ಗೀತಾ ಭರಮಸಾಗರ
ಶಿಕ್ಷಕರು, ಲೇಖಕರು
ಚಿತ್ರದುರ್ಗ, Ph :9113694200
ಸುದ್ದಿಒನ್, ಅಕ್ಟೋಬರ್. ಅಕ್ಟೋಬರ್. 31 : ನವೆಂಬರ್ 1 ಎಂದರೆ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಹೆಮ್ಮೆಯ ಭಾವನೆ ಮೂಡಿಸುವ ಪವಿತ್ರ ದಿನ. ಕನ್ನಡಿಗರ ಬಹುದಿನಗಳ ಹೋರಾಟ, ತ್ಯಾಗ, ಪರಿಶ್ರಮ ಮತ್ತು ಕನಸಿನ ಫಲವಾಗಿ 1956 ರ ನವೆಂಬರ್ 1ರಂದು ಕನ್ನಡ ಭಾಷೆ ಮಾತನಾಡುವ ಪ್ರದೇಶಗಳೆಲ್ಲವೂ ಒಂದಾಗಿ ಮೈಸೂರು ರಾಜ್ಯ ಉದಯವಾಯಿತು. ನಂತರ 1973 ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ ‘ ಎಂದು ನಾಮಕರಣ ಮಾಡಲಾಯಿತು. ಈ ಐತಿಹಾಸಿಕ ದಿನವನ್ನು ನಾವು ಕನ್ನಡ ರಾಜ್ಯೋತ್ಸವವಾಗಿ ಆಚರಿಸುತ್ತೇವೆ.
ಆದರೆ ಇಂದು ನಮ್ಮ ಮುಂದಿರುವ ಬಹುದೊಡ್ಡ ಪ್ರಶ್ನೆ ಎಂದರೆ,ನಾವು ನಿಜವಾಗಿಯೂ ಕನ್ನಡವನ್ನು ಉಳಿಸುತ್ತಿದ್ದೇವೆಯೇ? ಅಥವಾ ವರ್ಷಕ್ಕೊಮ್ಮೆ ಕನ್ನಡದ ಬಾವುಟ ಹಾರಿಸಿ, ಕನ್ನಡದ ಘೋಷಣೆಗಳನ್ನು ಕೂಗಿ,ನಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸುತ್ತಿದ್ದೇವೆಯೇ?
ಕರ್ನಾಟಕ ಕೇವಲ ಒಂದು ಭೌಗೋಳಿಕ ರಾಜ್ಯವಲ್ಲ, ಇದು ಇಡೀ ಭಾರತೀಯ ನಾಗರೀಕತೆಯ ಬೆನ್ನೆಲುಬನ್ನು ಕಟ್ಟಿಕೊಟ್ಟ ನಾಡು. ಕರ್ನಾಟಕ ಎಂದರೆ ಕೇವಲ ಹೆಸರಲ್ಲ. ಇಂದಿನ ಜಾಗತಿಕ ಮಟ್ಟದ ನಕ್ಷೆಯಲ್ಲಿ ಕರ್ನಾಟಕ ಕೇವಲ ಸಾಂಸ್ಕೃತಿಕ ಪರಂಪರೆಯನ್ನಷ್ಟೇ ಅಲ್ಲದೆ, 8 ಜ್ಞಾನಪೀಠ ಪ್ರಶಸ್ತಿಗಳ ಗರಿಮೆಯನ್ನು ಹೊಂದಿ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ವೈದ್ಯಕೀಯ, ಕೈಗಾರಿಕೆ, ಆರ್ಥಿಕ ಹಾಗೂ ಇತರ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತದ ಪರಂಪರೆಯಲ್ಲಿ ಕರ್ನಾಟಕ ಪ್ರಮುಖ ಕೇಂದ್ರವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಪ್ರಸ್ತುತ ಕನ್ನಡದ ಅಸ್ಮಿತೆಯನ್ನು ಕನ್ನಡಿಗರು ಪ್ರಶ್ನಿಸಿಕೊಂಡಾಗ ಎಲ್ಲಾ ಕಡೆ ಆಂಗ್ಲ ಭಾಷೆ ಆವರಿಸಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ, ಕನ್ನಡ ಎನ್ನುವ ಭಾಷೆಯ ಸಿಹಿ, ಆತ್ಮಕ್ಕೆ ತಾಕುವ ಅಪ್ಯಾಯತೆ, ಮನಸ್ಸನ್ನು ಉಲ್ಲಸಿತಗೊಳಿಸುವ ಸಂವಹನದಿಂದ ಇಂದಿನ ಪೀಳಿಗೆ ಹೇಗೆ ವಂಚಿತರಾಗುತ್ತಿದ್ದಾರೆ ಎನ್ನುವುದನ್ನು ಅರ್ಥೈಸಿಕೊಳ್ಳುವ ಸಂದಿಗ್ಧ ಸ್ಥಿತಿ ನಮ್ಮೆದುರಿಗಿದೆ.
ಈಗಾಗಲೇ ಇಂಗ್ಲೀಷಿನ ಪ್ರಭಾವದಿಂದ ಕನ್ನಡ ಎಲ್ಲಿ ಎಂದು ಹುಡುಕುವ ಸ್ಥಿತಿಯನ್ನು ತಲುಪಿದ್ದೇವೆ. ‘ಕನ್ನಡ ‘ದ ಅಗತ್ಯವೇನು ಎಂದು ಸರಿಯಾಗಿ ಕನ್ನಡಿಗರಿಗೆ ತಿಳಿಸುವ ಎಲ್ಲಾ ಬಾಗಿಲುಗಳು ಒಂದೊಂದಾಗಿ ಮುಚ್ಚುತ್ತಿವೆ. ಈಗ ಶಿಕ್ಷಣ ಯಾವ ಮಾಧ್ಯಮದಲ್ಲಿ ಇರಬೇಕು ಎನ್ನುವ ಪ್ರಶ್ನೆಯಿಂದ ಬಲು ದೂರ ಬಂದುಬಿಟ್ಟಿದ್ದೇವೆ. ಆಂಗ್ಲ ಮಾಧ್ಯಮವನ್ನು ಅಪ್ಪಿಕೊಂಡಾಗಿದೆ. ಎಷ್ಟೇ ಬರೆದರೂ, ವಾದಿಸಿದರು, ಬಡಿದಾಡಿಕೊಂಡರೂ, ಆಂಗ್ಲ ಮಾಧ್ಯಮದ ಶಿಕ್ಷಣದಿಂದ ಹೊರಬರಲು ಆಗದಷ್ಟು ಆಳಕ್ಕೆ ಹೂತು ಹೋಗಿದ್ದೇವೆ.
‘ಕನ್ನಡ ‘ ದ್ರೋಹವೆಂಬುದು ಕನ್ನಡಿಗರಿಂದಲೇ ಆಗುವಂಥದ್ದು. ಕೇವಲ ತುಟಿ ತೃಪ್ತಿಯ ಕನ್ನಡ ನಿಷ್ಪ್ರಯೋಜಕ. ಅದೊಂದು ಮನೋಧರ್ಮವಾಗಬೇಕು. ಪ್ರತಿ ಕನ್ನಡಿಗನಿಗೆ ರಾಷ್ಟ್ರಧರ್ಮದ ಅರಿವಿನ ಅಗತ್ಯತೆ ಇಂದಿನ ತುರ್ತಾಗಿದೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂದು ಪ್ರಶ್ನಿಸಿಕೊಳ್ಳುವ ಈ ಹೊತ್ತಿನಲ್ಲಿ ಹಿಂದಿ, ಇಂಗ್ಲೀಷ್ ಭಾಷೆಗಳ ಹಾವಳಿಯ ನಡುವೆ ಬಲವಾದ ಪ್ರತಿರೋಧವಿಲ್ಲದೆ ನಾವು ಕನ್ನಡವನ್ನು ಕಟ್ಟಲಾರೆವು.
ಬ್ರಿಟಿಷರ ಕಾಲದಲ್ಲಿ ಕನ್ನಡ ಕಲಿಕೆಗಿದ್ದ ಮುಕ್ತ ಅವಕಾಶಗಳನ್ನು ನಮ್ಮ ನಡುವಿರುವ ಶೈಕ್ಷಣಿಕ ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಪ್ರಾಧಿಕಾರಗಳು, ಪರಿಷತ್ತುಗಳು, ಇಂದು ವ್ಯವಸ್ಥಿತವಾಗಿ ಕನ್ನಡ ಭಾಷೆಯನ್ನು ಹೂಳುತ್ತಿರುವುದಕ್ಕೆ ಸಾಕ್ಷಿಯಾಗಿವೆ. ಏಕೆಂದರೆ ಇಂದು ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿ ಬರೀ ಪಳೆಯುಳಿಕೆಯಂತೆ ಕನ್ನಡ ಅಸ್ಮಿತೆಗೆ ಮೂಕ ಸಾಕ್ಷಿಯಾಗಿ ನಿಂತಿವೆ.
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು 18 ವರ್ಷಗಳಾದರೂ ಅದನ್ನು ಯೋಗ್ಯ ರೀತಿಯಲ್ಲಿ ಕಟ್ಟಿ ಬೆಳೆಸಿಕೊಳ್ಳುವ ಮನಸ್ಸು ಕನ್ನಡಿಗರಿಗೆ ಇಲ್ಲವಾಗಿದೆ. ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ ನಡೆದ ಹೋರಾಟದ ಒಂದಂಶವೂ ಅದು ಬಂದ ಮೇಲೆ ಅದರ ಕೆಲಸವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕನ್ನಡ ಭಾಷೆ ಎದುರಿಸುತ್ತಿರುವ ಜ್ವಲಂತ ಬಿಕ್ಕಟ್ಟುಗಳನ್ನು ಆದ್ಯತೆಯ ಮೇರೆಗೆ ಚರ್ಚಿಸಬೇಕಾದ ಇಂದು ಎಲ್ಲರೂ ಇಂಗ್ಲೀಷ್, ಹಿಂದಿ ಭಾಷೆಗಳ ಕೈಗೊಂಬೆಯಾಗಿದ್ದೇವೆ.
ಕನ್ನಡಕ್ಕೆ ಅಪಾಯ ಒದಗಿದಾಗಲೆಲ್ಲ ನೂರಾರು, ಸಾವಿರಾರು ಕನ್ನಡದ ಕಲಿಗಳು ಕನ್ನಡಮ್ಮನ ರಕ್ಷಣೆಗೆ ನಿಂತು ಅವಿರತವಾಗಿ ಹೋರಾಡಿ, ರಕ್ಷಿಸಿ, ಪೋಷಿಸುತ್ತಿದ್ದಾರೆ ಕನ್ನಡ ಕಲಿಗಳ ಸಂಕಲ್ಪವೇ ಅಂಥದ್ದು. ಕನ್ನಡವನ್ನು ಭಾವನಾತ್ಮಕವಾಗಿ, ವ್ಯವಹಾರಿಕವಾಗಿ ನೋಡುತ್ತೇವೆ. ಕನ್ನಡವೆಂಬುದು ಕೆಲವರಿಗೆ ಭಾವ ಜಗತ್ತು. ಅಂಥವರು ಅದನ್ನು ಕುರಿತು ಮಾತಾಡುವ, ಚಿಂತಿಸುವ ಕೆಲಸ ಮಾಡುತ್ತಾರೆ. ಕರ್ನಾಟಕ ‘ ಸರ್ವ ಜನಾಂಗದ ಶಾಂತಿಯ ತೋಟ’. ಇಲ್ಲಿ ಕನ್ನಡ ಕಲಿಯದಿದ್ದರೂ ಬದುಕಬಹುದೆಂಬುದನ್ನು ನಾವೇ ಅವಕಾಶ ಮಾಡಿಕೊಟ್ಟಿದ್ದೇವೆ.
” ನಮಗೆ ಮೂರು ಏಕೀಕರಣ ಬೇಕು, ಕನ್ನಡದ ಏಕೀಕರಣ, ಕನ್ನಡಿಗರ ಏಕೀಕರಣ, ಕರ್ನಾಟಕದ ಏಕೀಕರಣ…. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವೆಂದು ನಾವು ಆಚರಣೆ ತರದಿದ್ದರೆ, ಕಟ್ಟೆ ಇಲ್ಲದ ಕೆರೆಯಂತೆ, ದಂಡೆಯೊಡೆದ ನದಿಯಂತೆ, ಕನ್ನಡವು ಹುಚ್ಚು ಹೊಳೆ ಯಾದೀತು, ” ಕನ್ನಡ ಮನೆಯಲ್ಲಿ ಕನ್ನಡತಿ ಯಜಮಾನಿ, ಮಿಕ್ಕ ಹೆಂಗಸರೆಲ್ಲ ಒಕ್ಕಲಷ್ಟೇ ” ಎನ್ನುವ ದ. ರಾ ಬೇಂದ್ರೆಯವರ ಮಾತನ್ನು ಉಲ್ಲೇಖಿಸುತ್ತಾ ನಾವಿಂದು ಕನ್ನಡವನ್ನು ಕಟ್ಟಲು ಹೃದಯದ ಔದಾರ್ಯತೆಯನ್ನು ತೋರುವ ಒತ್ತಡದ ವ್ಯವಸ್ಥೆಯೊಳಗೆ ಸಿಲುಕಿದ್ದೇವೆ.
ಇಂದಿನ ಜಾಗತೀಕರಣ ಮತ್ತು ತಂತ್ರಜ್ಞಾನದ ಯುಗದಲ್ಲಿ ಕನ್ನಡ ಭಾಷೆ ಹಲವಾರು ಸವಾಲುಗಳನ್ನು ಒಡ್ಡಿಕೊಂಡಿದೆ. ಇದರಿಂದಾಗಿ ಕನ್ನಡಿಗರು ಇಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನು ಕಲಿಯುದರಲ್ಲಿ ತಪ್ಪಿಲ್ಲ. ಆದರೆ ಅನ್ಯ ಭಾಷೆಗಳನ್ನು ಕಲಿಯುವ ಭರದಲ್ಲಿ ನಮ್ಮ ಮಾತೃಭಾಷೆಯನ್ನು ಮರೆಯಬಾರದು. ಅನ್ಯ ಭಾಷೆಗಳ ಮೇಲಿನ ಗೌರವದ ಜೊತೆಗೆ ಮಾತೃಭಾಷೆಯ ಮೇಲಿನ ಅಭಿಮಾನವು ಇರಬೇಕು. ಕನ್ನಡದ ಭವಿಷ್ಯ ಕೇವಲ ಭಾವುಕ ಘೋಷಣೆಗಳಿಂದ ನಿರ್ಮಾಣವಾಗುವುದಿಲ್ಲ. ಕನ್ನಡದಲ್ಲಿ ಗುಣಮಟ್ಟದ ಶಿಕ್ಷಣ, ಸಂಶೋಧನೆ, ಉದ್ಯೋಗಾವಕಾಶ, ಆಡಳಿತ, ಸಾಹಿತ್ಯ ಮತ್ತು ತಂತ್ರಜ್ಞಾನ ಬೆಳವಣಿಗೆಯಿಂದ ಸಾಧ್ಯವಾಗುತ್ತದೆ.

ಕನ್ನಡ ರಾಜ್ಯೋತ್ಸವವೆಂದರೆ ಕೇವಲ ಒಂದು ದಿನದ ಸಂಭ್ರಮವಲ್ಲ. ಅದು ನಮ್ಮ ಭಾಷೆಯ ಸ್ಥಿತಿಗತಿಗಳನ್ನು ಪರಿಶೀಲಿಸುವ, ತಪ್ಪುಗಳನ್ನು ತಿದ್ದಿಕೊಳ್ಳುವ ಮತ್ತು ಕನ್ನಡದ ಅಭಿವೃದ್ಧಿಗೆ ಹೊಸ ಸಂಕಲ್ಪ ಮಾಡುವ ದಿನವಾಗಬೇಕು.
ಕನ್ನಡವನ್ನು ಕೇವಲ ಹೃದಯದಲ್ಲಿ ಪ್ರೀತಿಸುವುದಲ್ಲ. ನಿತ್ಯ ಜೀವನದಲ್ಲಿ ಬಳಸಬೇಕು. ಕನ್ನಡವನ್ನು ಕೇವಲ ಹೊಗಳುವುದಲ್ಲ, ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು.
ಕನ್ನಡ ಉಳಿದರೆ ಕನ್ನಡಿಗರ ಅಸ್ಮಿತೆ ಉಳಿಯುತ್ತದೆ. ಕನ್ನಡ ಬೆಳೆದರೆ ಕರ್ನಾಟಕದ ಭವಿಷ್ಯ ಬೆಳಗುತ್ತದೆ.
ಕನ್ನಡ ರಾಜ್ಯೋತ್ಸವದ ನಿಜವಾದ ಯಶಸ್ಸು ನಮ್ಮ ಭಾಷೆಯ ಬಗ್ಗೆ ಮಾತನಾಡುವುದರಲ್ಲಿಲ್ಲ. ಕನ್ನಡದ ಮೂಲಕ ಬದುಕುವ, ಕಲಿಯುವ, ದುಡಿಯುವ ಮತ್ತು ಮುಂದಿನ ಪೀಳಿಗೆಗೆ ಕನ್ನಡವನ್ನು ಹೆಮ್ಮೆಯಿಂದ ಹಸ್ತಾಂತರಿಸುವ ಸಂಕಲ್ಪದಲ್ಲಿದೆ.
ಗೀತಾ ಭರಮಸಾಗರ
ಶಿಕ್ಷಕರು, ಲೇಖಕರು
ಚಿತ್ರದುರ್ಗ
Ph :9113694200














