Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭದ್ರೆ ಪಾದಯಾತ್ರೆಗೆ ನೀರಾವರಿ ಹೋರಾಟ ಸಮಿತಿ ಬೆಂಬಲ : ಪಿ.ಕೋದಂಡರಾಮಯ್ಯ

---Advertisement---

ಸುದ್ದಿಒನ್, ಚಿತ್ರದುರ್ಗ, ಫೆ.11: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಹಾಗೂ 5,300 ಕೋಟಿ ರೂ. ಬಿಡುಗಡೆ ಆಗ್ರಹಿಸಿ ರಾಜ್ಯ ರೈತಸಂಘ

ಜಿಲ್ಲೆಯಲ್ಲಿ ಗುರುವಾರ-ಶುಕ್ರವಾರ ಕೈಗೊಂಡಿರುವ ಚಳವಳಿಗೆ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಬೆಂಬಲಿಸಲಿದೆ ಎಂದು ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ತಿಳಿಸಿದ್ದಾರೆ.

 

ಬಯಲುಸೀಮೆ ಪ್ರದೇಶಕ್ಕೆ ಭದ್ರೆ ನೀರುಣಿಸುವ ಮಹತ್ವದ ಯೋಜನೆ ಜಾರಿಗಾಗಿ ನೀರಾವರಿ ಹೋರಾಟ ಸಮಿತಿ 1996ರಿಂದಲೂ ನಿರಂತರವಾಗಿ ಸಭೆ, ಹೋರಾಟ, ಸಮಾವೇಶ, ರಸ್ತೆತಡೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಕೆ, ಸರಣಿ ಧರಣಿ, ಸತ್ಯಾಗ್ರಹ ಹೀಗೆ ಹೋರಾಟ ಸಮಿತಿ ಕೈಗೊಂಡ ಎಲ್ಲ ಚಟುವಟಿಕೆಯಲ್ಲಿ ರೈತಸಂಘ ಮುಂಚೂಣಿಯಲ್ಲಿ ನಿಂತು ಜಿಲ್ಲೆಯ ಹಿತಕ್ಕೆ ಶ್ರಮಿಸಿದೆ ಎಂದು ಸ್ಮರಿಸಿದ್ದಾರೆ. ಇಂತಹ ರೈತಸಂಘ ಈಗ ಎಲ್ಲ ತಾಲ್ಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ಕಾಲ್ಗಡಿಗೆ ಮೂಲಕ
ಆಗಮಿಸಿ ಒನಕೆ ಓಬವ್ವ ವೃತ್ತದಲ್ಲಿ ಬಹಿರಂಗ ಸಮಾವೇಶದ ಮೂಲಕ ಸರ್ಕಾರದ ಮೇಲೆ ಒತ್ತಡ
ತರುವ ಕೆಲಸ ಮಾಡುತ್ತಿರುವುದು ಅತ್ಯಂತ ಉತ್ತಮ ಕಾರ್ಯ ಆಗಿದೆ. ಈ ಚಳವಳಿಗೆ ಸಮಿತಿ ಬೆಂಬಲವಾಗಿ ನಿಲ್ಲುವುದು ಹೊಣೆಗಾರಿಕೆ ಆಗಿದೆ. ಜೊತೆಗೆ ಹೋರಾಟ ಸಮಿತಿ ಕೂಡ ರೈತ, ಕಾರ್ಮಿಕ, ಕನ್ನಡಪರ ಸೇರಿ ವಿವಿಧ ಸಂಘಟನೆಗಳನ್ನೊಳಗೊಂಡು ಕೇಂದ್ರ ಮತ್ತು ರಾಜ್ಯ
ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ನಿರಂತರವಾಗಿ ಮಾಡಲಿದೆ ಎಂದು ಕೋದಂಡರಾಮಯ್ಯ
ತಿಳಿಸಿದ್ದಾರೆ.

 

ಎಲ್ಲ ರಾಜಕೀಯ ಪಕ್ಷಗಳಿಗೂ ಚುನಾವಣೆ ಅಸ್ತ್ರವಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ‌ ನೀರಾವರಿ ಹೋರಾಟ ಸಮಿತಿ ನಡೆಸಿದ ಚಳವಳಿಗೆ ಮಣಿದ ಆಡಳಿತ ಪಕ್ಷಗಳು, ತಮ್ಮ ಕಾಲಘಟ್ಟದಲ್ಲಿ ಕೊಡುಗೆ ನೀಡಿವೆ. ಆದರೆ, 2009ರಲ್ಲಿ ಭೂಮಿ ಪೂಜೆ ಮೂಲಕ ಆರಂಭಗೊಂಡ ಯೋಜನೆ ಇನ್ನೂ ಪೂರ್ಣಗೊಳ್ಳದಿರುವುದು ಅತ್ಯಂತ ಬೇಸರ ವಿಷಯ ಎಂದಿದ್ದಾರೆ. ಜಿಲ್ಲೆಗೆ ಆಗಮಿಸಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡುವುದಾಗಿ ಘೋಷಿಸಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು 2023ರ ಬಜೆಟ್‌ನಲ್ಲಿ ಯೋಜನೆಗೆ 5,300 ಕೋಟಿ ರೂ.
ಘೋಷಿಸಿದ್ದರು. ಈಚೆಗೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಬಿಜೆಪಿ ನಾಯಕರು ತಮ್ಮ ಪ್ರತಿ
ಭಾಷಣದಲ್ಲೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ, ಕೂಡಲೇ ಹಣ ಬಿಡುಗಡೆ ಮಾಡಿಸುವುದಾಗಿ ಭರವಸೆ ಮಾತು ನೀಡಿದ್ದರು. ಆದರೆ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಕೊಟ್ಟ ಮಾತು ತಪ್ಪಿದೆ. ಈಗ ಇಲ್ಲಸಲ್ಲದ ನೆಪ ಮುಂದಿಟ್ಟು ಹಣ ಬಿಡುಗಡೆ ಮಾಡದಿರುವುದು ಜನವಿರೋಧಿ
ಆಗಿದೆ ಎಂದು ದೂರಿದ್ದಾರೆ. ಕೇಂದ್ರದ ಈ ಲೋಪವನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಕೂಡ ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳದಂತೆ ನಾವೆಲ್ಲರೂ ಜಾಗೃತ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ
ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರಲು ರಾಜ್ಯ ರೈತಸಂಘ ಬೃಹತ್ ಹೋರಾಟ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದು, ಅದನ್ನು ನಾವೆಲ್ಲರೂ ಬೆಂಬಲಿಸುವ ಮೂಲಕ ಜಿಲ್ಲೆಯ ರೈತರ ಕನಸು ನನಸಾಗಿಸಲು ಶ್ರಮಿಸಬೇಕಾಗಿದೆ ಎಂದಿದ್ದಾರೆ.

 

ಆದ್ದರಿಂದ ರೈತಸಂಘ ಐದು ತಾಲ್ಲೂಕುಗಳಿಂದ ಗುರುವಾರ ಕಾಲ್ನಡಿಗೆ ಆರಂಭಿಸಿ, ಶುಕ್ರವಾರ
ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ಜಾಥಾದಲ್ಲಿ ಪಕ್ಷಾತೀತವಾಗಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಈ ವಿಷಯದಲ್ಲಿ
ರೈತಸಂಘದ ಹೋರಾಟದೊಂದಿಗೆ ಸದಾ ಹೆಜ್ಜೆ ಹಾಕಲಿದೆ. ಜೊತೆಗೆ ತನ್ನ ಜವಾಬ್ದಾರಿಯನ್ನು ಮುಂದುವರಿಸಲಿದೆ ಎಂದು ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ, ಪ್ರಧಾನ ಸಂಚಾಲಕ ಡಾ.ಬಂಜಗೆರೆ ಜಯಪ್ರಕಾಶ್, ಸಂಚಾಲಕರಾದ ಜಿ.ಎಸ್.ಉಜ್ಜನಪ್ಪ, ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್‌ಕುಮಾರ್, ಜೋಗಿಮಟ್ಟಿ ಈ.ಮಹೇಶಬಾಬು, ಆರ್.ಶೇಷಣ್ಣಕುಮಾರ್, ಕೂನಿಕೆರೆ ರಾಮಣ್ಣ ಇತರ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now