ಚಿತ್ರದುರ್ಗ : ಪೊಲೀಸ್ ಅಧಿಕಾರಿ ಡಾ.ರವೀಂದ್ರನಾಥ್ ರಾಜೀನಾಮೆ ನೀಡಿರುವುದನ್ನು ನೋಡಿದರೆ ಕೋಮುವಾದಿ ಬಿಜೆಪಿ ಹಾಗೂ ಮೊದಲಿನಿಂದಲೂ ದಲಿತರ ಮತಗಳನ್ನು ಪಡೆದುಕೊಂಡು ಬರುತ್ತಿರುವ ಕಾಂಗ್ರೆಸ್ ದಲಿತ ವಿರೋಧಿಯಾಗಿದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾದಂತಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಮಹಂತೇಶ್ ಕಟುವಾಗಿ ಖಂಡಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಬುಧವಾರ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಮೊದಲಿನಿಂದಲೂ ಕೆಲಸ ಮಾಡಿಕೊಂಡು ಬರುತ್ತಿರುವ ಪೊಲೀಸ್ ಅಧಿಕಾರಿ ಡಾ.ರವೀಂದ್ರನಾಥ್‍ರವರು ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡಿಕೊಂಡು ಬರುತ್ತಿರುವ ಬಿಜೆಪಿಯ ಒತ್ತಡ ಮತ್ತು ಕಿರುಕುಳವನ್ನು ಸಹಿಸಿಕೊಳ್ಳಲು ಆಗದೆ ನೀಡಿರುವ ರಾಜೀನಾಮೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಬಾರದು.
ಕೆಲವರು ನಕಲಿ ಜಾತಿ ಪತ್ರಗಳನ್ನು ನೀಡಿ ಸರ್ಕಾರಿ ಉದ್ಯೋಗಗಳನ್ನು ಗಿಟ್ಟಿಸಿಕೊಂಡಿರುವವರನ್ನು ಬಯಲಿಗೆಳೆದಿರುವ ಡಾ.ರವೀಂದ್ರನಾಥ್‍ರವರಿಗೆ ಸರ್ಕಾರ ಬೆನ್ನುತಟ್ಟಿ ಪ್ರೋತ್ಸಾಹಿಸುವ ಬದಲು ದಲಿತ ಎನ್ನುವ ಕಾರಣಕ್ಕಾಗಿ ಬಲಿಹಾಕಲು ಹೊರಟಿರುವ ಕುತಂತ್ರ ಇದಾಗಿದೆ. ಹಾಗಾಗಿ ಅವರ ರಾಜೀನಾಮೆಯನ್ನು ಸರ್ಕಾರ ಅಂಗೀರಿಸಬಾರದು. ಒಂದು ವೇಳೆ ಅಂಗೀಕರಿಸಿದ್ದೆ ಆದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಹೆಚ್.ಮಹಂತೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ರುದ್ರಮುನಿ, ಉಪಾಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ ಟಿ.ಆರ್, ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಮಂಜಣ್ಣ ಟಿ, ನಾಗರಾಜ್ ಟಿ.ಪಾಲವ್ವನಹಳ್ಳಿ, ಜಯಪ್ಪ ಕುರುಬರಹಳ್ಳಿ, ಖಜಾಂಚಿ ಟಿ.ಹೆಚ್.ಕೆಂಚಪ್ಪ, ಕೃಷ್ಣಪ್ಪ, ವಿಜಯ್, ಕುಮಾರಸ್ವಾಮಿ, ವೆಂಕಟೇಶ್, ವಿಜಯಕುಮಾರ್, ಸುಮಿತ್ರಪಾಲ್, ದೇವರಾಜ್, ನಿಂಗಪ್ಪ, ಅಂಜಿನಮೂರ್ತಿ, ಮಹಲಿಂಗಪ್ಪ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.