ವಿಜಯಪುರ: ಬಿಜೆಪಿಗೆ ದೊಡ್ಡ ತಲೆನೋವಾಗಿರುವುದೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಬಿಜೆಪಿ ಪಕ್ಷದಲ್ಲಿ ಇದ್ದುಕೊಂಡೆ ಪಕ್ಷದ ವಿರುದ್ಧ ಮಾತನಾಡುತ್ತಾರೆ. ಮಾಜಿ ಸಿಎಂ, ಹಾಲಿ ಸಿಎಂ ಯತ್ನಾಳ್ ಅವರ ಮಾತಿನ ಟಾರ್ಗೆಟ್. ರಾಜ್ಯ ಶಿಸ್ತು ಸಮಿತಿ, ಕೇಂದ್ರ ಶಿಸ್ತು ಸಮಿತಿ ಅದಾಗಲೇ ವಾರ್ನಿಂಗ್ ಕೂಡ ನೀಡಿ ಆಗಿದೆ. ಇದೀಗ ಒಳಗೊಳಗೆ ಅವರನ್ನು ಸೋಲಿಸಲೇಬೇಕೆಂದು ಬಿಜೆಪಿ ಪ್ಲ್ಯಾನ್ ಮಾಡಿದೆ ಎನ್ನಲಾಗುತ್ತಿದೆ.
ಯತ್ನಾಳ್ ಅವರು ಮಾಜಿ ಪ್ರಧಾನಿ ವಾಜಪೇಯಿ ಅವರ ಕಾಲಾವಧಿಯಲ್ಲಿ ಕೇಂದ್ರ ಸಚಿವರಾಗಿದ್ದವರು. ಇವರನ್ನು ಹಿಂದೂ ಹುಲಿ ಎಂದೇ ಕರೆಯುತ್ತಾರೆ. ಹೀಗಾಗಿ ಯತ್ನಾಳ್ ಅವರನ್ನು ಪಕ್ಷದಿಂದ ವಜಾಮಾಡುವ ಮಾತನ್ನು ಪಕ್ಷದಲ್ಲಿ ಯಾರೂ ಆಡಿಲ್ಲ. ಹಿಂದೂವಾದಿ ಯುವಕರ ಬೆಂಬಲವಿರುವ ಕಾರಣ, ಅವರನ್ನು ವಜಾ ಮಾಡಿದರೆ ಹಿಂದೂ ಮತಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರಯತ್ತದೆ. ಹೀಗಾಗಿ ಯಾರೊಬ್ಬರು ಅವರನ್ನು ವಜಾ ಮಾಡುವ ವಿಚಾರ ಎತ್ತಿಲ್ಲ. ಬದಲಿಗೆ ಸೋಲಿನ ರುಚಿ ತಿನಿಸಲು ಹೊರಟಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಸಿಎಂ ಬಿಎಸ್ವೈ ಮತ್ತು ಅವರ ಪುತ್ರನ ಬಗ್ಗೆ ಕೆಂಡಕಾರುತ್ತಿದ್ದ ಯತ್ನಾಳ್, ಸಚಿವ ಮುರುಗೇಶ್ ನಿರಾಣಿಯನ್ನು ಬಿಟ್ಟಿಲ್ಲ. ಹಾಗೇ ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿ ವಿಚಾರದ ಹೋರಾಟದಲ್ಲಿ ಶಾಸಕ ಯತ್ನಾಳ್ ಅವರೇ ಮುಂದೆ ಇದ್ದಾರೆ. ಈ ಎಲ್ಲಾ ಬೆಳವಣಿಗೆ ಬಿಜೆಪಿಗೆ ದೊಡ್ಡ ತಲೆನೋವಾಗಿದೆ.