ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಡಿ.12): ಅನ್ಯ ಸಂಸ್ಕೃತಿಯಿಂದ ನಮ್ಮ ಭಾಷೆ, ಆಚಾರ, ವಿಚಾರಗಳ ಮೇಲೆ ಪೆಟ್ಟು ಬೀಳುತ್ತಿರುವುದರಿಂದ ಧಾರ್ಮಿಕ ತಳಹದಿಯ ಮೇಲೆ ಬಂಜಾರ ಜನಾಂಗ ಸಂಘಟಿತರಾಗುವಂತೆ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಕರೆ ನೀಡಿದರು.
ಅಖಿಲ ಭಾರತೀಯ ಬಂಜಾರ ಮತ್ತು ಲಬಾನಾ ಸಮಾಜದ ವತಿಯಿಂದ ಜ.25 ರಿಂದ 30 ರವರೆಗೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಗೋದ್ರಿಯಲ್ಲಿ ನಡೆಯುವ ಮಹಾಕುಂಭ-2023 ರ ಪ್ರಯುಕ್ತ ಬಂಜಾರ ಗುರುಪೀಠದಲ್ಲಿ ನಡೆದ ಪ್ರಾಂತ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಾಷ್ಟ್ರಮಟ್ಟದ ಮಹಾಕುಂಭ ಇದಾಗಿರುವುದರಿಂದ ದೇಶ ಮತ್ತು ವಿದೇಶಗಳಿಂದ ಬಂಜಾರ ಸಮಾಜದವರು ಭಾಗವಹಿಸಲಿದ್ದು, ಸಾಮರಸ್ಯ ಮೂಡಿಸುವ ಈ ಕಾರ್ಯಕ್ರಮದಲ್ಲಿ ಬಂಜಾರ ಸಮಾಜದ ಕಲೆ, ಸಂಸ್ಕøತಿ, ಗುರುಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಬಂಜಾರ ಸಮಾಜದವರನ್ನು ಹೆಚ್ಚು ಮತಾಂತರಗೊಳಿಸುತ್ತಿರುವುದನ್ನು ತಡೆಗಟ್ಟಬೇಕಾಗಿರುವುದರಿಂದ ಹಳ್ಳಿ ಹಳ್ಳಿಗಳಲ್ಲಿ ಬಂಜಾರ ಜನಾಂಗವನ್ನು ಜಾಗೃತಿಗೊಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಚಿತ್ರದುರ್ಗದಿಂದ ಎರಡು ಸಾವಿರಕ್ಕೂ ಹೆಚ್ಚು ಬಂಜಾರ ಜನಾಂಗ ಮಹಾಕುಂಭದಲ್ಲಿ ಪಾಲ್ಗೊಳ್ಳಲಿದ್ದು, ಸುಮಾರು ಎಂಟರಿಂದ ಹತ್ತು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುರೇಶ್‍ನಾಯ್ಕ ಮಾತನಾಡುತ್ತ 370 ವಿಧದಲ್ಲಿ ಬಂಜಾರ ಜನಾಂಗವನ್ನು ಮತಾಂತರಗೊಳಿಸಲಾಗುತ್ತಿದೆ. ನಮ್ಮ ಕಣ್ಣೆದುರಿನಲ್ಲಿಯೇ ಮತಾಂತರ ನಡೆಯುತ್ತಿದ್ದರೂ ತಡೆಯಲು ಆಗುತ್ತಿಲ್ಲ. ಕರಿಯಟ್ಟಿಯಲ್ಲಿ ಹನ್ನೆರಡು ಮನೆಗಳಿದ್ದು, ಕರಿಯಮ್ಮನ ಪೂಜಾರಿಯೇ ಮತಾಂತರ ಮಾಡಿದ್ದಾರೆ. ಬಂಜಾರ ಜನಾಂಗಕ್ಕೆ ಹಣದ ಆಸೆ ತೋರಿಸಿ ಮತಾಂತರ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕಾಗಿರುವುದರಿಂದ ಮೊದಲು ಸಂಘಟಿತರಾಗಬೇಕೆಂದು ತಿಳಿಸಿದರು.
ಬಂಜಾರ ಜನಾಂಗಕ್ಕೆ ತನ್ನದೆ ಆದ ಕಲೆ ಸಂಸ್ಕೃತಿ, ಆಚಾರ ವಿಚಾರಗಳಿದೆ. ಈಗಾಗಲೆ ಮತಾಂತರಗೊಂಡಿರುವವರನ್ನು ವಾಪಸ್ ಬರುವಂತೆ ಮನವಿ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಮತಾಂತರಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.
ಬಂಜಾರ ಸಮಾಜದ ಮುಖಂಡ ಡಾ.ಮೋಹನ್ ಮಾತನಾಡಿ ನಮ್ಮಲ್ಲಿ ಹಣಬಲ, ಜನಬಲವಿಲ್ಲದ ಕಾರಣ ಮತಾಂತರವಾಗುತ್ತಿದ್ದರೂ ನೋಡಿಕೊಂಡು ಅಸಹಾಯಕರಾಗಿದ್ದೇವೆ. ಕ್ರೈಸ್ತರಿಗೆ ವಿದೇಶಗಳಿಂದ ಕೋಟಿಗಟ್ಟಲೆ ಹಣ ಹರಿದು ಬರುತ್ತದೆ. ಹಾಗಾಗಿ ಅವರು ಲಂಬಾಣಿ ಜನಾಂಗದವರನ್ನು ಗುರಿಯಾಗಿಸಿಕೊಂಡು ಆಮಿಷವೊಡ್ಡಿ ಮತಾಂತರಗೊಳಿಸುತ್ತಿದ್ದಾರೆ. ನಮ್ಮಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಸಾಕಷ್ಟು ಜನರಿದ್ದಾರೆ. ಆದರೆ ಮಠದ ಅಭಿವೃದ್ದಿಗೆ ಯಾರು ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ಲಂಬಾಣಿ ಜನಾಂಗದಲ್ಲಿ ಕಲೆಯಿದೆ. ವಿದ್ಯಾವಂತರಿದ್ದಾರೆ. ಹಣಕಾಸಿನ ಮುಗ್ಗಟ್ಟು, ಬಡತನ ಮತಾಂತರಕ್ಕೆ ಕಾರಣವಾಗಿದೆ. ಬಂಜಾರ ಜನಾಂಗದ ಪ್ರತಿಯೊಬ್ಬರು ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದೇವೆನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
ಧರ್ಮ ಪ್ರಚಾರಕ ತುಳಸಿನಾಯ್ಕ, ಬಂಜಾರ ಜನಾಂಗದ ಯುವ ಮುಖಂಡ ಜಯಸಿಂಹ ಕಾಟ್ರೋಚ್, ಗುರುಪ್ರಸಾದ್ ವೇದಿಕೆಯಲ್ಲಿದ್ದರು.
ಕರ್ನಾಟಕ ಜಾನಪದ ಅಕಾಡೆಮಿ ನಿರ್ದೇಶಕಿ ರುದ್ರಾಕ್ಷಿಭಾಯಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರವಿನಾಯ್ಕ, ತಿಪ್ಪೇಸ್ವಾಮಿ ನಾಯ್ಕ ಹಾಗೂ ಜನಾಂಗದ ಮುಖಂಡರುಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.