ಬೆಂಗಳೂರು: ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಅಡಿಕೆ ಬೆಳೆಯುವ ಪ್ರದೇಶ ಗಣನೀಯವಾಗಿ ವಿಸ್ತರಣೆಗೊಂಡಿದ್ದರೂ, ಒಟ್ಟು ಇಳುವರಿ ಮತ್ತು ಉತ್ಪಾದಕತೆಯಲ್ಲಿ ತೀವ್ರ ಕುಸಿತ ದಾಖಲಾಗಿದೆ. ದೇಶದ ಅಡಿಕೆ ಕೃಷಿ ವಿಸ್ತೀರ್ಣದಲ್ಲಿ ಶೇಕಡಾ 71.56 ಹಾಗೂ ಒಟ್ಟು ಉತ್ಪಾದನೆಯಲ್ಲಿ ಶೇಕಡಾ 75.47 ಪಾಲು ಹೊಂದಿರುವ ಕರ್ನಾಟಕದಲ್ಲಿ ಈ ಹೊಸ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ.
ಲೋಕಸಭೆಯಲ್ಲಿ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಅವರ ಪ್ರಶ್ನೆಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ಈ ಅಧಿಕೃತ ಮಾಹಿತಿ ಒದಗಿಸಿದ್ದಾರೆ.
2021-22ನೇ ಸಾಲಿನಲ್ಲಿ ರಾಜ್ಯದ 6.03 ಲಕ್ಷ ಹೆಕ್ಟೇರ್ನಲ್ಲಿ ಅಡಿಕೆ ಕೃಷಿ ನಡೆದು 13.48 ಲಕ್ಷ ಟನ್ ಉತ್ಪಾದನೆ ದಾಖಲಾಗಿತ್ತು. ಆಗ ಪ್ರತಿ ಹೆಕ್ಟೇರ್ಗೆ ಸರಾಸರಿ 2.24 ಟನ್ ಇಳುವರಿ ಲಭಿಸಿತ್ತು. ಆದರೆ 2025-26ರ ಅವಧಿಗೆ ಬೆಳೆ ಪ್ರದೇಶ 7.98 ಲಕ್ಷ ಹೆಕ್ಟೇರ್ಗೆ ಏರಿಕೆಯಾಗಿದ್ದರೂ, ಉತ್ಪಾದನೆ 11.32 ಲಕ್ಷ ಟನ್ಗೆ ಕುಸಿದಿದೆ. ಇದರೊಂದಿಗೆ ಪ್ರತಿ ಹೆಕ್ಟೇರ್ ಉತ್ಪಾದಕತೆ 1.42 ಟನ್ಗೆ ಇಳಿಕೆಯಾಗಿದೆ. ಅಂದರೆ ಐದು ವರ್ಷಗಳ ಅಂತರದಲ್ಲಿ ಕೃಷಿ ಪ್ರದೇಶ ಶೇಕಡಾ 30ರಷ್ಟು ಹೆಚ್ಚಾಗಿದ್ದರೂ ಉತ್ಪಾದನೆ ಶೇಕಡಾ 15ರಷ್ಟು ಮತ್ತು ಉತ್ಪಾದಕತೆ ಶೇಕಡಾ 35ರಷ್ಟು ಕಡಿಮೆಯಾಗಿದೆ.
ಪ್ರಮುಖ ಅಡಿಕೆ ಬೆಳೆಯುವ ಜಿಲ್ಲೆಯಾದ ಶಿವಮೊಗ್ಗದಲ್ಲಿ ಕೃಷಿ ವಿಸ್ತೀರ್ಣ 1.11 ಲಕ್ಷ ಹೆಕ್ಟೇರ್ನಿಂದ 1.34 ಲಕ್ಷ ಹೆಕ್ಟೇರ್ಗೆ ಹೆಚ್ಚಿದ್ದರೂ, ಉತ್ಪಾದನೆ 2.37 ಲಕ್ಷ ಟನ್ನಿಂದ 1.49 ಲಕ್ಷ ಟನ್ಗೆ ಇಳಿದಿದೆ. ಪರಿಣಾಮವಾಗಿ ಜಿಲ್ಲೆಯ ಉತ್ಪಾದಕತೆ ಶೇಕಡಾ 45ರಷ್ಟು ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೃಷಿ ವಿಸ್ತೀರ್ಣ 1.07 ಲಕ್ಷ ಹೆಕ್ಟೇರ್ಗೆ ಏರಿದ್ದರೂ ಉತ್ಪಾದನೆ 1.41 ಲಕ್ಷ ಟನ್ಗೆ ಕುಸಿದು, ಹೆಕ್ಟೇರ್ಗೆ ಕೇವಲ 1.31 ಟನ್ ಇಳುವರಿ ದಾಖಲಾಗಿದೆ. ತುಮಕೂರು, ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲೂ ಇದೇ ರೀತಿಯ ಇಳಿಕೆ ಕಂಡುಬಂದಿದೆ.
ಆದರೆ ಈ ಎಲ್ಲ ಜಿಲ್ಲೆಗಳಿಗಿಂತ ಭಿನ್ನವಾಗಿ ಚಿಕ್ಕಮಗಳೂರು ಜಿಲ್ಲೆ ಮಾತ್ರ ಸಕಾರಾತ್ಮಕ ಪ್ರಗತಿ ಸಾಧಿಸಿದೆ. ಜಿಲ್ಲೆಯಲ್ಲಿ ಅಡಿಕೆ ಪ್ರದೇಶ 75 ಸಾವಿರ ಹೆಕ್ಟೇರ್ನಿಂದ 1 ಲಕ್ಷ ಹೆಕ್ಟೇರ್ಗೆ ವಿಸ್ತರಿಸಿದ್ದು, ಉತ್ಪಾದನೆ 92 ಸಾವಿರ ಟನ್ನಿಂದ 1.67 ಲಕ್ಷ ಟನ್ಗೆ ಹಾಗೂ ಪ್ರತಿ ಹೆಕ್ಟೇರ್ ಉತ್ಪಾದಕತೆ 1.27 ಟನ್ನಿಂದ 1.67 ಟನ್ಗೆ ಹೆಚ್ಚಳ ಕಂಡಿದೆ.










