ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936
ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದಿದ್ದರೂ ಸಹ ವೈಜ್ಞಾನಿಕವಾಗಿ ಆಲೋಚಿಸುವ ಗುಣಲಕ್ಷಣಗಳು ಇಲ್ಲದಿದ್ದರೆ ನಾವು ಪಡೆದ ಜ್ಞಾನವೇ ವ್ಯರ್ಥವಾಗುತ್ತದೆ. ವೈಜ್ಞಾನಿಕವಾಗಿ ಅಷ್ಟೇನೂ ಬೆಳವಣಿಗೆ ಆಗದ ಹಿಂದಿನ ದಿನಮಾನಗಳಿಂದ ಹಿಡಿದು ಇಂದಿನ ಸೂಪರ್ ಫಾಸ್ಟ್ ಯುಗದಲ್ಲೂ ಕೂಡ ಮೂಢನಂಬಿಕೆ ಎಂಬುದು ಮಾನವನಿಗೆ ಅಂಟಿದ ದೊಡ್ಡ ಶಾಪವಾಗಿದೆ.
ಯಾವುದೇ ವಿಚಾರವನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡಾಗ ಮಾತ್ರ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ಮುಖ್ಯವಾಗಿ ಮೂಢನಂಬಿಕೆಯಿಂದ ಎಷ್ಟೋ ಜನರು ತಮಗೆ ಗೊತ್ತು ಗೊತ್ತಿಲ್ಲದೆಯೋ ಅನಾರೋಗ್ಯವನ್ನು ಹೆಚ್ಚು ಮಾಡಿಕೊಂಡು ಕೊನೆಗೆ ಸಾವಿನ ಅಂಚಿಗೆ ತಲುಪುತ್ತಾರೆ ಮತ್ತು ಸಮಸ್ಯೆಗೆ ಪರಿಹಾರ ಸಿಗುವ ಹೊತ್ತಿಗೆ ಸಾಕಷ್ಟು ಹಣವನ್ನು, ಸಮಯವನ್ನು ಕೊನೆಗೆ ಜೀವವನ್ನು ಕಳೆದುಕೊಂಡಿರುತ್ತಾರೆ. ಇದರಿಂದ ಒಂದು ಕುಟುಂಬಕ್ಕೆ, ಅವರನ್ನು ನಂಬಿದವರಿಗೆ,ಸಮಾಜಕ್ಕೆ ಬಹಳಷ್ಟು ಹಾನಿ ತೊಂದರೆ ಉಂಟಾಗುತ್ತದೆ.
ಯಾವುದೇ ವಿಚಾರಕ್ಕೆ ಮೂಢನಂಬಿಕೆ ಥಳಕು ಹಾಕುವ ಮುನ್ನ ಅದರ ಹಿಂದಿನ ಕಾರಣಗಳನ್ನು ಸಂಪೂರ್ಣವಾಗಿ ತಿಳಿದವರಿಂದ, ಜ್ಞಾನಿಗಳಿಂದ ನಿಜವಾದ ಕಾರಣಗಳನ್ನು ತಿಳಿದುಕೊಂಡು ಅದರಂತೆ ಮುಂದುವರೆಯಬೇಕು.
ಆರೋಗ್ಯದ ವಿಚಾರಕ್ಕೆ ಬಂದಾಗ ಎಂದಿಗೂ ಮೂಢನಂಬಿಕೆಗಳಿಂದ ತೊಂದರೆಗಳನ್ನು ಹೆಚ್ಚು ಮಾಡಿಕೊಳ್ಳಬಾರದು ಉದಾಹರಣೆಗೆ ಮಾನಸಿಕ ಸಮಸ್ಯೆಗಳು ಇದ್ದಾಗ,ಖಿನ್ನತೆ ಇದ್ದಾಗ,ದೆವ್ವದ ಕಾಟ,ಮಾಟ ಮಂತ್ರ ಎಂದು ಅದನ್ನು ಅಲಕ್ಷಿಸಿ ವೈದ್ಯರಲ್ಲಿ ಕರೆದುಕೊಂಡು ಹೋಗುವ ಬದಲು ಮತ್ತೆಲ್ಲೋ ಹೋಗಿ ಸಮಸ್ಯೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇರುತ್ತದೆ.
ದಂತ ವೈದ್ಯ ಕ್ಷೇತ್ರವು ಇದಕ್ಕೆ ಹೊರತಲ್ಲ.
ದಂತ ಸಮಸ್ಯೆಗಳನ್ನು ಕಣ್ಣಿನ ಆರೋಗ್ಯಕ್ಕೆ ಒಂದಕ್ಕೊಂದು ಜೋಡಿಸಿ ಚಿಕಿತ್ಸೆ ಪಡೆಯದೆ ದಂತ ಸಮಸ್ಯೆಗಳು ತೀವ್ರಗೊಂಡು ಹೃದಯಾಘಾತಕ್ಕೆ, ಕ್ಯಾನ್ಸರ್ ಗೆ,ಪ್ರಾಣಾಂತಿಕವಾಗ ಬಹುದಾದ ಯಾವುದೇ ತೊಂದರೆಗಳು ಕೂಡ ಆಗಬಲ್ಲದು. ಸಾಮಾನ್ಯವಾಗಿ ನಾವು ಕಂಡಂತೆ ಜನರು ಹೇಳುವುದು ಹಲ್ಲಿನ ಅನಾರೋಗ್ಯದಿಂದ ಅಥವಾ ಹಲ್ಲು ಕೀಳಿಸಿಕೊಂಡರೆ ಕಣ್ಣಿಗೆ ತೊಂದರೆ ಆಗುತ್ತದೆ ಎಂದು.
ಆದರೆ ನಿಜವಾಗಿ ಇದಕ್ಕೆ ಕಾರಣಗಳೇನು ಹೀಗೆ ಹೇಳುತ್ತಾರೆ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಂಡಾಗ ಎಂದಿಗೂ ಈ ರೀತಿ ನಾವು ಮಾಡುವುದಿಲ್ಲ.
ವಾಸ್ತವವಾಗಿ ನಮ್ಮ ದೇಹದಲ್ಲಿ ಇರುವ ಎಲ್ಲಾ ಅಂಗಾಂಗಗಳು ಪ್ರತ್ಯೇಕ ನರವ್ಯೂಹ,ನರ ಮಂಡಲ ಹಾಗೂ ಪ್ರತ್ಯೇಕ ನರಕೋಶ ಹೊಂದಿದ್ದು ಪ್ರತ್ಯೇಕವಾಗಿ ಎಲ್ಲಾ ಅಂಗಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಕ್ಷಮತೆ ಹೊಂದಿರುತ್ತದೆ.ಅದೇ ರೀತಿ ಹಲ್ಲು ಮತ್ತು ಕಣ್ಣು ಕೂಡ. ಒಂದಕ್ಕೆ ಚಿಕಿತ್ಸೆ ಮಾಡಿದರೆ ಮತ್ತೊಂದು ಅಂಗಾಂಗಕ್ಕೆ ಎಂದಿಗೂ ಹಾನಿ ಆಗುವುದಿಲ್ಲ.ತೊಂದರೆಯೂ ಇರುವುದಿಲ್ಲ.ಇದೊಂದು ಅಪ್ಪಟ ಮೂಢನಂಬಿಕೆ.
ಒಬ್ಬರು ಹೇಳುವ ಮಾತನ್ನು ಅದನ್ನು ವೈಜ್ಞಾನಿಕವಾಗಿ ವಿಮರ್ಶಿಸುವ ಬದಲು ಅದನ್ನೇ ನಂಬಿ ಕುಳಿತುಕೊಂಡು ವೈದ್ಯರಲ್ಲಿ ಹೋಗದೆ ತಮ್ಮ ದಂತ ಆರೋಗ್ಯಕ್ಕೆ ಸಂಚಕಾರ ತಂದುಕೊಳ್ಳುವ ಜನರು ಸಮಸ್ಯೆ ತೀವ್ರಗೊಂಡಾಗ ನರಳುತ್ತಾರೆ, ತೊಂದರೆಗೆ ಸಿಲುಕಿಕೊಳ್ಳುತ್ತಾರೆ.
ಆಗಲೇ ತಿಳಿಸಿದಂತೆ ಎಲ್ಲಾ ಅಂಗಾಂಗಗಳು ಪ್ರತ್ಯೇಕ ರಕ್ತ ಪರಿಚಲನೆ, ನರಮಂಡಲ ಹೊಂದಿದ್ದು ಯಾವುದೇ ಅಂಗಗಳು ಸ್ವತಂತ್ರವಾಗಿ ಮೆದುಳಿನ ಆದೇಶದಂತೆ ಕೆಲಸ ನಿರ್ವಹಿಸುತ್ತವೆ. ಹಾಗೊಂದು ವೇಳೆ ಒಂದಕ್ಕೊಂದು ಸಂಬಂಧವಿದ್ದಿದ್ದರೆ ಒಂದು ಕೈ ಮೇಲಕ್ಕೆ ಎತ್ತಿದರೆ ಪಕ್ಕದ ಕೈ ಕೂಡ ತಾನೇ ತಾನಾಗಿ ಮೇಲಕ್ಕೆ ಎದ್ದೇಳಬೇಕಿತ್ತು. ಆದರೆ ಹಾಗಾಗುವುದಿಲ್ಲ, ಕಾರಣವಿಷ್ಟೇ , ಒಂದು ಕೈಗೂ ಮತ್ತೊಂದು ಕೈಗೂ ಯಾವುದೇ ಪರಸ್ಪರ ಸಂಬಂಧವಿಲ್ಲ. ಅದೇ ರೀತಿ ನಾವು ಕಣ್ಣು ಮುಚ್ಚಿಕೊಂಡಾಗ ಕೂಡ ನಮ್ಮ ಕಿವಿಗಳು ಕೇಳುತ್ತವೆ,ನಾವು ಬಾಯಿ ಮುಚ್ಚಿಕೊಂಡರೂ ಸಹ ನಮ್ಮ ಕಣ್ಣು ನೋಟವನ್ನು ತೋರುತ್ತವೆ.
ಹಾಗೆಯೇ ಹಲ್ಲು ಮತ್ತು ಕಣ್ಣುಗಳು ಕೂಡ.
ಹಲ್ಲು ತನ್ನದೇ ಆದ ಕೆಲಸ ಮಾಡಿದರೆ, ಕಣ್ಣು ತನ್ನದೇ ಆದ ಕೆಲಸ ನಿರ್ವಹಿಸುತ್ತದೆ.
ಕಾರಣವೇನು?
ಹಲ್ಲುಗಳು ಮತ್ತು ಕಣ್ಣುಗಳು ಪ್ರತ್ಯೇಕ ಬೇರೆ ಬೇರೆ ಮೂಳೆಗಳ ಸ್ಥಾನದಲ್ಲಿದೆ. ಹಲ್ಲುಗಳಿಗೆ ಐದನೇ ಬುರುಡೆ ನರ ಅಂದರೆ ಟ್ರೈ ಜಮೈನಲ್ ನರಬಳ್ಳಿ ಸಂಪರ್ಕ ಕಲ್ಪಿಸಿದರೆ ಕಣ್ಣಿಗೆ ಎರಡನೇ ಬುರುಡೆ ನರ ಅಂದರೆ ಆಪ್ಟಿಕ್ ನರ ಸಂಪರ್ಕಿಸುತ್ತದೆ.
ಹಲ್ಲು ಕಿತ್ತರೆ ಅಥವಾ ಚಿಕಿತ್ಸೆಗೆ ಮುಂದಾದರೆ ಅದರ ಅಕ್ಕಪಕ್ಕದ ಮೂಳೆಗೆ ತೊಂದರೆ ಇಲ್ಲ ಎಂದ ಮೇಲೆ ದೂರದ ಕಣ್ಣುಗಳಿಗೆ ತೊಂದರೆ ಹೇಗಾಗುತ್ತದೆ?
ನಮ್ಮ ಮನೆಯಲ್ಲಿರುವ ಫ್ಯಾನ್ ಕೆಟ್ಟು ನಿಲ್ಲುವುದಕ್ಕೂ ಪಕ್ಕದ ಮನೆಯವರ ಫ್ರಿಡ್ಜ್ ಆಫ್ ಮಾಡುವುದಕ್ಕೂ ಒಂದಕ್ಕೊಂದು ಹೇಗೆ ಸಂಬಂಧವಿಲ್ಲವೋ ಅದೇ ರೀತಿ ಹಲ್ಲಿಗೂ ಮತ್ತು ಕಣ್ಣಿಗೂ ಸಂಬಂಧ ಇರುವುದಿಲ್ಲ. ಯಾರು ಏನೇ ಹೇಳಿದರೂ ಕೂಡ ಪ್ರಶ್ನಿಸದೆ ಅದನ್ನು ಒಪ್ಪಬಾರದು. ನಮಗೆ ಗೊತ್ತಿಲ್ಲದ ವಿಚಾರಗಳನ್ನು ವೈದ್ಯರಲ್ಲಿ ತಿಳಿದುಕೊಂಡು ಅದರಂತೆ ಮುಂದುವರೆಯಬೇಕು.
ಇದು ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ. ಆರೋಗ್ಯವನ್ನು ಎಂದಿಗೂ ನಿರ್ಲಕ್ಷಿಸಬಾರದು. ಹಿಂದಿನ ಕಾಲದಲ್ಲಿ ವಿಜ್ಞಾನದ ಹಾಗೂ ಶಿಕ್ಷಣದ ಕೊರತೆ ಇತ್ತು.ವೈದ್ಯಕೀಯ ರಂಗದ ಬದಲಾವಣೆಗಳನ್ನು ಒಪ್ಪಲು ಸುಲಭವಾಗಿ ಜನರು ಮುಂದಾಗುತ್ತಿರಲಿಲ್ಲ.(ಭೂಮಿಯು ಚಪ್ಪಟೆಯಾಗಿದೆ ಎಂದು ನಂಬಿದ್ದ ಅಂದಿನ ಕೆಲವು ಜನರು ಭೂಮಿಯು ಗುಂಡಗಿದೆ ಎಂದು ಹೇಳಿದ ವ್ಯಕ್ತಿಗೆ ನೇಣು ಹಾಕಿದ್ದರು.)
ವಯಸ್ಸಾದಂತೆ ಪ್ರತಿ ವ್ಯಕ್ತಿಗಳಲ್ಲಿ ಅದರಲ್ಲೂ 40 ವರ್ಷ ಆದ ನಂತರ ಕಣ್ಣು ಮಬ್ಬಾಗುವುದು, ದೃಷ್ಟಿ ದೋಷ ಬರುವುದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು ಪ್ರತಿಯೊಬ್ಬರಲ್ಲೂ ಆಗುವ ಸಾಮಾನ್ಯ ದೈಹಿಕ ಬದಲಾವಣೆಯಾಗಿದೆ.
ಯಾವುದೇ ಹಲ್ಲುಗಳು ಅನಾರೋಗ್ಯ ಅಥವಾ ಹಾನಿಯಾಗದಿದ್ದರೂ ಕೂಡ ಕಣ್ಣುಗಳು ಮಂಜಾಗುತ್ತವೆ. ಹಲ್ಲುಗಳು ಉದುರುವ ವಯಸ್ಸಿಗೆ ತಕ್ಕಂತೆ ಕಣ್ಣುಗಳಲ್ಲಿ ದೃಷ್ಟಿ ದೋಷ, ಮಂಜಾಗುವ, ಓದಲು ಕಷ್ಟ ಆಗುತ್ತಿದ್ದ ಪ್ರಕ್ರಿಯೆ ಹಾಗೂ ಬದಲಾವಣೆಗಳನ್ನು ತರ್ಕ ಮಾಡಿ ಹಲ್ಲು ಹೋದರೆ ಕಣ್ಣುಗಳು ಹಾನಿಯಾಗುತ್ತದೆ ಎಂಬುದನ್ನು ನಂಬಿದ ನಮ್ಮ ಹಿಂದಿನ ಹಿರಿಯರಿಗೆ ಮಾಹಿತಿ ಹಾಗೂ ಶಿಕ್ಷಣದ ಕೊರತೆ ಇದ್ದಿತು ಆದರೆ ಇಂದು ವಿಜ್ಞಾನ ಸಾಕಷ್ಟು ಮುಂದುವರೆದಿದ್ದು ಹಲ್ಲುಗಳಿಗೂ ಕಣ್ಣಿಗೂ ಯಾವುದೇ ಸಂಬಂಧ ಇಲ್ಲವೆಂದು ಧೃಡಪಟ್ಟಿದೆ.
ಹಲ್ಲು ಕಿತ್ತಿಸಿಕೊಂಡರೆ ಕಣ್ಣು ಹೋಗುವಂತಿದ್ದರೆ ಇಂದು ಜಗತ್ತಿನಾದ್ಯಂತ ಲಕ್ಷಾಂತರ ಕುರುಡ ಜನರು ತುಂಬಿರುತ್ತಿದ್ದರು.
ಇದರ ಬಗ್ಗೆ ಸಾಕಷ್ಟು ತಿಳುವಳಿಕೆ ಇದ್ದರೂ ಕೂಡ ಎಷ್ಟೋ ಜನರು ದಂತ ಸಮಸ್ಯೆಗಳಿಂದ ಬಾಧೆ ಅನುಭವಿಸುತ್ತಾರೆ,ಹೊರತು ದಂತ ವೈದ್ಯರಲ್ಲಿಗೆ ಹೋಗುವುದಿಲ್ಲ. ಸಮಸ್ಯೆ ತೀವ್ರವಾಗಿ ಹೆಚ್ಚಾದರೂ ಕೂಡ ಕೇವಲ ಮಾತ್ರೆ ಔಷಧಿಗಳಿಂದ ಗುಣವಾಗಲೆಂದು ಬಯಸುತ್ತಾರೆ.ಇದರ ಜೊತೆಗೆ ದಂತ ಸಮಸ್ಯೆಗಳನ್ನು ದೊಡ್ಡ ರೀತಿಯಲ್ಲಿ ಜಾಸ್ತಿ ಮಾಡಿಕೊಂಡು ಪರಿತಪಿಸುತ್ತಾರೆ.
ನಮ್ಮ ಜೀವಕ್ಕೆ ಸಂಚಕಾರ ತರುವ, ಬಾಳಿನ ನೆಮ್ಮದಿಯನ್ನು ಕೆಡಿಸುವ, ಅನಾರೋಗ್ಯಕ್ಕೆ ನಮ್ಮನ್ನು ತಳ್ಳುವ ಇಂತಹ ಮೂಢ ಆಚರಣೆಗಳನ್ನು ಎಂದಿಗೂ ಮಾಡಬಾರದು.
ಏನು ಮಾಡಬಹುದು?
ಸಮಸ್ಯೆ ಇರಲಿ ,ಇಲ್ಲದಿರಲಿ ಪ್ರತಿ ಆರು ತಿಂಗಳಿಗೆ ಒಮ್ಮೆ ದಂತ ವೈದ್ಯರನ್ನು ಭೇಟಿ ಮಾಡಿ ನಿಮ್ಮಲ್ಲಿರುವ ದಂತ ಅರೋಗ್ಯ ಸಮಸ್ಯೆಗಳನ್ನು ತೋರಿಸಿಕೊಳ್ಳಬೇಕು.
* ವೈದ್ಯರ ಸಲಹೆ ಮೇರೆಗೆ ಹಲ್ಲುಗಳ ಚಿಕಿತ್ಸೆ ಪಡೆಯಬಹುದು.
* ಹಲ್ಲು ಸಾಕಷ್ಟು ಅಲುಗಾಡುತ್ತಿದ್ದರೆ ಮಾತ್ರ ವೈದ್ಯರು ಹಲ್ಲನ್ನು ತೆಗೆಯುತ್ತಾರೆ,ಹೊರತು ಯಾವುದೇ ಕಾರಣಕ್ಕೂ ಅನಗತ್ಯವಾಗಿ ಹಲ್ಲುಗಳನ್ನು ತೆಗೆಯಲು ಸಾಧ್ಯವಿಲ್ಲ.
* ಹಲ್ಲು ಕೀಳುವ ಸಮಯದಲ್ಲಿ ಯಾವುದೇ ನೋವು ಇರುವುದಿಲ್ಲ. ಇದಕ್ಕೆ ಹೆದರಿಕೊಂಡು ಸಮಸ್ಯೆ ಜಾಸ್ತಿ ಮಾಡಿಕೊಂಡು ಕೊನೆ ಹಂತದಲ್ಲಿ ವೈದ್ಯರಲ್ಲಿ ಹೋಗುವ ಬದಲು ಶುರುವಿನಲ್ಲಿಯೇ ವೈದ್ಯರನ್ನು ಕಾಣಬೇಕು.
* ಹಲ್ಲು ಸಾಕಷ್ಟು ಅಲುಗಾಡುತ್ತಿದ್ದು ತಾನೇ ತಾನಾಗಿ ಉದುರುವ ಬಗ್ಗೆ ಯೋಚಿಸದೇ ವೈದ್ಯರಿಂದಲೇ ಹಲ್ಲುಗಳನ್ನು ಅರಿವಳಿಕೆಯಿಂದ ತೆಗೆಸಿಕೊಳ್ಳಬೇಕು.
* ಹಲ್ಲುಗಳನ್ನು ತೀವ್ರ ರೀತಿಯಲ್ಲಿ ಹಾನಿ ಮಾಡಿಕೊಳ್ಳುವ ಮುನ್ನ ಅದರ ನಿರ್ವಹಣೆ ಜಾಗ್ರತೆ ಆರೋಗ್ಯದ ಕಡೆಗೆ ಎಚ್ಚರ ವಹಿಸಬೇಕು.
* ಹಲ್ಲುಗಳನ್ನು ಕೀಳಿಸುವ ಬದಲು ಅದನ್ನು ಉಳಿಸಿಕೊಳ್ಳುವ ಚಿಕಿತ್ಸೆಗಳಾದ ರೂಟ್ ಕೆನಾಲ್ ಚಿಕಿತ್ಸೆ, ವಸಡು ಶಸ್ತ್ರ ಚಿಕಿತ್ಸೆ ಮುಂತಾದವಕ್ಕೆ ಮುಂದಾಗಬೇಕು.



