Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡ ಉಳಿಸಿ-ಬೆಳೆಸೋಣ: ಸಚಿವ ಬಿ.ಶ್ರೀರಾಮುಲು

Facebook
Twitter
Telegram
WhatsApp

ಚಿತ್ರದುರ್ಗ, (ನವೆಂಬರ್.01) : ಕನ್ನಡವನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಜೊತೆಯಾಗಿ ದುಡಿಯೋಣ, ಜೊತೆಯಾಗಿ ಬೆಳೆಸೋಣ ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದರು.
ಕನ್ನಡ ಎಂದರೆ ಪ್ರೀತಿ, ಕೀರ್ತಿ, ಶಕ್ತಿ, ಗೌರವ, ಹೆಮ್ಮೆ, ಹಿರಿಮೆ, ಉಸಿರಾಗಿದ್ದು, ಇದನ್ನು ಉಳಿಸಿ-ಬೆಳೆಸೋಣ. ಕವಿ ನಿಸಾರ್ ಅಹಮದ್ ಅವರು ಹೇಳುವ ಹಾಗೆ ಕನ್ನಡ ಉತ್ಸವ, ನಿತ್ಯೋತ್ಸವ ಆಗಲಿ ಎಂದು ಹಾರೈಸಿದರು.

ಹಿಂದಿ ಭಾಷೆ ನಂತರ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ಲಭಿಸಿದೆ. ಇದು ಕನ್ನಡ-ಕರ್ನಾಟಕದ ಶ್ರೀಮಂತಿಕೆ ಶ್ರೇಷ್ಠತೆಯನ್ನು ತೋರುತ್ತದೆ. ಕಲ್ಯಾಣ ಕರ್ನಾಟಕ-ಕಿತ್ತೂರು ಕರ್ನಾಟಕದ ಮೂಲಕ ನಮ್ಮ ಸರ್ಕಾರ ಕನ್ನಡ ಕಂಪನ್ನು ಹೆಚ್ಚಿಸಿದೆ. ಸರ್ಕಾರದಿಂದ ಮಾತಾಡ್ ಮಾತಾಡ್ ಕನ್ನಡ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಕನ್ನಡ ಉಳಿಸಿ ಬೆಳೆಸಲು ನಾವು ಬದ್ಧ ಎಂದು ಹೇಳಿದರು.

ಯಾವುದೇ ಆಚರಣೆ ಆಗಲಿ, ಹಬ್ಬವಾಗಲಿ ಅದರದ್ದೇ ಆದ ಮಹತ್ವ, ವಿಶೇಷತೆ, ಹಿರಿಮೆ, ಗರಿಮೆಗಳು ಇರುತ್ತವೆ ಹಾಗೆಯೇ ಒಂದು ಹಬ್ಬ ಎಂದರೆ ಅದರ ಹಿಂದೆ ಹಲವು ದಂತಕಥೆಗಳೂ ಇರುತ್ತವೆ. ಇಂತಹ ದಂತಕಥೆಗಳ ಯಶೋಗಾಥೆಯೇ ನಮ್ಮ ಏಕೀಕರಣ ಚಳುವಳಿ ಮತ್ತು ಅಖಂಡ ಕರ್ನಾಟಕ ರಚನೆ ಎಂದು ಹೇಳಿದರು. ಕನ್ನಡ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಹೋರಾಟ-ಕಿಚ್ಚು-ಸ್ವಾಭಿಮಾನ-ಅಭಿಮಾನಗಳ ದಂತಕಥೆಗಳನ್ನು ಸ್ಮರಿಸಿದರು.

ಆರ್.ಹೆಚ್.ದೇಶಪಾಂಡೆಯವರ ಹೋರಾಟ, ಆಲೂರು ವೆಂಕಟರಾಯರ ಕಿಚ್ಚು, ನಿಜಲಿಂಗಪ್ಪನವರ ಸ್ವಾಭಿಮಾನ ಹಾಗೂ ಜೆ.ಹೆಚ್.ಪಟೇಲರ ಕನ್ನಡ ಪ್ರೀತಿ ಅಭಿಮಾನದ ದಂತಕಥೆಗಳನ್ನು ಸಚಿವರು ಸ್ಮರಿಸಿದರು.
ಕನ್ನಡ ಹೋರಾಟ ಎಂದರೆ ಆರ್.ಹೆಚ್.ದೇಶಪಾಂಡೆ: ಕನ್ನಡ ಹೋರಾಟ ಎಂದರೆ ಆರ್.ಹೆಚ್.ದೇಶಪಾಂಡೆಯವರ ಹೋರಾಟದಂತಿರಬೇಕು. ಒಬ್ಬ ಕನ್ನಡ ವಿದ್ಯಾರ್ಥಿ ಒಬ್ಬ ಗುರುವಿನ ಶಕ್ತಿ ಏನು ಎಂದು ಜಗತ್ತಿಗೆ ತೋರಿಸಿಕೊಟ್ಟ ಶಕ್ತಿ ದೇಶಪಾಂಡೆಯವರು. ಏಕೀಕರಣದ ಮೊದಲ ಸಸಿ ನೆಟ್ಟವರಲ್ಲಿ ಪ್ರಮುಖರು. ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಏಕೀಕರಣ ಪರಿಷತ್ತು ಹೀಗೆ ಹಲವು ಸಂಘಗಳ ಸ್ಥಾಪನೆಗೆ ಕಾರಣವಾಗಿ ಅಂತಿಮವಾಗಿ ವಿಶಾಲ ಕರ್ನಾಟಕ ಸ್ಥಾಪನೆಗೆ ಕಾರಣವಾಯಿತು ಎಂದರು.

ಕನ್ನಡ ಕಿಚ್ಚೆಂದರೆ ಆಲೂರು ವೆಂಕಟರಾಯರು: ಒಂದು ಪುಸ್ತಕ ಕಿಚ್ಚನ್ನು ಹಚ್ಚಬಹುದು ಎಂದು ತೋರಿಸಿಕೊಟ್ಟವರು ವೆಂಕಟರಾಯರು. ಕರ್ನಾಟಕ ಗತ ವೈಭವ ಈ ಪುಸ್ತಕ ಏಕೀಕರಣ ಚಳವಳಿಯ ಶಕ್ತಿಯಾಗಿ ಜನಸಾಮಾನ್ಯರನ್ನು ಯುವಕರನ್ನು ಬಡಿದೆಬ್ಬಿಸಿ ಎಲ್ಲರೂ ಚಳುವಳಿಗೆ ಧುಮುಕುವಂತೆ ಮಾಡಿತು. ಕರ್ನಾಟಕ ಕುಲ ಪುರೋಹಿತ ಖ್ಯಾತಿಯ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಮೊದಲ ರಾಜ್ಯೋತ್ಸವ ಕಾರ್ಯಕ್ರಮ ನಡೆದಿದ್ದು, ಇಲ್ಲಿ ಸ್ಮರಣೀಯ ಎಂದರು.

ಕನ್ನಡಕ್ಕೆ ಸ್ವಾಭಿಮಾನ ಎಂದರೆ ನಿಜಲಿಂಗಪ್ಪ; ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮಾಜಿ ಮುಖ್ಯಮಂತ್ರಿ ಈ ಭಾಗದವರೆ ಆದ ದಿವಂಗತ ಎಸ್.ನಿಜಲಿಂಗಪ್ಪನವರ ಪಾತ್ರ ವಿಶೇಷ. ಕರುನಾಡನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಅವರ ಪಾತ್ರ ಪ್ರಮುಖ. ಕನ್ನಡಕ್ಕಾಗಿನ ಅವರ ಪ್ರೀತಿ, ಹಠ ಮತ್ತು ಸ್ವಾಭಿಮಾನ ಮಹತ್ವದಾಗಿದೆ ಎಂದರು.

ಕನ್ನಡದ ಪ್ರೀತಿ-ಅಭಿಮಾನ ಎಂದರೆ ಜೆ.ಹೆಚ್.ಪಟೇಲರು: ಆಡಳಿತ ನಡೆಸುವವರಲ್ಲಿ ಕನ್ನಡ ಪ್ರೀತಿ-ಅಭಿಮಾನ ಎಂದರೆ ಪಟೇಲರ ಪ್ರೀತಿ-ಅಭಿಮಾನದಂತಿರಬೇಕು. ಜನಪ್ರತಿನಿಧಿಯಾಗಿ ಕನ್ನಡ ಕುರಿತ ಅವರ ದಿಟ್ಟ ನಿಲುವುಗಳು ಮೆಚ್ಚುವಂತಹದು. ಸಂಸತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಮಾತನಾಡಿದ್ದಲ್ಲದೆ 5 ವರ್ಷ ಕನ್ನಡದಲ್ಲೇ ಮಾತನಾಡಿ ಅವರು ಎಂದೆಂದಿಗೂ ಎಲ್ಲರಿಗೂ ಮಾದರಿಯಾದರು. ಸಂಸತ್ತಿನಲ್ಲಿ ಅಂದಿನಿಂದಲೇ ಅನುವಾದಕರನ್ನು ನೇಮಿಸಲಾಯಿತು. ಭಾರತೀಯ ಭಾಷೆಗಳನ್ನು ಮಾತನಾಡುವ ಸಂಸದರಿಗೆ ಪಟೇಲರು ಸ್ಪೂರ್ತಿ, ಉತ್ಸಾಹ ತುಂಬಿದರು. ಕನ್ನಡದ ಶಕ್ತಿ ಜಗತ್ತಿಗೆ ಗೊತ್ತಾಗಬೇಕು ಎನ್ನುವುದು ಅವರ ವಾದವಾಗಿತ್ತು. ನಮ್ಮ ಭಾಷೆ ಬಗ್ಗೆ ಸ್ವಾಭಿಮಾನ ಇಲ್ಲಾ ಎಂದರೆ ಕನ್ನಡ ಬೆಳೆಯುವುದಿಲ್ಲ ಎಂದು ಹೇಳುತ್ತಿದ್ದರು.  ಹೀಗೆ ಪಟೇಲರು ಕನ್ನಡ ಪ್ರೀತಿ-ಸ್ವಾಭಿಮಾನಕ್ಕೆ ಮಾದರಿಯಾಗಿದ್ದರು ಎಂದು ಹೇಳಿದರು.
ನಮ್ಮ ಚಳುವಳಿ ಹಾಗೂ ಗತವೈಭವವನ್ನು ನೆನೆಯುವುದು, ಮುಂದಿನ ಪೀಳಿಗೆ ಅಂದರೆ ನಮ್ಮ ಯುವಕರ ಹಾಗೂ ನಮ್ಮೆಲ್ಲರ ಮೇಲಿರುವ ಮಹತ್ವದ ಜವಾಬ್ದಾರಿಯನ್ನು ತಿಳಿಯುವುದಾಗಿದೆ. ಈ ಸಂದರ್ಭದಲ್ಲಿ ಬೆಳಗಲ್ ರಾಮರಾಯರಿಂದ ಹಿಡಿದು ಡೆಪ್ಯೂಟಿ ಚನ್ನಬಸಪ್ಪ, ಕಾರ್ನಾಡ್ ಸದಾಶಿವರಾವ್ ವರೆಗೆ, ಕುವೆಂಪುರಿಂದ ಕಾರಂತರವರೆಗೆ ಈ ಚಳುವಳಿ ಹಾಗೂ ಕನ್ನಡ ಕೃಷಿ ಮಾಡಿದ ಎಲ್ಲರನ್ನೂ ಸ್ಮರಿಸುತ್ತೇನೆ. ಕನ್ನಡ ರಕ್ಷಣೆಗೆ ನಿಂತ ಪ್ರತಿ ಕನ್ನಡಿಗ, ಕನ್ನಡ ಶಿಕ್ಷಕ ಹಾಗೂ ಸಾಹಿತ್ಯ ಲೋಕ, ಸಿನಿಮಾ ಲೋಕದ ಪ್ರತಿಯೊಬ್ಬರನ್ನು ಅವರ ಕನ್ನಡ ಸೇವೆಗೆ ಒಬ್ಬ ಕನ್ನಡ ವಿದ್ಯಾರ್ಥಿಯಾಗಿ ಸ್ಮರಿಸುತ್ತೇನೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ.ಎಚ್.ಲಿಂಗಪ್ಪ, ಧನಂಜಯ ಮೆಂಗಸಂದ್ರ, ಡಾ.ಪಿ.ಬಿ.ಶಿವಣ್ಣ. ಕಲಾವಿದರ ಕ್ಷೇತ್ರದಲ್ಲಿ ನೇಹ ಮಲ್ಲೇಶ್, ಎಂ.ಬಿ.ಬೋರಯ್ಯ. ಪತ್ರಿಕೋದ್ಯಮದಲ್ಲಿ ರವಿಕುಮಾರ್ ಎಸ್.ಬಿ, ಆಲೂರು ಹನುಮಂತರಾಯಪ್ಪ. ಸಮಾಜಸೇವೆಯಲ್ಲಿ ಗಾಯತ್ರಿ ಶಿವರಾಮ್, ಈ.ಅರುಣ್ ಕುಮಾರ್, ಎಸ್.ಷಣ್ಮುಖಪ್ಪ. ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಎಂ.ಎಚ್.ರಘುನಾಥರೆಡ್ಡಿ. ಕ್ರೀಡಾ ಕ್ಷೇತ್ರದಲ್ಲಿ ಕು.ಎಂ.ಅನಿತ ಮಹಂತೇಶ್ (ಟೈಕ್ವೊಂಡೋ), ಯಶಸ್ ಪಿ (ಕ್ಯೂಬ್ ಮಸೈಕ್). ಯೋಗದಲ್ಲಿ ಎಸ್.ಆರ್.ಸಂತೋಷ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಸ್ತ್ರಿಶಕ್ತಿ ಸ್ವ-ಸಹಾಯ ಗುಂಪುಗಳ ಆಹಾರ: ಬಹುಮಾನ ವಿಜೇತ ಸಂಘಗಳಿಗೆ ಸನ್ಮಾನ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಈಚೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳ ಆಹಾರ ಮೇಳದಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿಜೇತ ಸಂಘಗಳ ಸದಸ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿ ಗೌರವಿಸಿದರು.

ಪ್ರಥಮ ಸ್ಥಾನ ಪಡೆದ ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನೆಯ ಅಲ್ಲಾಮೀನ್ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘ, ದ್ವಿತೀಯ ಸ್ಥಾನ ಪಡೆದ ಭರಮಸಾಗರ ಯೋಜನೆಯ  ಕೋಗುಂಡೆಯ ಸ್ವಾಮಿ ವಿವೇಕಾನಂದ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ಹಾಗೂ ತೃತೀಯ ಸ್ಥಾನ ಪಡೆದ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಶ್ರೀ ಬನಶಂಕರಿ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ಹಾಗೂ ಚಳ್ಳಕರೆ ತಾಲ್ಲೂಕಿನ ಕಸ್ತೂರಿ ತಿಮ್ಮನಹಳ್ಳಿ ಶ್ರೀನಂದಿತಾ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ಸಮಾಧಾನಕರ ಬಹುಮಾನ ಪಡೆದ ಹಿರಿಯೂರು ತಾಲ್ಲೂಕಿನ ವಿ.ವಿ.ಪುರದ ಶ್ರೀ ನಂದಿನಿ ಆದರ್ಶ ಮಹಿಳಾ ಸ್ತ್ರೀಶಕ್ತಿ ಸ್ವಸಹಾಯ ಸಂಘ ಮತ್ತು ಹೊಸದುರ್ಗ ತಾಲ್ಲೂಕಿನ ದೇವಿಗೆರೆ ಶ್ರೀ ಪಾರ್ವತಿ ಸ್ತ್ರೀಶಕ್ತಿ ಸ್ವಸಹಾಯ ಸಂಘ ಹಾಗೂ ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರದ ಶ್ರೀ ಸರಸ್ವತಿ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರಿಗೆ ಸನ್ಮಾನಿಸಲಾಯಿತು.
ಚಿತ್ರದುರ್ಗದ ಎಸ್‍ಆರ್‍ಎಸ್ ಶಾಲೆಯ ವಿದ್ಯಾರ್ಥಿಗಳು, ವಿದ್ಯಾ ವಿಕಾಸ ಶಾಲೆಯ ವಿದ್ಯಾರ್ಥಿಗಳು ಹಾಗೂ ಎಸ್‍ಜೆಎಂ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಸಂಸ್ಕøತಿ ಹಾಗೂ ಮಹತ್ವವನ್ನು ಸಾರುವಂತಹ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಶ್ರೀಭುವನೇಶ್ವರಿ ಭಾವಚಿತ್ರ ಹಾಗೂ ಕಲಾತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರಣಿಗೆ ನಡೆಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ ಶ್ರೀಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರಿನಾಥ್, ನಗರಸಭೆ ಅಧ್ಯಕ್ಷ ಬಿ.ತಿಪ್ಪಮ್ಮ. ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಹಲವು ಗಣ್ಯರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!