ನಿಮ್ಮ ಕಾಂಗ್ರೆಸ್ ನಲ್ಲಿರುವ ಪಾರ್ಥೇನಿಯಂ ಗಿಡಗಳು ನಮ್ಮಲ್ಲಿಲ್ಲ : ಸಿಎಂ ಸಿದ್ದರಾಮಯ್ಯ ಅವರಿಗೆ ವಿಜಯೇಂದ್ರ ತಿರಗೇಟು

suddionenews
2 Min Read

ರಾಜ್ಯ ಬಿಜೆಪಿ ಪಕ್ಷದ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ಈಗಿನ ಅಧ್ಯಕ್ಷ ವಿಜಯೇಂದ್ರ ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ತಂದೆ-ಮಕ್ಕಳ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವ ಕಸರತ್ತಿನ ತಯಾರಿ ಭರದಿಂದ ನಡೆಯುತ್ತಿದೆ. ಇದಕ್ಕೆ ಆರ್.ಎಸ್.ಎಸ್ ನ ಒಂದು ಬಣದ ಆಶೀರ್ವಾದ ಕೂಡಾ ಇದೆ ಎಂದು ಹೇಳಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿರುವ ಬಿ.ವೈ.ವಿಜಯೇಂದ್ರ ಅವರು, ನಿಮ್ಮ ಕಾಂಗ್ರೆಸ್ ನಲ್ಲಿರುವ ಪಾರ್ಥೇನಿಯಂ ಗಿಡಗಳು ನಮ್ಮಲ್ಲಿಲ್ಲ ಎಂದಿದ್ದಾರೆ.

 

ಮಾನ್ಯ ಸಿದ್ದರಾಮಯ್ಯ ಅವರೇ,
ಭಾರತೀಯ ಜನತಾ ಪಾರ್ಟಿ ತತ್ವ, ಸಿದ್ದಾಂತ ಆಧರಿಸಿದ ಶಿಸ್ತಿನ ಪಕ್ಷ. ಕಳೆಯಿಲ್ಲದೆ ಬೆಳೆದು ನಿಂತಿರುವ ಸಮೃದ್ಧ ತೋಟ, ನಿಮ್ಮ ಕಾಂಗ್ರೆಸ್ ನಲ್ಲಿರುವ ಪಾರ್ಥೇನಿಯಂ ಗಿಡಗಳು ನಮ್ಮಲ್ಲಿಲ್ಲ, ಅಧಿಕಾರಕ್ಕಾಗಿ ಹಪಾಹಪಿಸುವ ಕಳ್ಳಿ ಗಿಡಗಳಾವುವೂ ನಮ್ಮ ಪಕ್ಷದಲ್ಲಿ ತಲೆಯೆತ್ತಲು ಸಾಧ್ಯವಿಲ್ಲ. ತಲೆ ಎತ್ತಲು ಹೋದರೆ ಅದಕ್ಕೆ ಮದ್ದು ನೀಡುವಷ್ಟು ನಮ್ಮ ವರಿಷ್ಠ ಮಂಡಳಿಯು ಸಶಕ್ತವಾಗಿದೆ.

ಭಾರತದ ರಾಜಕೀಯ ಭೂಪಟದಲ್ಲಿ ಮಾಸಿ ಹೋಗುತ್ತಿರುವ ನಿಮ್ಮ ಕಾಂಗ್ರೆಸ್ ಪಕ್ಷ ಅಧಿಕಾರ ಕಬಳಿಸುವುದನ್ನಷ್ಟೇ ಕೇಂದ್ರೀಕರಿಸಿ ಸುಳ್ಳು ಭರವಸೆಗಳು ಹಾಗೂ ಆಮಿಷಗಳ ಬಲೆ ಹೆಣೆದು ಕರ್ನಾಟಕದಲ್ಲಿ ಅಧಿಕಾರ ದಕ್ಕಿಸಿಕೊಂಡಿದೆ. ಲೋಕಸಭಾ ಚುನಾವಣೆಯ ನಂತರ ಈ ಟೊಳ್ಳು ಬಲೆಯನ್ನು ಜನರೇ ತುಂಡರಿಸಲಿದ್ದಾರೆ, ನಿಮ್ಮ ಬಣ ರಾಜಕೀಯದ ಕಿತ್ತಾಟದ ಬಣ್ಣ ಶೀಘ್ರದಲ್ಲೇ ಬಯಲಿಗೆ ಬರಲಿದೆ.

ದೀಪ ಆರುವ ಮುನ್ನ ಜೋರಾಗಿ ಹೊತ್ತಿ ಉರಿಯುತ್ತದೆ, ಕಾಲವೇ ನಿಮಗೆ ಉತ್ತರ ಹೇಳಲಿದೆ. ಯಾರು ಯಾರ ವಿರುದ್ಧ ಮುಗಿ ಬೀಳುತ್ತಾರೆ? ಯಾರು ಎಲ್ಲಿರುತ್ತಾರೆ? ಎಂಬುದನ್ನು ಕೆಲವೇ ದಿನಗಳು ಕಾದುನೋಡಿ ನಿಮ್ಮ ಕಾಂಗ್ರೆಸ್ ಪಡಸಾಲೆಯಲ್ಲೇ ನಿಮಗೆ ಉತ್ತರ ಸಿಗಲಿದೆ.

ನೀವು ಮುಖ್ಯಮಂತ್ರಿಯಾಗುವ ವೇಳೆ ಡಿಕೆ ಶಿವಕುಮಾರ್ ಅವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಬದಿಗೊತ್ತಿ ಹೈಕಮಾಂಡ್ ಸೂತ್ರ ಧಿಕ್ಕರಿಸುವ ನಿಮ್ಮ ತಂತ್ರದ ಜಾಡು ಹಿಡಿದಿರುವ ನಿಮ್ಮ ವಿರೋಧಿ ಬಣ ಸುಮ್ಮನೆ ಕುಳಿತಿಲ್ಲ, ಮುಖ್ಯಮಂತ್ರಿ ಅಧಿಕಾರ ಹಂಚಿಕೆಯ ಕಾಲ ಸನ್ನಿಹಿತವಾಗುವುದರೊಳಗೇ ಪರಿಸ್ಥಿತಿ ಯಾವ ರೀತಿ ಬಿಗಡಾಯಿಸುತ್ತದೆ ಎನ್ನುವುದನ್ನು ಕಾಂಗ್ರೆಸ್ ನಲ್ಲಿ ವ್ಯೂಹ ರಚಿಸುವ ಬಂಡೆಯೊಂದು ಈಗಾಗಲೇ ಸದ್ದು ಮಾಡುತ್ತಿದೆ ಎಂದು ಪ್ರತ್ಯುತ್ತರ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *