ಸುದ್ದಿಒನ್, ಚಿತ್ರದುರ್ಗ, ನ. 11 : ನಮ್ಮ ಮನೆಗಳ ಗೋಡೆಗಳಿಗೆ ನಮ್ಮ ಪೂರ್ವಜರ ಭಾವಚಿತ್ರಗಳನ್ನು ಹಾಕಿದರೆ ಅನಾಗರೀಕರು ಎನ್ನುವ ಸಂಸ್ಕೃತಿ ಬೆಳೆಯುತ್ತಿದೆ ಎಂದು ನಿವೃತ್ತ ಆಂಗ್ಲ ಭಾಷಾ ಉಪನ್ಯಾಸಕರು ಹಾಗೂ ಲೇಖಕರಾದ ಶ್ರೀಮತಿ ಸಿ.ಬಿ. ಶೈಲಾ ಜಯಕುಮಾರ್ ವಿಷಾದಿಸಿದರು.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮುಷ್ಠಲಗುಮ್ಮಿಯಲ್ಲಿ ಶ್ರೀ ವೀರಭದ್ರೇಶ್ವರ ಪ್ರೌಢಶಾಲಾ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ನಿನ್ನೆ ಏರ್ಪಡಿಸಿದ್ದ “68ನೇ ಕನ್ನಡ ರಾಜ್ಯೋತ್ಸವ” ಹಾಗೂ ದಾವಣಗೆರೆಯ ಲೇಖಕ ಎಸ್. ಮಲ್ಲಿಕಾರ್ಜುನಪ್ಪ ಅವರ ಕೃತಿ “ಕೋಣನ ವಂಶಜರು – ಮುಷ್ಠಲಗುಮ್ಮಿ ಕೀರ್ತಿ ಕಳಸರು” ಕೃತಿ ಬಿಡುಗಡೆ ಮಾಡಿ ಕೃತಿ ಕುರಿತು ಅವರು ಮಾತನಾಡುತ್ತಿದ್ದರು.
ಮರ ದೊಡ್ಡದಾಗಿ ಬೆಳೆದಿರುವುದಷ್ಟೇ ನಮಗೆ ಕಾಣುತ್ತದೆ. ಆದರೆ ಆ ಮರದ ತಾಯಿ ಬೇರು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಕೋಣನ ವಂಶಜರು ಗ್ರಾಮದ ಸುತ್ತಮುತ್ತಲಿನ ಹಿಂದುಳಿದ, ಅತಿ ಹೆಚ್ಚು ಬುಡಕಟ್ಟು ಸಂಸ್ಕøತಿಯನ್ನೊಳಗೊಂಡಿರುವ ಗ್ರಾಮಗಳಲ್ಲಿರುವ ಮಕ್ಕಳಿಗೆ ಅನುಕೂಲವಾಗಲಿ ಎಂದು ಆರು ದಶಕಗಳ ಹಿಂದೆಯೇ ಈ ಗ್ರಾಮದಲ್ಲಿ ಪ್ರೌಢಶಾಲೆ ತೆರೆದಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ, ಅನ್ನ, ಗ್ರಾಮಸ್ಥರಿಗೆ ಆರೋಗ್ಯ ಸೇವೆ ನೀಡಿದ್ದಾರೆ. ಮರದ ತಾಯಿ ಬೇರಿನಂತೆ ಆ ವಂಶಜರ ಕುರಿತು ಕೃತಿಯನ್ನು ರಚಿಸಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ನಮ್ಮ ತನವನ್ನು ನಾವು ಮರೆಯಬಾರದು. ನಮ್ಮ ವಂಶಜರ ಬಗ್ಗೆ ನಮಗೇ ಮಾಹಿತಿ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಹತ್ತಿದ ಏಣಿಯನ್ನೇ ಒದೆಯುವವರು ನಾವಾಗಿದ್ದೇವೆ. ಆರು ತಲೆಮಾರಿನ ವಿಷಯಗಳು ಈ ಕೃತಿಯಲ್ಲಿವೆ. ಅಸ್ತಿತ್ವ, ಸ್ವಾಭಿಮಾನ, ಸ್ವಾಯತ್ತತೆಯಿಂದ ಈ ವಂಶಸ್ಥರು ಇಲ್ಲಿಗೆ ವಲಸೆ ಬಂದಿದ್ದಾರೆ. ನಂತರ ಶಿಕ್ಷಣದಿಂದ ಮಾತ್ರ ನಮ್ಮ ಅಭಿವೃದ್ಧಿ ಎಂದು ಭಾವಿಸಿ ಮುಷ್ಠಲಗುಮ್ಮಿ ಗ್ರಾಮವೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾ ಸಂಸ್ಥೆಯನ್ನು ಆರಂಭಿಸಿದ್ದಾರೆ. ಈ ಕೃತಿ ಇತಿಹಾಸದಲ್ಲಿ ದಾಖಲಾರ್ಹವಾಗಿದೆ ಎಂದು ಹೇಳಿದರು.
ಈ ಗ್ರಾಮವು ಸುತ್ತ ನಾಲ್ಕು ಗಡಿ ತಾಲೂಕುಗಳು, ನಾಲ್ಕು ಧಾರ್ಮಿಕ ಕ್ಷೇತ್ರಗಳನ್ನು ಆವರಿಸಿಕೊಂಡಿದೆ. ಈ ಕೃತಿ ರಮ್ಯ, ರಂಜನೆಯ ಕಾದಂಬರಿ ಅಲ್ಲ, ಕಥೆ, ಇತಿಹಾಸ, ಪುರಾಣ ಭವಿಷ್ಯದ ಮುನ್ನೋಟ ಈ ಕೃತಿಯಲ್ಲಿ ಅಡಗಿದೆ ಎಂದು ಸಿ.ಬಿ. ಶೈಲಾ ಜಯಕುಮಾರ್ ತಿಳಿಸಿದರು.
ಕೃತಿಕಾರ ಎಸ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಇದು ನನ್ನ 26ನೇ ಕೃತಿ. ಪಾಳೇಗಾರ ಸಂಸ್ಕೃತಿ ನಮಗೆ ಹೆಮ್ಮೆ ಹಾಗೂ ಹಲವಾರು ಕೃತಿಗಳನ್ನು ರಚಿಸಲು ಮಾದರಿ. ನಾವು ನಮ್ಮ ಪೂರ್ವಜರು ಬಿಟ್ಟುಹೋದ ಸ್ಮಾರಕಗಳನ್ನು ಉಳಿಸಿಕೊಳ್ಳಬೇಕು. ಮೂಲತಃ ವಿಜ್ಞಾನ ಮತ್ತು ಗಣಿತ ಶಿಕ್ಷಕನಾದ ನಾನು ಕನ್ನಡ ಸಾಹಿತ್ಯ ಒಲವಿನಿಂದ ಹಲವಾರು ಕೃತಿಗಳನ್ನು ರಚಿಸಲು ಸಾಧ್ಯವಾಗಿದೆ. ಇತಿಹಾಸ ಹುಡುಕಿ, ಸಂಶೋಧನೆ ನಡೆಸಿ ಕೃತಿಗಳನ್ನು ರಚಿಸಿದ್ದೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಚಿತ್ರದುರ್ಗ ಸುದ್ದಿ ಗಿಡುಗ ಪತ್ರಿಕೆ ಸಂಪಾದಕ ಶ. ಮಂಜುನಾಥ ಕನ್ನಡ ರಾಜ್ಯೋತ್ಸವ ಕುರಿತು ಮಾತನಾಡಿ, ನಮ್ಮ ನಾಡಿನ ನೆಲ, ಜಲ, ಭಾಷೆ ಉಳಿವಿಗಾಗಿ ಚಳುವಳಿಗಳನ್ನು ನಡೆಸುತ್ತಿದ್ದೇವೆ. ನಮ್ಮ ಆಡಳಿತ ಭಾಷೆ ಪರಿಪೂರ್ಣವಾಗಿ ಇನ್ನು ಕನ್ನಡವಾಗಿಲ್ಲ. ಕನ್ನಡದಲ್ಲೇ ಕಡ್ಡಾಯವಾಗಿ ಆಡಳಿತ ನಡೆಸಬೇಕೆಂದು ಹೊರಬಂದಿರುವ ಸರ್ಕಾರಿ ಆದೇಶಗಳೇ ಆಂಗ್ಲಭಾಷೆಯಲ್ಲಿರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ ಎಂದು ವಿಷಾದಿಸಿದರು.
ಕನ್ನಡ ನೆಲ, ಜಲ, ಭಾಷೆ ಉಳಿವಿಗಾಗಿ ಕನ್ನಡ ಕಾವಲು ಸಮಿತಿ ರಚಿಸಿರುವುದೂ ಸಹಾ ತೀರಾ ಹಾಸ್ಯಾಸ್ಪದವಲ್ಲದೆ, ಇಂತಹ ಸ್ಥಿತಿ ದೇಶದ ಬೇರೆ ರಾಜ್ಯಗಳ ಯಾವ ಭಾಷೆಗೂ ಇಲ್ಲ. ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ, ಭಾರತದ ಯಾವ ಭಾಷೆಗೂ ಬಾರದಷ್ಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ ಬರುವಷ್ಟು ಶ್ರೀಮಂತ ಭಾಷೆ ನಮ್ಮದಾಗಿದ್ದರೂ ಸಹಾ, ಇನ್ನೂ ಕನ್ನಡ ಸಂಪೂರ್ಣ ಆಡಳಿತ ಭಾಷೆಯಾಗದಿರುವುದು ನೋವಿನ ಸಂಗತಿ ಎಂದರು.
ಪ್ರಪಂಚದಲ್ಲಿ ಅಂದಾಜು 6,500 ಭಾಷೆಗಳಿವೆ. ಇದರಲ್ಲಿ ದಿನ ದಿನಕ್ಕೂ ಅನೇಕ ಭಾಷೆಗಳು ನಶಿಸಿ ಹೋಗುತ್ತಿವೆ. ಆದರೆ ವಚನ ಸಾಹಿತ್ಯವಿರುವ ಕನ್ನಡ ಭಾಷೆ ಎಂದಿಗೂ ಅಳಿಯಲು ಸಾಧ್ಯವಿಲ್ಲ. ಆದರೆ ನಮ್ಮ ನಿರ್ಲಕ್ಷೆ ಮನೋಭಾವ ಇದೇ ರೀತಿ ಮುಂದುವರೆದರೆ ನಮ್ಮ ಭಾಷೆಯನ್ನು ಅಸ್ತಿತ್ವದಲ್ಲಿ ಉಳಿಸಿಕೊಳ್ಳುವುದು ಕಷ್ಟವಾದೀತು. ಹಾಗಾಗಿ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಹೆತ್ತ ತಾಯಿಗೆ ನೀಡುವ ಮನ್ನಣೆಯನ್ನು ಮಾತೃಭಾಷೆಗೂ ನೀಡುವಂತಾಗಬೇಕೆಂದು ಅಭಿಪ್ರಾಯಪಟ್ಟರು.
ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಬಿ.ಎಂ. ತಿಪ್ಪೇರುದ್ರಸ್ವಾಮಿ ಮಾತನಾಡಿ, ಇದೊಂದು ಕುಗ್ರಾಮ. ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಅನುಕೂಲವಾಗಲಿ ಎಂದು ಕೋಣನ ವಂಶಜರು ಇಲ್ಲಿ 60 ವರ್ಷಗಳ ಹಿಂದೆ ಪ್ರೌಢಶಾಲೆ ತೆರೆಯದಿದ್ದರೆ, ನನ್ನನ್ನು ಸೇರಿದಂತೆ ಅನೇಕರು ಇಂದು ಉನ್ನತ ಹುದ್ದೆಗಳಲ್ಲಿರಲು ಸಾಧ್ಯವಾಗುತ್ತಿರಲಿಲ್ಲ. ವಂಶಜರೊಂದಿಗೆ ತಮಗಿದ್ದ ಒಡನಾಟ, ವಂಶಜರು ಮಾಡಿರುವ ಸಮಾಜಸೇವೆ ಮತ್ತೊಬ್ಬರಿಗೆ ಮಾದರಿಯಾಗಿದೆ ಎಂದರು.
ಸಂಘದ ಅಧ್ಯಕ್ಷರೂ, ಬಿ.ಎಸ್.ಎನ್.ಎಲ್. ನಿವೃತ್ತ ಇಂಜಿನಿಯರ್ ಸಿ. ಬೋರಯ್ಯ ಮಾತನಾಡಿ, ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಈಗಾಗಲೇ ಶಾಲೆಗೆ ಆವರಣ ಗೋಡೆ ಕಟ್ಟಿಸಿದ್ದೇವೆ. ನಾವು ಪಟ್ಟ ಕಷ್ಟ ಈಗಿನ ವಿದ್ಯಾರ್ಥಿಗಳಿಗೆ ಬೇಡ. ನಾವು ಓದುವಾಗ ನಮಗೆ ಏನು ತೊಂದರೆಗಳಿದ್ದವೋ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಈಗಾಗಲೇ 18 ಲಕ್ಷ ರೂ.ಗಳ ವೆಚ್ಚದಲ್ಲಿ ಎರಡು ಉತ್ತಮ ಭೋದನಾ ಕೊಠಡಿಗಳನ್ನು ಕಟ್ಟಿದ್ದೇವೆ. ಹಂತ ಹಂತವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲಾ ಸದಸ್ಯರು ಸೇರಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಮಾದರಿ ಪ್ರೌಢಶಾಲೆ ಮಾಡಲು ಯತ್ನಿಸಲಾಗುವುದು ಎಂದರು.
ಪ್ರತಿಯೊಬ್ಬರೂ ಕನ್ನಡವನ್ನು ಪ್ರೀತಿಸುವುದನ್ನು ಕಲಿಯಬೇಕು. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ, ಅನ್ನದಾನ ಮಾಡಿರುವ ವಂಶಜರ ಸ್ಮರಣೆಯನ್ನು ಎಲ್ಲರೂ ಸ್ಮರಿಸಬೇಕೆಂದು ಸಿ. ಬೋರಯ್ಯ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀ ವೀರಭದ್ರೇಶ್ವರ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಹಾಗೂ ಕೋಣನ ವಂಶಜರ ನಾಲ್ಕನೇ ತಲೆಮಾರಿನ ಎನ್. ಸತೀಶ್ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಪ್ರತಿಯೊಬ್ಬರೂ ತಮ್ಮ ಪೂರ್ವಿಕರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯನ್ನು ಬೆಳೆಸಿಕೊಳ್ಳುವುದರ ಜೊತೆಗೆ, ನಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು.
ಪ್ರಸ್ತುತ ರೈತರು ಸಂಕಷ್ಟದಲ್ಲಿದ್ದಾರೆ. ಇಳುವರಿ ಹೆಚ್ಚು ಕೊಡುವ ತಳಿಗಳನ್ನು ರೈತರಿಗೆ ಕೊಡಬೇಕು ಎಂದು ಮನವಿ ಮಾಡಿದರು. ಎಲ್ಲರೂ ಧನಾತ್ಮಕ ಆಂಶಗಳನ್ನು ಹೊಂದಬೇಕು. ಮಕ್ಕಳಲ್ಲಿ ಗುರಿಯ ಜೊತೆಗೆ ಛಲ ಇರಬೇಕು. ಅದಕ್ಕಾಗಿ ಯಾವಾಗಲು ಮಕ್ಕಳೂ ಸಹಾ ಧನಾತ್ಮಕವಾಗಿ ಯೋಚಿಸಬೇಕು. ಕನ್ನಡಿಗರಿಗೆ ಅಭಿಮಾನ ಇದೆ, ಆದರೆ ಅಭಿಮಾನದ ಕಿಚ್ಚಿಲ್ಲ. ಕನ್ನಡಿಗರು ನಮ್ಮ ಭಾಷೆ ಬಗ್ಗೆ ಮಲಯಾಳಿಗರ ತರ ಅಭಿಮಾನ ಬೆಳೆಸಿಕೊಳ್ಳಬೇಕು. ತನಗೆ ತಾನು ಹೋಲಿಸಿಕೊಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ಸಾಹಿತಿ ಕೋಲಂನಳ್ಳಿ ಪೀತಾಂಬರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕು|| ವರ್ಷಿಣಿ ಪ್ರಾರ್ಥಿಸಿದರು. ಹಿಂದಿ ಶಿಕ್ಷಕ ಚಿತ್ರಲಿಂಗಪ್ಪ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಟಿ. ಶ್ರೀನಿವಾಸ್ ವಂದಿಸಿದರೆ, ಆಂಗ್ಲ ಭಾಷಾ ಶಿಕ್ಷಕ ಜಿ. ವೈ. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.
ಸಮಾರಂಭದಲ್ಲಿ ಪ್ರೌಢಶಾಲೆಯ ಮುಖ್ಯೋಪಧ್ಯಾಯ ಕಾಂತರಾಜ್, ಸಂಪನ್ಮೂಲ ವ್ಯಕ್ತಿ ಪಾಲಯ್ಯ, ವಿಶ್ವನಾಥ, ತಿಪ್ಪಣ್ಣ, ಮಂಜಣ್ಣ, ಕೊಟ್ರೇಶ್, ಶ್ರೀಮತಿ ಶಾಂತಾ, ಬಿ.ಕೆ. ತಿಪ್ಪಣ್ಣ, ಬಾಬಣ್ಣ, ಗ್ರಾಮ ಪಂಚಾಯತಿ ಸದಸ್ಯ ಸಣ್ಣ ಓಬಯ್ಯ, ಶಿವಶಂಕರ ಮೂರ್ತಿ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಸದಸ್ಯರು, ಗ್ರಾಮಸ್ಥರು, ಕೋಣನ ವಂಶಜರು ಉಪಸ್ಥಿತರಿದ್ದರು.