in ,

ನಮ್ಮೂರು ನಮ್ಮ ಹೆಮ್ಮೆ : ಕಲ್ಲೇದೇವರಪುರ ಗ್ರಾಮದ ಕಲ್ಲೇಶ್ವರ ಸ್ವಾಮಿ ದೇವಾಲಯದ  ಪರಿಚಯ

suddione whatsapp group join

 

ವರದಿ ಮತ್ತು ಫೋಟೋಗಳು : ಡಾ.ಕೆ.ವಿ.ಸಂತೋಷ , ಮೊ : 93424 66936

ಸುದ್ದಿಒನ್, ಚಿತ್ರದುರ್ಗ : ಕಲ್ಲೇದೇವರಪುರ ಗ್ರಾಮವು ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಈ ಗ್ರಾಮವು ಚಿತ್ರದುರ್ಗ- ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಚಿತ್ರದುರ್ಗದಿಂದ 25 ಕಿಲೋಮೀಟರ್ ಹಾಗೂ ಜಗಲೂರಿನಿಂದ 15 ಕಿಲೋಮೀಟರ್ ದೂರದಲ್ಲಿದೆ. ಕಲ್ಲೇಶ್ವರ ದೇವರು ನೆಲೆಸಿದ ಸ್ಥಳವಾದ ಕಾರಣಕ್ಕೆ ಈ ಗ್ರಾಮಕ್ಕೆ ಕಲ್ಲೇದೇವರಪುರ ಹೆಸರು ಬಂದಿದೆ.
ಇದು ತಾಲ್ಲೂಕು/ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದೆನಿಸಿದೆ.

ಐತಿಹ್ಯ:
ಹಿಂದೆ ಈ ದೇವಾಲಯದ ಪ್ರದೇಶವೆಲ್ಲವೂ ಕಾಡುಪೆಳೆಯಿಂದ ಕೂಡಿದ್ದು ಪಕ್ಕದ ಬಯಲಿನಲ್ಲಿ ಮಲ್ಲಶೆಟ್ಟಿ ಎಂಬ ವ್ಯಾಪಾರಿಯೊಬ್ಬ ಪೆಳೆಯಿಂದ ಕಟ್ಟಿಗೆಯನ್ನು ತಂದು ನೆಲದಲ್ಲಿ ಹೂತಿದ್ದ ಒಂದು ಕಲ್ಲಿಗೆ ಮತ್ತೆರಡು ಕಲ್ಲುಗಳನ್ನು ಇಟ್ಟು ಒಲೆಯನ್ನು ಹೂಡಿ ಅಡುಗೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಅನ್ನದ ಮಡಿಕೆಯಲ್ಲಿ ಅನ್ನದ ಜೊತೆಗೆ ರಕ್ತ ಕಾಣಲು ಶುರುವಾಯಿತು. ವ್ಯಾಪಾರಿ ಗಾಬರಿಯಿಂದ ದೇವರೆಂದು ನೆನೆಸಿಕೊಂಡನಂತೆ. ಆಗ ದೇವರು ನೀನು ಒಲೆ ಗುಂಡೆಂದು  ಭಾವಿಸಿದ ನಾನು ಒಲೆ  ಗುಂಡಲ್ಲ.ನಾನು ಕಲ್ಲಿನಾಥ -ಕಲ್ಲೇಶ್ವರ ಎಂದು ಒಡಮೂಡಿದ ಕಲ್ಲಿನ ಶಿವಲಿಂಗದಿಂದ ಒಂದು ಚಿಕ್ಕದಾದ ಕಲ್ಲು ಸಿಡಿದು  ಹೇಳಿತಂತೆ. ನಿನ್ನ ವ್ಯಾಪಾರದ ಜಾಗದಲ್ಲಿ ಈ ಕಲ್ಲಿನಿಂದಲೇ ತೂಗಿ ಕೊಡು ನಿನಗೆ ಮಂಗಳವಾಗುತ್ತದೆ ಎಂದಿತಂತೆ. ಆಗ ವ್ಯಾಪಾರಿಯು ಭಕ್ತಿಯಿಂದ ವ್ಯಾಪಾರ ಮಾಡಿ ಗುಡಿ ಕಟ್ಟಿಸಿದನಂತೆ.

ಪರಿಚಯ:
ಕಲ್ಲೇಶ್ವರ ದೇವಾಲಯವು ಗ್ರಾಮದ ಮಧ್ಯಭಾಗದಲ್ಲಿದ್ದು, ಪೂರ್ವಾಭಿಮುಖವಾಗಿ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ 11 -12ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ಗರ್ಭಗೃಹ,ಅಂತರಾಳ, ನವರಂಗ,ಮಹಾಮಂಟಪ ಸಭಾಮಂಟಪ, ನಂದಿಮಂಟಪ, ಉಯ್ಯಾಲೆ ಕಂಬ ಹಾಗೂ ಮಹಾದ್ವಾರ ಗೋಪುರಗಳನ್ನು  ಒಳಗೊಂಡ ವಿಸ್ತಾರವಾದ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಒಂದು ಅಡಿ ಎತ್ತರದ ಕಪ್ಪುಶಿಲೆಯಲ್ಲಿ ಕಡೆಯಲಾದ ನಯವಾದ ಶಿವಲಿಂಗವಿದೆ. ನವರಂಗದಲ್ಲಿ ಹೊಯ್ಸಳ ಶೈಲಿಯ ನಾಲ್ಕು ಕಂಬಗಳಿವೆ. ನವರಂಗದಲ್ಲಿ ಶಿವಲಿಂಗಕ್ಕೆ ಎದುರಾಗಿ ನಂದಿಯನ್ನು ಪ್ರತಿಷ್ಠಾಪಿಸಿರುವರು.

ನವರಂಗದಲ್ಲಿ ಗಣೇಶ ಹಾಗೂ ಪಶ್ಚಿಮಾಭಿಮುಖವಾಗಿ ಸ್ಥಾಪಿಸಲಾದ ಸೂರ್ಯನ ಮೂರ್ತಿ ಇದೆ. ಮುಖಮಂಟಪದ ಎದುರಿನಲ್ಲಿ ನಂದಿಯ ಶಿಲ್ಪವಿದ್ದು ಇದನ್ನು ಅಂಕಲಿ ಬಸವಣ್ಣ ಎಂದು ಕರೆಯುತ್ತಾರೆ. ನವರಂಗದ ಮುಂಭಾಗದ ಮಹಾ ಮಂಟಪವು ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ.

ಮಂಟಪದ ಇಕ್ಕೆಲಗಳಲ್ಲಿ ವೀರಭದ್ರ ಹಾಗೂ ಗೌರಮ್ಮ ದೇವರ ಗರ್ಭಗೃಹಗಳಿವೆ. ಮಹಾಮಂಟಪದ ಬಲಭಾಗದಲ್ಲಿ ವೀರಗಲ್ಲು ಇದ್ದು,ಇದನ್ನು ಈರಗಾರ ಹುಚ್ಚೇಶ್ವರ ಎಂದು ಕರೆಯುತ್ತಾರೆ. ಮಹಾಮಂಟಪದ ಮುಂಭಾಗದಲ್ಲಿ ನಂದಿ ಇದ್ದು ಇದನ್ನು ತೊಟ್ಟಿಪೆಳೆ ಬಸವಣ್ಣ ಎಂದು ಕರೆಯುತ್ತಾರೆ.ಗರ್ಭಗೃಹದ ಮೇಲೆ ಪಾಂಸನ ಮಾದರಿಯ ಶಿಖರವಿದೆ.

ಮಜ್ಜನ ಮಂಟಪ:
ದೇವಾಲಯದ ಹಿಂಬಾಗದಲ್ಲಿ ದೊಡ್ಡ ಮಜ್ಜನದ ಮಂಟಪವಿದ್ದು ಇಷ್ಟು ದೊಡ್ಡ ಮಂಟಪ ಬೇರೆಲ್ಲಿಯೂ ಇಲ್ಲವೆಂದು  ಹೇಳಲಾಗುತ್ತದೆ.

ಜಾತ್ರೆ :
ಕಲ್ಲೇಶ್ವರ ಜಾತ್ರೆ ಹಾಗೂ ನಂತರ ನಡೆಯುವ ದನಗಳ ಜಾತ್ರೆ ಪ್ರತಿವರ್ಷ ವೈಶಾಖ ಮಾಸದ ಹುಣ್ಣಿಮೆಯಲ್ಲಿ ಆರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ.ಐದನೇ ದಿನ ಮಹಾರಥೋತ್ಸವ ನಡೆಯುತ್ತದೆ.  ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದ ಲಕ್ಷಾಂತರ ಜನರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬೈ ಎಲೆಕ್ಷನ್ ಭರಾಟೆ, ಮುಂದುವರೆದ ಕೈ ಕಮಲ ಟ್ವೀಟ್ ವಾರ್

ಬೈ ಎಲೆಕ್ಷನ್ ಅಖಾಡಕ್ಕೆ ರಾಜಾಹುಲಿ ಎಂಟ್ರಿ..