Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಸ ಎಸೆಯುವ ಬ್ಲಾಕ್ ಸ್ಪಾಟ್‌ಗಳಲ್ಲಿ ಸಿಸಿಟಿವಿ ಅಳವಡಿಕೆ : ದಂಡ ವಸೂಲಿಗೆ ಎಡಿಸಿ ಕುಮಾರಸ್ವಾಮಿ ಸೂಚನೆ

---Advertisement---

ಚಿತ್ರದುರ್ಗ. ಮೇ.29: ನಗರಸಭೆ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿಯಮಾನುಸಾರ ಹಾಗೂ ವೈಜ್ಞಾನಿಕವಾಗಿ ಘನತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಕಸ ಎಸೆಯುವ ಬ್ಲಾಕ್ ಸ್ಪಾಟ್ ಜಾಗಗಳನ್ನು ಗುರುತಿಸಿ, ಅಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ನಿಯಮ ಮೀರಿ ಕಸ ಹಾಕುವವರಿಂದ ದಂಡ ವಸೂಲಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.

 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ *ಶುಕ್ರವಾರ,* ಘನತಾಜ್ಯ ವಸ್ತುಗಳ ನಿರ್ವಹಣೆ ನಿಯಮ-2026 ರ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ಆರಂಭಿಕ ಹಂತದಿಂದಲೇ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಕಸ ಉತ್ಪತ್ತಿ ಮಾಡುವ ಸಂಸ್ಥೆಗಳು
ತಮ್ಮ ಆವರಣದಲ್ಲೇ ಕಸ ವಿಲೇವಾರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಸ್ವಲ್ಪ ಕಾಲಾವಕಾಶ ನೀಡಿ. ಸ್ಥಳೀಯ ಸಂಸ್ಥೆಗಳು ಅವರಿಗೆ ಸಹಾಯ ಮಾಡಬೇಕು. ನಿಗದಿ ಸಮಯದಲ್ಲಿ ಸ್ವಂತ ವ್ಯವಸ್ಥೆ ಮಾಡಿಕೊಂಡು ನಿಯಮ ಕಡ್ಡಾಯವಾಗಿ ಪಾಲಿಸದಿದ್ದರೆ ದಂಡ ವಿಧಿಸುವುದು ಮಾತ್ರವಲ್ಲದೆ, ಇತರೆ ನಾಗರಿಕ ಸೌಲಭ್ಯಗಳನ್ನು ಕಡಿತಗೊಳಿಸಲು ಕೋರ್ಟ್ ನಿರ್ದೇಶನ ಇರುವ ಬಗ್ಗೆ ಕಸ ಉತ್ಪತ್ತಿ ಮಾಡುವ ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಡಬೇಕು. ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳಿಂದ ಸಂಗ್ರಹಿಸುವ ಕಸವನ್ನು ಹಸಿ ಮತ್ತು ಒಣ ಕಸ ಎಂದು ಮೂಲದಲ್ಲೇ ಪ್ರತ್ಯೇಕಿಸಬೇಕು. ಕಸ ಸಂಗ್ರಹಣಾ ವಾಹನಗಳು ಕಡ್ಡಾಯವಾಗಿ ವಿಂಗಡಿಸಿದ ಕಸವನ್ನೇ ಪಡೆಯಬೇಕು. ಆರಂಭದಲ್ಲೇ ವಿಂಗಡಣೆ ಸರಿಯಾಗಿ ನಡೆದರೆ, ಅಂತಿಮ ವಿಲೇವಾರಿ ಸುಲಭವಾಗುತ್ತದೆ. ಪರಿಸರ ಇಂಜಿನಿಯರ್‌ಗಳು ಕೇವಲ ಕಚೇರಿ ಕೆಲಸಗಳಿಗೆ ಸೀಮಿತವಾಗದೆ, ಮೈದಾನಕ್ಕಿಳಿದು ಸಕ್ರಿಯವಾಗಿ ಕೆಲಸ ಮಾಡಬೇಕು. ಘನತ್ಯಾಜ್ಯ ಕಾಯ್ದೆಯ ನಿಯಮಗಳ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಸಿದರು.

 

ಮಾಧ್ಯಮಗಳಲ್ಲಿ ಕಸದ ನಿರ್ವಹಣೆ ಕುರಿತು ದೂರುಗಳು ಬಂದರೆ ಇವುಗಳನ್ನು ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸಲಿವೆ. ಸ್ಥಳೀಯ ಸಂಸ್ಥೆಗಳ ಮೂಲ ಕರ್ತವ್ಯವೇ ಸ್ವಚ್ಛತೆ ಕಾಪಾಡುವುದಾಗಿದೆ. ವಾಹನಗಳು ಅಥವಾ ಸಿಬ್ಬಂದಿ ಕೊರತೆಯಿದ್ದರೆ, ಸರ್ಕಾರದ ಅನುದಾನಕ್ಕೆ ಕಾಯದೆ ಸ್ಥಳೀಯ ಸಂಸ್ಥೆಗಳ ಸ್ವಂತ ನಿಧಿ ಅಥವಾ 15ನೇ ಹಣಕಾಸು ಯೋಜನೆಯಡಿ ಅಗತ್ಯ ಸೌಕರ್ಯಗಳನ್ನು ಬಲಪಡಿಸಿಕೊಂಡು ನಿಯಮಾನುಸಾರ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಪುನರುಚ್ವರಿಸಿದರು.

ಜಿಲ್ಲೆಯಲ್ಲಿ ಲಭ್ಯವಿರುವ ಕಸ ಮರುಬಳಕೆ ಮಾಡುವ ಏಜೆನ್ಸಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಒಂದು ವೇಳೆ ಸ್ಥಳೀಯವಾಗಿ ಏಜೆನ್ಸಿಗಳು ಇಲ್ಲದಿದ್ದರೆ, ನೆರೆ ಜಿಲ್ಲೆಗಳ ಏಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ಸ್ವಯಂಸೇವಾ ಸಂಸ್ಥೆಗಳ ನೆರವು ಪಡೆಯಬೇಕು ಎಂದು ಕಮಿಷನರ್ ಹಾಗೂ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ನಗರದ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕೋಟಿಗಟ್ಟಲೆ ಮೌಲ್ಯದ ಯಂತ್ರೋಪಕರಣಗಳನ್ನು ಪ್ರತಿದಿನವೂ ಸುಸ್ಥಿತಿಯಲ್ಲಿಟ್ಟುಕೊಂಡು, ಕಸ ವಿಲೇವಾರಿ ಪ್ರಕ್ರಿಯೆ ನಿರಂತರವಾಗಿ ಸಾಗುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಸಿಬ್ಬಂದಿಗಳ ಹಾಜರಾತಿಗಾಗಿ ತಕ್ಷಣವೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಬೇಕು. ಘಟಕದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಅದರ ನೇರ ದೃಶ್ಯಾವಳಿಗಳನ್ನು ಕಮಿಷನರ್ ಮೊಬೈಲ್ ಹಾಗೂ ಟೇಬಲ್‌ಗೆ ಕನೆಕ್ಟ್ ಮಾಡಬೇಕು. ಇದರಿಂದ ಯಾರು ಕೆಲಸ ಮಾಡುತ್ತಿದ್ದಾರೆ, ಯಾರು ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಕೆಲಸಕ್ಕೆ ಸಕಾಲದಲ್ಲಿ ಬಾರದೇ ನಿರ್ಲಕ್ಷ್ಯ ವಹಿಸುವ ಅಥವಾ ಕೇವಲ ಸಂಬಳಕ್ಕಾಗಿ ಬರುವ ಸಿಬ್ಬಂದಿ ಇದ್ದರೆ ತಕ್ಷಣವೇ ಅವರ ಸೇವೆಯನ್ನು ರದ್ದುಗೊಳಿಸಿ ಹೊಸಬರನ್ನು ತೆಗೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶಿಸಿದರು.

 

ಲೆಗಸಿ ವೇಸ್ಟ್ ವಿಲೇವಾರಿ ಪ್ರಕ್ರಿಯೆಗೆ ಚುರುಕು:
ಚಿತ್ರದುರ್ಗ ಸೇರಿದಂತೆ ವಿವಿಧೆಡೆ ಸಂಗ್ರಹವಾಗಿರುವ ‘ಲೆಗಸಿ ವೇಸ್ಟ್’ ವಿಲೇವಾರಿ ಪ್ರಕ್ರಿಯೆಗೆ ಏಜೆನ್ಸಿ ಗುತ್ತಿಗೆ ನೀಡಲಾಗಿದೆ. ಆದರೆ ವಿಲೇವಾರಿ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಅಪರ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಸಮಯದಲ್ಲಿ ಒಂದು ಸ್ಥಳದಲ್ಲಿ ಲೆಗಸಿ ವೇಸ್ಟ್ ವಿಲೇವಾರಿ ಮಾಡುವ ಬದಲು, ಏಕಕಾಲದಲ್ಲಿ ಎಲ್ಲಾ ಕಡೆ ಅಗತ್ಯವಿರುವ ಸಿಬ್ಬಂದಿ ಮತ್ತು ಯಂತ್ರಗಳನ್ನು ಬಳಸಿ ವಿಲೇವಾರಿ ಪ್ರಕ್ರಿಯೆಗೆ ಚುರುಕು ನೀಡಬೇಕು. ಸರಿಯಾಗಿ ಕಾರ್ಯನಿರ್ವಹಿಸದ ಏಜೆನ್ಸಿಗೆ ತಕ್ಷಣ ನೋಟಿಸ್ ಜಾರಿ ಮಾಡಬೇಕು ಎಂದರು.

 

ಕಸ ವಿಂಗಡಣೆ ಮತ್ತು ಯಂತ್ರಗಳ ಕಾರ್ಯಾಚರಣೆಗೆ ನುರಿತ ಕಾರ್ಮಿಕರ ಅಗತ್ಯವಿದೆ. ಜೊತೆಗೆ ಯಂತ್ರೋಪಕರಣಗಳ ಅಳವಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇವುಗಳ ಸಮರ್ಪಕ ನಿರ್ವಹಣೆಗಾಗಿ ಖಾಸಗಿ ಏಜೆನ್ಸಿಯೊಂದನ್ನು ನೇಮಕ ಮಾಡಿಕೊಳ್ಳುಲು ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕಳುಹಿಸಲು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರೇಷ್ಮಾ ಹಾನಗಲ್ ಸಭೆಯಲ್ಲಿ ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

 

ಜಿ.ಪಂ.ಯೋಜನಾ ನಿರ್ದೇಶಕಿ ಕೆ.ಜಯಲಕ್ಷ್ಮಿ ಪರಿಸರ ಅಧಿಕಾರಿ ಪಲ್ಲವಿ.ಹೆಚ್.ವಿ, ಚಿತ್ರದುರ್ಗ ನಗರ ಪೌರಯುಕ್ತೆ ಲಕ್ಷ್ಮೀ, ಚಳ್ಳಕೆರೆ ನಗರ ಪೌರಾಯುಕ್ತೆ ಡಾ.ನಾಗವೇಣಿ ಸೇರಿದಂತೆ, ವಿವಿಧ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪರಿಸರ ಇಂಜಿನಿಯರ್‌ಗಳು, ಎನ್.ಜಿ.ಓ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now