ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಇಂದು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ನವರೇ ದೇವೇಗೌಡರಿಂದ ನೀವೂ ಬೆಳೆದಿದ್ದೀರಿ. ಅವರು ಏನಂತಾ ನನಗಿಂತ ಚೆನ್ನಾಗಿ ನೀವೂ ತಿಳಿದುಕೊಂಡಿದ್ದೀರಿ. ಅವರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದಿದ್ದಾರೆ.
ನಮ್ಮ ತಂದೆ ದೇವೇಗೌಡರಿಗೆ 92 ವರ್ಷ ವಯಸ್ಸಾಗಿದೆ. ತಾಯಿಗೆ 89 ವರ್ಷ. ಅವರು ಯಾವ ರೀತಿ ಬದುಕಿದ್ದಾರೆಂದು ಕಣ್ಣಾರೆ ಕಂಡಿದ್ದೇನೆ. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ, ತಂದೆ ತಾಯಿಯನ್ನು ಕಳೆದುಕೊಳ್ಳುತ್ತೇವೆ ಎನ್ನುವ ನೋವಿನಲ್ಲಿ ಅವರಿಗೆ ಆತ್ಮಸ್ಥೈರ್ಯ ತುಂಬುವುದಕ್ಕೆ ಎರಡು ದಿನ ಮನೆಗೆ ಹೋಗಿದ್ದೆ. ಆದರೆ ಹೆಚ್ಡಿಕೆ, ರೇವಣ್ಣ ಕುಟುಂಬದ ಸಂಘಟಿತ ಪಾಪದ ಕೃತ್ಯ ಎಂದು ಹೇಳಿಕೆ ಕೊಟ್ಟ ಮುಖ್ಯಮಂತ್ರಿ ಯಾವ ಎಸ್ಐಟಿ ತನಿಖೆ ನಡೆಸುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ತಂದೆ ತಾಯಿಯ ಸಂಬಂಧದ ಆತ್ಮೀಯತೆ ಹಾಗೂ ಬಾಂಧವ್ಯ ಇಲ್ಲದೆ ಇರಬಹುದು. ಆದರೆ ನಾವೂ ಆ ತರ ಬದುಕಿಲ್ಲ. ನಮಗೆ ನಮ್ಮ ತಂದೆ ತಾಯಿಯ ಆರೋಗ್ಯವೇ ಮುಖ್ಯ. ನಾನು ಹೊರಗಡೆ ರಾಜಕೀಯ ಪ್ರಚಾರಕ್ಕೆ ಹೋದರು, ಸಭೆ ಸಮಾರಂಭಗಳಿಗೆ ಹೋದರು ಕೂಡ ರಾತ್ರಿ ಮನೆಗೆ ವಾಪಾಸ್ ಹೋಗಿ ತಂದೆ ತಾಯಿಗೆ ಧೈರ್ಯ ಹೇಳಿ ಹೋಗುತ್ತಿದ್ದೆ. ದೇವೇಗೌಡರ ಮನೆ ಎಂದು ಹೇಳುತ್ತೀರಿ. ಆದರೆ ದೇವೇಗೌಡರಿಗೆ ಸ್ವಂತ ಮನೆಯಿಲ್ಲ. ಮಗಳ ಮನೆಯಲ್ಲಿ ಇದ್ದಾರೆ. ರೇವಣ್ಣ ಕಿಡ್ನ್ಯಾಪ್ ಮಾಡಿಸಿದ್ದಾರಾ..? ಪಾಪ ಅವರನ್ನು ತೆಗೆದುಕೊಂಡು ಹೋಗಿ ಒಳಗೆ ಕೂರಿಸಿದ್ದೀರಿ. ಅನ್ಯಾಯ ಆದ ಹೆಣ್ಣು ಮಕ್ಕಳಿಗೂ ನ್ಯಾಯ ಸಿಗಬೇಕು ಅಂದ್ರೆ ಈ ಪ್ರಕರಣವನ್ನು ಸಿಬಿಐಗೆ ನೀಡಿ ಎಂದು ಒತ್ತಾಯಿಸಿದ್ದಾರೆ.