ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 10 : ಶಿಕ್ಷಣವೆಂದರೆ ದೊಡ್ಡ ದೊಡ್ಡ ಕಟ್ಟಗಳನ್ನು ನೋಡಿ ನಿರ್ಧರಿಸುವುದು ಸರಿಯಲ್ಲ. ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಹೆಚ್ಚಿನ ಅಂಕಗಳನ್ನು ಗಳಿಸುವಂತೆ ಸಿದ್ದಪಡಿಸುವುದು ಶಿಕ್ಷಕರುಗಳ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಕೆ.ಜಿ.ಜಗದೀಶ್ ತಿಳಿಸಿದರು.
ಹೊಸಪೇಟೆಯಿಂದ ಬೆಂಗಳೂರಿಗೆ ಹೊರಟಿದ್ದ ಅವರು ಚಿತ್ರದುರ್ಗ ಹೊರವಲಯ ದಾವಣಗೆರೆ ರಸ್ತೆಯಲ್ಲಿರುವ ಮೇದಾರ ಕೇತೇಶ್ವರ ಮಹಾ ಮಠಕ್ಕೆ ಭೇಟಿ ನೀಡಿ ಸ್ವಾಮಿಗಳಿಂದ ಆಶೀರ್ವಾದ ಪಡೆದು ನಂತರ ಮಾತನಾಡಿದರು.
ಮಠದ ಆವರಣದಲ್ಲೆಲ್ಲಾ ಸುತ್ತಾಡಿ ಶಾಲೆ ಹಾಗೂ ಕಟ್ಟಡಗಳನ್ನು ವೀಕ್ಷಿಸಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಬಡವರ ಮಕ್ಕಳೆ ಹೆಚ್ಚಾಗಿ ದಾಖಲಾಗುತ್ತಾರೆ. ಖಾಸಗಿ ಶಾಲೆಗಳವರು ಬೃಹಧಾಕಾರವಾದ ಕಟ್ಟಡಗಳನ್ನು ಕಟ್ಟಿ ಪೋಷಕರು ಮತ್ತು ಮಕ್ಕಳನ್ನು ಆಕರ್ಷಿಸುವುದು ಸಹಜ. ಆದರೆ ಬಡ ಮಕ್ಕಳು ಖಾಸಗಿ ಶಾಲೆಗಳಿಗೆ ಸೇರುವಂತ ಸ್ಥಿತಿಯಲ್ಲಿರುವುದಿಲ್ಲ. ನಿರ್ವಂಚನೆಯಿಂದ ಮಕ್ಕಳಿಗೆ ಪಾಠ ಹೇಳಿಕೊಟ್ಟು ಸರ್ಕಾರಿ ಶಾಲೆಗಳಿಗೆ ಒಳ್ಳೆಯ ಕೀರ್ತಿ ತರಬೇಕೆಂದು ಶಿಕ್ಷಕರುಗಳಿಗೆ
ಸೂಚಿಸಿದರು.
ಮೇದಾರ ಕೇತೇಶ್ವರ ಮಹಾ ಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ, ಮಠದ ಅಧ್ಯಕ್ಷ ಸಿ.ಪಿ.ಪಾಟೀಲ್, ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರುಗಳಾದ ಮಹೇಶ್ ಅಂಗಡಿ, ದುರ್ಗಾನಾಯ್ಕ, ತಹಶೀಲ್ದಾರ್ ಗೋವಿಂದರಾಜ್, ಪರಿಶಿಷ್ಟ ಪಂಗಡ ಇಲಾಖೆಯ ಅಧಿಕಾರಿ ದಿವಾಕರ್, ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶರಣಪ್ಪ ಹಾಗೂ ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಹಾಜರಿದ್ದರು.














