ಬೆಂಗಳೂರು: ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಬಸವಣ್ಣನವರನ್ನು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಬಸವ ಸಂಸ್ಕೃತಿ ಅಭಿಯಾನ 2025ರ ಸಮಾರೋಪ ಸಮಾರಂಭದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿದ್ಯದಲ್ಲಿ ಸುಮಾರು 2ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೆ ವೇಳೆ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡುತ್ತಾ, ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ.
ಈಗಾಗಲೇ ಕರ್ನಾಟಕ ಸರ್ಕಾರ ಬಸವಣ್ಣನವರ ತತ್ವಕ್ಕೆ ಒಂದು ರಾಜಮನ್ನಣೆಯನ್ನು ನೀಡಿದೆ. ಅದುವೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆದಿರುವುದು. ಈ ದೃಷ್ಟಿಯಲ್ಲಿ ಇಡೀ ಭಾರತ ದೇಶದಲ್ಲಿರುವ ಯಾವುದೇ ಸಾಧು, ಸಂತರು, ಮಹಾತ್ಮರು ಕಾಯಕದ ಬಗ್ಗೆ ಹೇಳಿರಲಿಲ್ಲ, ಬುದ್ಧ ಮಾನವೀಯತೆ ಬಗ್ಗೆ ಹೇಳಿದ್ದರು, ಗುರು ನಾನಕ್ ಅವರು ಶ್ರದ್ಧೆ ಬಗ್ಗೆ ಹೇಳಿದ್ರು, ಮಹಾವೀರರು ಅಹಿಂಸಾ ಬಗ್ಗೆ ಹೇಳಿದ್ದರು. ಆದರೆ ಅದೆಲ್ಲವೂ ಬರಬೇಕು ಅಂದ್ರೆ ಮೊದಲು ಹೊಟ್ಟೆಗೆ ಅನ್ನ ಬೇಕು, ಹೊಟ್ಟೆಗೆ ಅನ್ನ ಬೇಕು ಅಂದ್ರೆ ಕಾಯಕ ಬೇಕು. ಆ ಕಾಯಕ ತತ್ವವನ್ನು ಕೊಟ್ಟಿರುವಂತಹ ನಾಯಕ ಬಸವಣ್ಣನವರು.
ಆ ದೃಷ್ಟಿಯಲ್ಲಿ ನಮ್ಮ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ, ರಾಜ್ಯ ಮನ್ನಣೆ ನೀಡಿದ್ದಾರೆ. ಇನ್ನು ರಾಷ್ಟ್ರ ಮನ್ನಣೆ ಸಿಗಬೇಕಿದೆ. ಆ ಉದ್ದೇಶಕ್ಕೋಸ್ಕರ ಕರ್ನಾಟಕ ಸರ್ಕಾರ, ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಬಸವಣ್ಣನವರನ್ನ ಭಾರತದ ಕಾಯಕದ ಗುರು ಎಂದು ಘೋಷಣೆ ಮಾಡಿಸಬೇಕು ಎಂದು ಕೇಳಿಕೊಳ್ತೇವೆ. ಉತ್ತರದ ಬಸವಣ್ಣ ಅಂದ್ರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ದಕ್ಷಿಣದ ಅಂಬೇಡ್ಕರ್ ಅಂದ್ರೆ ವಿಶ್ವಗುರು ಬಸವಣ್ಣನವರು. ಹಾಗಾಗಿ ನಮ್ಮ ಬಸವ ಭಕ್ತರ ಕೋರಿಕೆ ಹಾಗೂ ದಶಕಗಳ ಹೋರಾಟ ಇದು. ಮಾನ್ಯ ಸಿಗಬೇಕು ಎಂದಿದ್ದಾರೆ.
