ಬೆಂಗಳೂರು: ಕರ್ನಾಟಕದಲ್ಲಿ ದೊಡ್ಡ ನೈಸರ್ಗಿಕ ಸಂಪತ್ತಿದೆ. ಕರಾವಳಿ, ಪಶ್ಚಿಮ ಘಟ್ಟಗಳು, ನದಿಗಳು, ಅರಣ್ಯ , ಹತ್ತು ಅಗ್ರೋ ವಲಯಗಳ ಜೊತೆಗೆ ಒಳ್ಳೆಯದನ್ನು ಮಾಡುವ ಮನೋಗುಣವಿದೆ. ಬ್ರಿಟಿಷರ ವಿರುದ್ಧ ಝಾನ್ಸಿ ರಾಣಿಗೂ 40 ವರ್ಷಗಳ ಮುನ್ನವೇ ಹೋರಾಡಿದ್ದು ಕರ್ನಾಟಕದ ವೀರ ರಾಣಿ ಕಿತ್ತೂರು ಚೆನ್ನಮ್ಮ. ರಾಣಿ ಅಬ್ಬಕ್ಕ, ಕೆಳದಿ ಚನ್ನಮ್ಮ, ಒನಕೆ ಓಬವ್ವ ನಮ್ಮ ರಾಜ್ಯದವರು. ಈ ಮಣ್ಣಿನಲ್ಲಿ ಮಹಿಳೆಯರು ಉತ್ತಮ ಕಾರಣಗಳಿಗಾಗಿ ನಡೆದ ಹೋರಾಟಗಳಲ್ಲಿ ಯಾವಾಗಲೂ ಭಾಗಿಯಾಗಿದ್ದವರು. ನೀವೆಲ್ಲರೂ ಅಂಥ ವೀರ ಪರಂಪರೆಗೆ ಸೇರಿದವರು. ಇಂಥ ಶ್ರೀಮಂತ ಪರಂಪರೆಗೆ ಸೇರಿದವರು ಇಡೀ ಭಾರತದಲ್ಲಿ ಅತ್ಯುತ್ತಮ ಉದ್ಯಮಿಗಳಾಗಬೇಕು ಎಂದು ಕರೆ ನೀಡಿದರು.
ಉಬುಂಟು ಎಂಬ ಛತ್ರಿಯಡಿ 30 ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿವೆ. ಇದು ಇನ್ನೂ ಹೆಚ್ಚಬೇಕು. ಹಿಂದುಳಿದ , ಎಸ್.ಸಿ/ ಎಸ್.ಟಿ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಉಬುಂಟು ಕಾರ್ಯನಿರ್ವಹಿಸಬೇಕು. ಮಹಿಳಾ ಸಮುದಾಯ ಉದ್ಯಮ ಸಮುದಾಯವಾಗಿ ಪರಿವರ್ತನೆಗೊಳ್ಳಬೇಕು. ಮಹಿಳೆಯರು ಪುರುಷರಿಗಿಂತ ಹೆಚ್ಚು ಶ್ರಮಜೀವಿಗಳು, ಪ್ರಾಮಾಣಿಕರು ಹಾಗೂ ದಕ್ಷರಿದ್ದಾರೆ. ಇದು ಯಶಸ್ವಿ ಉದ್ಯಮಿಗಳಿಗಿರುವ ಗುಣಗಳು ಎಂದು ನುಡಿದರು.
2020-2025 ಕೈಗಾರಿಕಾ ನೀತಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಕಗಳು.
2019 ರ ಕೈಗಾರಿಕಾ ನೀತಿ ಒಳಗೊಂಡಿದ್ದ ಮಹಿಳಾ ಉದ್ಯಮಿಗಳಿಗೆ ನೀಡುವ ಪ್ರೋತ್ಸಾಹಕಗಳ ಅಧ್ಯಾಯವನ್ನು 2020- 2025 ರ ನೀತಿಯಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಮಹಿಳಾ ಉದ್ಯಮಿಗಳಿಗೆ ನೀಡುವ ಅನುದಾನದಲ್ಲಿ ರಿಯಾಯಿತಿ ಈಗಾಗಲೇ ನೀಡಲಾಗುತ್ತಿದ್ದು, ಜಮೀನು ಖರೀದಿಗೆ ರಿಯಾಯಿತಿ ಒದಗಿಸಲು ಚಿಂತನೆ ನಡೆಸಲಾಗುವುದು ಎಂದರು. ಐಟಿ ಬಿಟಿ ಗೆ ಇರುವ ರೀತಿಯಲ್ಲಿಯೇ ಕಾರ್ಯಕ್ರಮವನ್ನು ಮಹಿಳಾ ಉದ್ಯಮಿಗಳಿಗೆ ರೂಪಿಸಲಾಗುವುದು ಎಂದರು.