ಸುದ್ಸಿಒನ್, ಹಿರಿಯೂರು, ಜುಲೈ.26: ನನ್ನ ಪುತ್ರ ಸುಹಾಸ್ ಸುಧಾಕರ್ ಅವರನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಡಿಲಿಗೆ ಹಾಕಿದ್ದೇನೆ. ಆತನನ್ನು ತಿದ್ದಿ, ತೀಡಿ ರಾಜಕೀಯ ಭವಿಷ್ಯ ರೂಪಿಸಿ, ಉಪಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳಬೇಕೆಂದು ಸಿಎಂಗೆ ದಿವಂಗತ ಡಿ. ಸುಧಾಕರ್ ಪತ್ನಿ ಹರ್ಷಿಣಿ ಸುಧಾಕರ್ ಪರೋಕ್ಷವಾಗಿ ಮನವಿ ಮಾಡಿದರು.
ನಗರದ ನೆಹರೂ ಮೈದಾನದಲ್ಲಿ ಭಾನುವಾರ ನಡೆದ ಪತಿಯವರಾದ ದಿ. ಡಿ. ಸುಧಾಕರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯೂರು ಕ್ಷೇತ್ರಕ್ಕೆ ತನ್ನ ಪತಿ ಸುಧಾಕರವರ ಬಹುದೊಡ್ಡ ಕೊಡುಗೆಯಿದೆ. ಈ ನುಡಿನಮನ ಕಾರ್ಯಕ್ರಮದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದನ್ನು ನೋಡಿದರೆ ದುಃಖ ಪಡುವುದೋ ಅಥವಾ ಸಂತೋಷ ಪಡುವುದೋ ತಿಳಿಯುತ್ತಿಲ್ಲ ಎಂದು ಭಾವುಕರಾದರು.

ಯಜಮಾನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಿಎಂ, ಮಾಜಿ ಸಿಎಂ ಸೇರಿದಂತೆ ಇಡೀ ಸರ್ಕಾರವೇ ಬಂದು ಆರೋಗ್ಯ ವಿಚಾರಿಸಿತು. ಹೆಚ್ಚಿನ ಚಿಕಿತ್ಸೆಗಾಗಿ ಸಹಾಯ ಮಾಡಲಾಗುವುದು ಎಂದರು. ಪತಿಯ ಆರೋಗ್ಯದ ಬಗ್ಗೆ ಪ್ರತಿನಿತ್ಯ ಸರ್ಕಾರ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಅವರ ಆರೋಗ್ಯ ಸುಧಾರಣೆಗೆ ಕಾರ್ಯಕರ್ತರು, ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ, ಹರಕೆ ಹೊತ್ತು, ಪ್ರಸಾದ ತಂದು ಕೊಟ್ಟರು. ದೇವರ ಆಶೀರ್ವಾದ, ಹಾರೈಕೆ ಇತ್ತು. ಆದರೆ ನಮಗೆ ಪತಿಯನ್ನು ಉಳಿಸಿಕೊಳ್ಳುವ ಭಾಗ್ಯ ಇಲ್ಲದೆ ಕಳೆದುಕೊಳ್ಳಲಾಯಿತು ಎಂದು ಬಹುದೊಡ್ಡ ವೇದಿಕೆಯಲ್ಲಿ ದುಃಖಿತರಾದರು.
ಸುಧಾಕರ್ ಅವರಿಗೆ ಹಿರಿಯೂರು ರಾಜಕೀಯ ಜನ್ಮ ನೀಡಿದ ಕ್ಷೇತ್ರ. ಈ ತಾಲ್ಲೂಕಿನ ಋಣ ತೀರಿಸಲು ಅನೇಕ ಕನಸುಗಳನ್ನು ಇಟ್ಟುಕೊಂಡಿದ್ದರು. ಆದರೆ ಇಂದು ನಮ್ಮ ಜೊತೆ ಅವರಿಲ್ಲ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಸಹಕಾರ ಸುಧಾಕರ್ ಮೇಲೆ ಇದ್ದಂತೆ ನನ್ನ ಮಗನ ಮೇಲೆ ಇರಲಿ. ಸುಧಾಕರ್ ಅವರ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರ ಮುಂದುವರಿಸಬೇಕು ಎಂದರು.
ಪುತ್ರ ಸುಹಾಸ್ ಸುಧಾಕರ್ ಮಾತನಾಡಿ ಜಿಲ್ಲೆಯ ಪ್ರಗತಿ ಹಾಗೂ ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ತಂದೆ ಶ್ರಮಿಸಿದ್ದಾರೆ. ಸಮಾಜ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಗುರಿ ಹೊಂದಿದ್ದರು. ನಮ್ಮ ತಂದೆ ದೀನದಲಿತರು, ಬಡವರು, ಹಿಂದುಳಿದವರ ಪರವಾಗಿದ್ದರು. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿದ್ದರು. ನನ್ನ ತಂದೆಯ ಅಕಾಲಿಕ ಅಗಲಿಕೆಯಿಂದ ನಮ್ಮ ಕುಟುಂಬಕ್ಕಷ್ಟೇ ಅಲ್ಲದೆ ಜಿಲ್ಲೆಗೆ ಬಹುದೊಡ್ಡ ನಷ್ಟ ಉಂಟಾಗಿದೆ. ತಂದೆಯ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಐಮಂಗಲ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸಹಕಾರ ನೀಡಿದ ಸಿಎಂ ಹಾಗೂ ಮಾಜಿ ಸಿಎಂ ಅಭಿನಂದನೆಗಳು ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಸಹಕಾರ ಸದಾ ಇರಲಿ ಎಂದರು.











