ಬೆಂಗಳೂರು: ಮಾನ್ಯ ಮಾಜಿ ಪ್ರಧಾನಿಗಳು ಹೇಳಿದ್ದರಲ್ಲಿ ಲವಲೇಶವೂ ಉತ್ಪ್ರೇಕ್ಷೆ ಇಲ್ಲ. ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಇಲ್ಲಿ ಕಾಂಗ್ರೆಸ್ ಅಂತ್ಯ ಕಾಣುತ್ತದೆ, ಹೌದು. ದೇಶವನ್ನು ಜಾತಿ,ಧರ್ಮದಿಂದಲೇ ವಿಭಜಿಸಿ ಪ್ರಜಾಪ್ರಭುತ್ವವನ್ನೇ ಅಂತ್ಯ ಕಾಣಿಸಲು ಹೊರಟಿದ್ದ ಕಾಂಗ್ರೆಸ್, ಚರಿತ್ರೆಯ ಕೊನೇಪುಟದಲ್ಲಿ ಏದುಸಿರು ಬಿಡುತ್ತಿದೆ. ಶಾಪ ಹಾಕುವುದನ್ನು ಗೌಡರೆಂದೂ ಮಾಡಿಲ್ಲ, ಮಾಡುವುದೂ ಇಲ್ಲ.ಅವರ ಹಸ್ತ ಅಭಯ ಹಸ್ತ.ಅದು ಆಶೀರ್ವಾದ,ಅನುಗ್ರಹದ ದ್ಯೋತಕ.ಗುರುಸ್ವಾಮಿ ಎಂಬ ಅನಾಮಧೇಯ ವ್ಯಕ್ತಿ ಎದುರು ಸೋತ ನಿಮ್ಮನ್ನು ಅನುಗ್ರಹದಲ್ಲಿಯೇ ಅವರು ಅನುಗ್ರಹಿಸಿದ್ದು ಮರೆತಿರಾ? ಅಂದು ಆ ಕೈ ನಿಮ್ಮ ಕೈ ಹಿಡಿಯದಿದ್ದರೆ ನೀವಿಷ್ಟು ಎತ್ತರಕ್ಕೇರಲು ಸಾಧ್ಯವಿತ್ತೆ ಸಿದ್ದರಾಮಯ್ಯ ನವರೇ? ಎಂದು ಪ್ರಶ್ನಿಸಿದೆ.
ಜಾತ್ಯತೀತತೆ ನೀವಷ್ಟೇ ಹೇಳಬೇಕು ಸಿದ್ದರಾಮಯ್ಯನವರೇ? ಸಿಎಂ ಸಚಿವಾಲಯದ ಕೊಳಕು ಕೊಡವಿದರೆ ನಿಮ್ಮ ಢೋಂಗಿ ಜಾತ್ಯತೀತತೆಯ ಅಸಲಿ ಮುಖ ಕಳಚಿ ಬೀಳುತ್ತದೆ. ಅಭಿಪ್ರಾಯ, ಭಿನ್ನಾಭಿಪ್ರಾಯ, ಪ್ರಾಮಾಣಿಕತೆ, ಜಾತ್ಯತೀತತೆ.. ಈ ಪದಗಳೆಲ್ಲ ನಿಮಗೆ ಆಗಿ ಬರಲ್ಲ. ನಿಮ್ಮದೇನಿದ್ದರೂ ಏಕಾಭಿಪ್ರಾಯ. ಸರ್ವಾಧಿಕಾರ ಧೋರಣೆ, ತುಘಲಕ್ ಮನಃಸ್ಥಿತಿ. ಮಾನ್ಯ ದೇವೇಗೌಡ ಅವರು ಸಾಮಾಜಿಕನ್ಯಾಯ, ಜಾತ್ಯತೀತತೆ, ನಂಬಿಕೆ, ವಿಶ್ವಾಸಾರ್ಹತೆ ಉಳ್ಳವರು ಆಗಿಲ್ಲದಿದ್ದಿದ್ದರೆ ನೀವು ಈವರೆಗೆ ಏನೇನೋ ಆಗಿದ್ದಿರಲ್ಲಾ… ಅದರಲ್ಲಿ ಏನೊಂದೂ ಆಗುತ್ತಿರಲಿಲ್ಲ. ನಿಮಗೆ ಏಣಿಯಾಗಿ, ಹೆಗಲಾಗಿದ್ದ ಅವರ ಬೆನ್ನಿಗಿರಿದ ‘ಅಪರ ಬ್ರೂಟಸ್’ ನೀವು. ಬೂಟಾಟಿಕೆ ಮಾಡಿಕೊಂಡೇ ರಾಜಕೀಯ ಬದುಕು ಕಟ್ಟಿಕೊಂಡವರು ನೀವು.
ಯಾರು, ಯಾರ ಸಂಗ ಮಾಡಿದ್ದರು? ಯಾವ ಗಾಳಿ ಯಾರಿಗೆ ಸೋಕಿತ್ತು? ನಿಮ್ಮ ಇಂಥ ಕಾಗಕ್ಕ,ಗೂಬ್ಬಕ್ಕ ಕಥೆಗಳ ಮೂಲಕ್ಕೆ ಹೋದರೆ ನೀವೇ ಬೆತ್ತಲೆ ಸ್ಥಿತಿಯಲ್ಲಿ ನಿಲ್ಲಬೇಕಾಗುತ್ತದೆ. ಅಂತಹ ಸ್ಥಿತಿ ತಂದುಕೊಳ್ಳಬೇಡಿ. ನಿಮ್ಮ ರಾಜಕೀಯ ಅಂತ್ಯಕಾಲ ಆನಂದವಾಗಿರಲಿ, ಅದಕ್ಕೆ ಕಳಂಕ ಮೆತ್ತಿಕೊಳ್ಳಬೇಡಿ ಎನ್ನುವುದು ನಮ್ಮ ಕಳಕಳಿಯ ಸಲಹೆ. ಸೊಕ್ಕು ಎನ್ನುವುದು ನಿಮ್ಮ ಪೇಟೆಂಟ್. ಆ ನಿಮ್ಮ ಸದ್ಗುಣ(!?)ವನ್ನು ದೇವೇಗೌಡರಿಗೆ ಅಂಟಿಸುವ ಪಾಪದ ಕೆಲಸ ಮಾಡಬೇಡಿ. ಕರ್ನಾಟಕದ ‘ಸೊಕ್ಕಿನ ಮನುಷ್ಯ’ ಅಂತ ಯಾರಾದರೂ ಇದ್ದರೆ ಅದು ತಾವೇ ಸಿದ್ಧರಾಮಯ್ಯನವರೇ. ನಿಮ್ಮ ಪಕ್ಷದ ಪಡಸಾಲೆಗೆ ಬಂದರೆ ಅಲ್ಲಿರುವ ಪ್ರತಿ ಬಾಗಿಲು ನಿಮ್ಮ ಸೊಕ್ಕಿನ ಕಥೆಗಳನ್ನೇ ಹೇಳುತ್ತವೆ. ಜನಾದೇಶವನ್ನು ದೇವೇಗೌಡರು ಎಂದೂ ಧಿಕ್ಕರಿಸಿಲ್ಲ. ಶಿರಸಾ ವಹಿಸಿದ್ದಾರೆ. ಅಂತಹ ಆಚಾರ, ವಿಚಾರ, ಸದ್ವಿಚಾರ, ಶಿಷ್ಟಾಚಾರವನ್ನು ನಿಮಗೆ ಕಲಿಸಿದ್ದೇ ಅವರು. ಆದರೆ, ಅಡ್ಡದಾರಿ ಆಯ್ಕೆ ಮಾಡಿಕೊಂಡ ನಿಮಗೆ ಇವೆಲ್ಲಾ ರುಚಿಸುತ್ತಿಲ್ಲ. ಸದ್ಯಕ್ಕೆ ನಿಮಗೆ ನೆಲ ಕಾಣುತ್ತಿಲ್ಲ. ನೆಲವೇ ಬುದ್ದಿ ಕಲಿಸುವ ಕಾಲ ಹತ್ತಿರದಲ್ಲಿದೆ. ಕಾಲ ಕ್ಷಣಿಕ ಎಂದು ಸರಣಿ ಟ್ವೀಟ್ ಮಾಡಿದೆ.