ಕರ್ನಾಟಕ ರಾಜ್ಯದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿರುವ ಹಿನ್ನೆಲೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿಗದಿಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಒಂದು ದಿನ ಮುಂದೂಡಲಾಗಿದೆ. ಈ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದಾರೆ.ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ದರ್ಜೆ-2 ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಯನ್ನು ಮೊದಲು ಏಪ್ರಿಲ್ 9ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಅದೇ ದಿನ ಉಪಚುನಾವಣೆ ನಡೆಯುತ್ತಿರುವುದರಿಂದ ಇದೀಗ ಪರೀಕ್ಷೆಯನ್ನು ಏಪ್ರಿಲ್ 10ರಂದು ನಡೆಸಲು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಇಎ 2025ರ ನವೆಂಬರ್ 19ರಂದು ಅಧಿಸೂಚನೆ ಹೊರಡಿಸಿ, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಪಠ್ಯಕ್ರಮವನ್ನೂ ಪ್ರಕಟಿಸಿತ್ತು. ಇದೀಗ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಬೆಂಗಳೂರು ಹಾಗೂ ಧಾರವಾಡ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕನಿಷ್ಠ 2 ಗಂಟೆಗಳ ಮುಂಚಿತವಾಗಿ ಕೇಂದ್ರಕ್ಕೆ ಹಾಜರಾಗಬೇಕು. ಭದ್ರತಾ ಕ್ರಮವಾಗಿ ಫ್ರಿಸ್ಕಿಂಗ್ ಮತ್ತು ಮುಖ ಗುರುತು ಪರಿಶೀಲನೆಯ ನಂತರವೇ ಪ್ರವೇಶ ನೀಡಲಾಗುತ್ತದೆ.
ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ ಜಾರಿಗೆ ಇರುವುದು, ತಪ್ಪು ಉತ್ತರಗಳಿಗೆ 1/4 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ಒಟ್ಟು 33 ಹುದ್ದೆಗಳಿಗಾಗಿ ನಡೆಯುವ ಈ ಪರೀಕ್ಷೆಗೆ ಸುಮಾರು 2,500 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಪ್ರವೇಶ ಪತ್ರಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಪರಿಷ್ಕೃತ ವೇಳಾಪಟ್ಟಿಯಂತೆ ಪರೀಕ್ಷೆಗೆ ಸಿದ್ಧರಾಗುವಂತೆ ಕೆಇಎ ಸೂಚಿಸಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.













