ಸುದ್ದಿಒನ್, ಬೆಂಗಳೂರು : ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ರಾಜ್ಯದ ತುಂಬಾ ಬರದ ಛಾಯೆ ಆವರಿಸಿದೆ. ಹೀಗಿರುವಾಗ ಇಂತಹ ಬರದ ಸಮಯದಲ್ಲಿ ಸಚಿವರಿಗೆ ಮಾತ್ರ ದಸರಾ ಹಬ್ಬಕ್ಕೆ ಸರ್ಕಾರ ಕಾರು ಭಾಗ್ಯ ನೀಡಿದೆ.
ಹೌದು ರಾಜ್ಯ ಸರ್ಕಾರದಿಂದ ಸಚಿವರಿಗಾಗಿ ಹೊಸ ಕಾರುಗಳನ್ನು ಖರೀದಿ ಮಾಡಿದೆ. 33 ಸಚಿವರಿಗೆ ಹೊಸ ಇನೋವಾ ಕಾರುಗಳು ಸಿಕ್ಕಿವೆ. ಸುಮಾರು 9.9 ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡಿ, ಸಚಿವರಿಗಾಗಿ ಕಾರುಗಳ ಉಡುಗೊರೆ ತರಲಾಗಿದೆ. 33 ಇನೋವಾ ಕಾರುಗಳ ಖರೀದಿಗಾಗಿ ಸರ್ಕಾರವೇ ಹಣ ನೀಡಿದೆ. ದಸರಾ ಆರಂಭದಲ್ಲಿಯೇ ಹೊಸ ಕಾರುಗಳ ಸಚಿವರ ಮನೆ ಬಾಗಿಲಿಗೆ ಹೋಗಿವೆ.
ರಾಜ್ಯ ಸರ್ಕಾರ ಈಗಲೇ ನೀಡಿರುವ ಗ್ಯಾರಂಟಿಗಳಿಗೆ ಹಣ ನೀಡುವುದಕ್ಕೆ ಪರದಾಡುವಂತೆ ಆಗಿದೆ. ಜೊತೆಗೆ ಸರ್ಕಾರವೇ ಅನುತ್ಪಾದಕ ವೆಚ್ಚ ಕಡಿತ ಮಾಡಬೇಕು ಎಂದು ಹೇಳುತ್ತಿದೆ. ಆದರೆ ಈಗ ಕಾರುಗಳ ಖರೀದಿ ಎಷ್ಟು ಸರಿ ಎಂದೇ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬರದ ಸಮಯದಲ್ಲಿ ಹೀಗೆ ಸಚಿವರಿಗೆ ಹೊಸ ಕಾರಿನ ಅವಶ್ಯಕತೆ ಇತ್ತ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಇದರ ನಡುವೆ ಭತ್ಯೆ ಹೆಚ್ಚಳದ ಚರ್ಚೆಯೂ ನಡೆಯುತ್ತಿದೆ. ಅದಕ್ಕೂ ಸಮ್ಮತಿ ಸಿಗುವ ಸಾಧ್ಯತೆ ಇದೆ.