ಸುದ್ದಿಒನ್, ಬೆಂಗಳೂರು, ಜೂನ್. 05 : ರಾಜ್ಯದ ನೂತನ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ರಾಜಕೀಯ ಚರ್ಚೆಗಳು ಜೋರಾಗಿರುವ ನಡುವೆಯೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಯು.ಟಿ. ಖಾದರ್ ಅವರು ಇಲಾಖೆಯಲ್ಲಿ ಚುರುಕಿನ ಕೆಲಸ ಆರಂಭಿಸಿದ್ದಾರೆ. ಖಾತೆ ಹಂಚಿಕೆಯಾದ ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಇದೀಗ ಮಹಿಳೆಯರ ಆರೋಗ್ಯವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಹೊಸ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದ್ದಾರೆ.
ಆರೋಗ್ಯ ಸಚಿವರಾದ ಬಳಿಕ ಮೊದಲ ಮಹತ್ವದ ಯೋಜನೆಯನ್ನು ಮಹಿಳೆಯರಿಗೆ ಸಮರ್ಪಿಸಲು ಯು.ಟಿ. ಖಾದರ್ ಮುಂದಾಗಿದ್ದಾರೆ. ಮಹಿಳೆಯರ ಆರೋಗ್ಯ ಸಂಬಂಧಿತ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸುವ ಚಿಂತನೆಯೂ ನಡೆದಿದೆ ಎನ್ನಲಾಗಿದೆ.
ಪ್ರಸ್ತುತ ಹಲವು ಯೋಜನೆಗಳ ಅಡಿಯಲ್ಲಿ ಮಹಿಳೆಯರ ಆರೋಗ್ಯ ಸೇವೆಗಳು ಒಳಗೊಂಡಿದ್ದರೂ, ಅವುಗಳಿಗೆ ಪ್ರತ್ಯೇಕ ಗಮನ ನೀಡುವ ವ್ಯವಸ್ಥೆ ಅಗತ್ಯವಾಗಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಹೊಸ ಕ್ರಮಕ್ಕೆ ಸಚಿವರು ಮುಂದಾಗಿದ್ದಾರೆ.
ಇಂದು ಆರೋಗ್ಯ ಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮೊದಲ ಪರಿಶೀಲನಾ ಸಭೆ ನಡೆಸಿದ ಯು.ಟಿ. ಖಾದರ್, ಇಲಾಖೆಯ ಪ್ರಸ್ತುತ ಯೋಜನೆಗಳು, ನೀತಿಗಳು ಹಾಗೂ ಸವಾಲುಗಳ ಕುರಿತು ಸಮಗ್ರ ಮಾಹಿತಿ ಪಡೆದರು.ಸಭೆಯ ಬಳಿಕ ಮಾತನಾಡಿದ ಅವರು, “13 ವರ್ಷಗಳ ಹಿಂದಿನ ಆರೋಗ್ಯ ವ್ಯವಸ್ಥೆಗೂ ಈಗಿನ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸವಿದೆ. ತಂತ್ರಜ್ಞಾನ ಬದಲಾಗಿದೆ, ಹೊಸ ಆರೋಗ್ಯ ಸವಾಲುಗಳು ಎದುರಾಗಿವೆ. ಈ ಎಲ್ಲ ವಿಚಾರಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ” ಎಂದು ಹೇಳಿದರು.
ದಂತ ಭಾಗ್ಯ, ಆರೋಗ್ಯ ಸುರಕ್ಷಾ ಯೋಜನೆ, ಅಪಘಾತ ಚಿಕಿತ್ಸಾ ಯೋಜನೆ ಸೇರಿದಂತೆ ಈಗಾಗಲೇ ಜಾರಿಯಲ್ಲಿರುವ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.ವೈದ್ಯರ ಕೊರತೆ, ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇಲಾಖೆಯ ಎಲ್ಲಾ ಯೋಜನೆಗಳು ಜನರಿಗೆ ತಲುಪುವಂತೆ ಪರಿಣಾಮಕಾರಿ ಆಡಳಿತ ವ್ಯವಸ್ಥೆ ರೂಪಿಸಲಾಗುವುದು ಎಂದು ಖಾದರ್ ಭರವಸೆ ನೀಡಿದರು.ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಯು.ಟಿ. ಖಾದರ್ ಕೈಗೊಂಡಿರುವ ಈ ಕ್ರಮಗಳು ಆರೋಗ್ಯ ಇಲಾಖೆಯಲ್ಲಿ ಹೊಸ ಚೈತನ್ಯ ಮೂಡಿಸುವ ನಿರೀಕ್ಷೆ ಹುಟ್ಟಿಸಿವೆ.









