ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 17 : ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾದಾಗ ಮಾತ್ರ ಜೀವನದಲ್ಲಿ ಎದುರಾಗುವ ಸಮಸ್ಯೆ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬಹುದು ಎಂದು ಬಿ.ಸಿ.ಎಂ.ಇಲಾಖೆ ಅಧಿಕಾರಿ ಪುಷ್ಪಲತ ಭವಿಮಠ ಕರೆ ನೀಡಿದರು.
ಸರಸ್ವತಿ ಕಾನೂನು ಕಾಲೇಜು, ಮಹಿಳಾ ಸಬಲೀಕರಣ ಕೋಶ, ಐಕ್ಯುಎಸಿ. ವತಿಯಿಂದ ಕಾಲೇಜಿನ ಡೈಮಂಡ್ ಜ್ಯುಬಿಲಿ ಆಡಿಟೋರಿಯಂನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕುಟುಂಬ ನಿರ್ವಹಣೆ ಜೊತೆ ಮಹಿಳೆ ಹೊರಗಡೆಯೂ ದುಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 21 ನೇ ಶತಮಾನದಲ್ಲಿ ಮಹಿಳೆ ಎಲ್ಲಾ ರಂಗದಲ್ಲಿಯೂ ಪುರುಷರಿಗೆ ಸರಿಸಮಾನಳಾಗಿದ್ದಾಳೆ. ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವ ಕೀಳರಿಮೆ ಬೇಡ. ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಯಶಸ್ಸು ಸಾಧಿಸಿರುವ ಅನೇಕ ವಿದ್ಯಾರ್ಥಿಗಳು ಕಣ್ಣ ಮುಂದಿದ್ದಾರೆಂದು ಹೇಳಿದರು.

ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ.ಎಂ.ಎಸ್.ಸುಧಾದೇವಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸದೃಡ ಸಮಾಜ ನಿರ್ಮಾಣವಾಗಬೇಕಾದರೆ ಮಹಿಳೆಯರ ಪಾತ್ರವು ಮುಖ್ಯ. ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿಯೂ ಮಹಿಳೆ ಮುಂಚೂಣಿಯಲ್ಲಿದ್ದಾಳೆ. ಪುರುಷ-ಮಹಿಳೆ ಎನ್ನುವ ವ್ಯತ್ಯಾಸ ಸರಿಯಲ್ಲ. ಇಬ್ಬರು ಸಮಾನರು ಎಂದರು.
ಐಕ್ಯುಎಸಿ. ಸಂಯೋಜಕರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ.ಎನ್.ಡಿ.ಗೌಡ, ಸಹಾಯಕ ಪ್ರಾಧ್ಯಾಪಕಿ ಹರ್ಷ ಎಸ್.ಎಂ. ಇವರುಗಳು ವೇದಿಕೆಯಲ್ಲಿದ್ದರು.
ಕಾನೂನು ವಿದ್ಯಾರ್ಥಿನಿ ಮಾನಸ ಮತ್ತು ತಂಡದವರು ಪ್ರಾರ್ಥಿಸಿದರು. ಮೇಘನಾ ಬಿ.ಸಿ. ಸ್ವಾಗತಿಸಿದರು. ಮಾನಸ ಬಿ.ಎಂ.ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಅಭಿನೇತ್ರಿ ಪಟವರ್ಧನ್ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ.ಸಿ.ಮುರುಗೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು.











