು ಟೀಕಿಸಿದರು.
ಭಾಷಣದ ವೇಳೆ ಬಳಸಿದ ಕೆಲವು ಪದಗಳು ವಿವಾದ ಹುಟ್ಟಿಸಿದ ಹಿನ್ನೆಲೆ, ನಂತರ ಖರ್ಗೆ ಸ್ಪಷ್ಟನೆ ನೀಡಿದರು.“ನಾನು ಪ್ರಧಾನಿ ಅವರನ್ನು ನೇರವಾಗಿ ಭಯೋತ್ಪಾದಕ ಎಂದು ಕರೆಯಲಿಲ್ಲ. ಆದರೆ ಅವರು ಯಾವಾಗಲೂ ಜನರಲ್ಲಿ ಭಯ ಹುಟ್ಟಿಸುವ ರಾಜಕೀಯ ಮಾಡುತ್ತಾರೆ ಎಂಬುದೇ ನನ್ನ ಮಾತಿನ ಅರ್ಥ,” ಎಂದು ಖರ್ಗೆ ಹೇಳಿದರು.
ಮುಂದುವರಿದು ಮಾತನಾಡಿದ ಅವರು, “ಮೋದಿ ಸರ್ಕಾರವನ್ನು ಪ್ರಶ್ನಿಸುವವರ ಮೇಲೆ ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಬಳಸಲಾಗುತ್ತದೆ” ಎಂದು ಆರೋಪಿಸಿದರು.

ಇದೇ ವೇಳೆ, ಮಹಿಳಾ ಮೀಸಲಾತಿ ವಿಚಾರದಲ್ಲಿಯೂ ಖರ್ಗೆ ಟೀಕೆ ವ್ಯಕ್ತಪಡಿಸಿದರು. ಪಂಚರಾಜ್ಯ ಚುನಾವಣೆ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಮಹಿಳಾ ಮೀಸಲಾತಿಯನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, “ಈ ಮೀಸಲಾತಿ 2023ರಲ್ಲೇ ಜಾರಿಗೆ ಬಂದಿದೆ. ಕಾಂಗ್ರೆಸ್ ಪಕ್ಷ ಮೀಸಲಾತಿಗೆ ವಿರೋಧಿಯಲ್ಲ, ಆದರೆ ಡಿಲಿಮಿಟೇಶನ್ ಪ್ರಕ್ರಿಯೆಗೆ ಮಾತ್ರ ನಾವು ವಿರೋಧಿಸಿದ್ದೇವೆ” ಎಂದರು.ಇತ್ತ ಖರ್ಗೆಯ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಕ್ಷದ ವಕ್ತಾರ ಅಫ್ಜಲ್ ಯಾಕೂಬ್ ಅವರು ಖರ್ಗೆ ವಿರುದ್ಧ ಟೀಕೆ ನಡೆಸಿದ್ದು, “ಕಾಂಗ್ರೆಸ್‌ಗೆ ನಕ್ಸಲರು ಮತ್ತು ಅಫ್ಜಲ್ ಯಾಕೂಬ್‌ಗಳಂತಹವರು ನಿರಪರಾಧಿಗಳಂತೆ ಕಾಣುತ್ತಾರೆ. ಆದರೆ ಒಬ್ಬ ಓಬಿಸಿ ಚಾಯ್‌ವಾಲಾ ಅವರಿಗೆ ಭಯೋತ್ಪಾದಕನಂತೆ ಕಾಣುತ್ತಾನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
















