ಸುದ್ದಿಒನ್, ಚಿತ್ರದುರ್ಗ, ಸೆ.11 : ಪ್ರಾಣಿ ಪಕ್ಷಿಗಳಲ್ಲಿರುವ ಪರೋಪಕಾರಿ ಗುಣ ಮನುಷ್ಯನಲ್ಲಿ ಏಕಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ದಾಸೋಹ ಪರಿಕಲ್ಪನೆ ಕರ್ನಾಟಕದಲ್ಲಿದೆ. ಕಾರಣ ಬಸವಾದಿ ಶರಣರು ಉದಯಿಸಿದ ನಾಡು ನಮ್ಮದಾಗಿದೆ. ಇದು ನಮ್ಮ ಪುಣ್ಯ ಎಂದು ಕುಂ. ವೀರಭದ್ರಪ್ಪ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ನಿತ್ಯಕಲ್ಯಾಣ ಮನೆ ಮನೆಗೆ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಕುಂವೀ, ಪಕ್ಕದ ಮನೆಯವರು ಉಪವಾಸವಿದ್ದಾಗ ನೀನು ಊಟ ಮಾಡಬೇಡ. ಅವರಿಗೂ ಒಂದಿಷ್ಟು ಸಹಾಯ ಮಾಡಿ ಉಣ್ಣಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ಅಸಹಾಯಕ ಶೋಷಿತ ಸಮುದಾಯಗಳನ್ನು ಒಟ್ಟುಗೂಡಿಸಿ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದರು. ಲಿಂಗಾಯತ ಧರ್ಮವನ್ನು ಎಲ್ಲೆಡೆ ಪಸರಿಸುವಂತೆ ಮಾಡಿದರು.
ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ನಿತ್ಯಕಲ್ಯಾಣ ಮನೆ ಮನೆಗೆ ಚಿಂತನ ಕಾರ್ಯಕ್ರಮ pic.twitter.com/dU5QCNln8C
— suddione-kannada News (@suddione) September 11, 2023
ಬಸವಕಲ್ಯಾಣವನ್ನು ಸಾಕ್ಷಾತ್ಕರಿಸಿದ ಮಠ ಕರ್ನಾಟಕದಲ್ಲಿ ಇದೆ ಎನ್ನುವುದಾದರೆ ಅದು ಚಿತ್ರದುರ್ಗದ ಶ್ರೀ ಮುರುಘಾಮಠ. ಪರೋಪಕಾರಕ್ಕೆ ಹೆಸರಾದವನು ಖಲಿಚಕ್ರವರ್ತಿ. ವೈಚಾರಿಕವಾಗಿ ಹೇಗೆ ಬೆಳೆಯಬೇಕೆಂದು ಹೇಳಿದ ಮಠ ಮುರುಘಾಮಠ. ಅನೇಕ ರೀತಿಯ ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಶಿಕ್ಷಣವನ್ನು ಕೊಡುವ ಮಠ. ಈ ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ನಾನೊಬ್ಬ ಭಾರತೀಯ ಎಂದು ಹೇಳಲು ಸಂತಸವಾಗುತ್ತದೆ. ಅಂತಹ ರಾಷ್ಟ್ರ ನಮ್ಮದು. ಸರ್ವಧರ್ಮ ಸಹಿಷ್ಣುತೆಯನ್ನು ಕಲಿಸಿದ್ದು ನಮ್ಮ ಭಾರತ ಎಂದರು.
ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿ, ಮನುಷ್ಯ ಜನಪ್ರಿಯನಾಗಬೇಕಾದರೆ ಇರುವಷ್ಟು ಕಾಲ ಒಳಿತನ್ನು ಮಾಡಬೇಕು. ಇತರರಿಗೆ ಒಳಿತನ್ನು ಮಾಡುವುದೇ ನಿಜವಾದ ಸಾಧನೆ. ನಮ್ಮ ನೋವು ನಮಗೆ ತಿಳಿದರೆ ನಾವು ಜೀವಂತವಾಗಿದ್ದೇವೆ ಎಂದು ಅರ್ಥ. ಆದರೆ ಇನ್ನೊಬ್ಬರ ನೋವು ನಮಗೆ ಅರ್ಥವಾದರೆ ಆಗ ಮನುಷ್ಯರಾಗುತ್ತೇವೆ. ಜನರ ಕಷ್ಟದ ಕಣ್ಣೀರನ್ನು ಒರೆಸಿದರೆ ಅದೇ ಸಾರ್ಥಕ ಬದುಕು. ಅವರೇ ದಾರ್ಶನಿಕರು, ಸಂತರಾಗುತ್ತಾರೆಂದರು.
ಎಚ್. ವಿಜಯಕುಮಾರ್ ಪರೋಪಕಾರ ದೃಷ್ಟಿ ಕುರಿತು ಮಾತನಾಡಿ, ಇನ್ನೊಬ್ಬರ ಕಷ್ಟದಲ್ಲಿ ಸ್ಪಂದಸುವುದು ಪರೋಪಕಾರ. ಇಂದು ಅನೇಕರು ಆಸ್ತಿಗಾಗಿ, ಹಣಕ್ಕಾಗಿ ಕಿತ್ತಾಡುತ್ತಿರುವುದನ್ನು ನೋಡುತ್ತಿದ್ದೇವೆ ಎಂದರು.
ಟಿಪ್ಪು ಖಾಸಿಂ ಅಲಿ, ಕೆ.ಎಂ. ವೀರೇಶ್ ಮಾತನಾಡಿದರು. ಬಿ. ದಿನೇಶ್ ಗೌಡಗೆರೆ, ಬಸವಾದಿತ್ಯ ದೇವರು, ಪ್ರೊ. ಎಸ್.ರವಿ ಇದ್ದರು.
ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ಆರ್.ಶೇಷಣ್ಣಕುಮಾರ್ ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.