Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‌ನ ಜೊತೆ ನಾನಿದ್ದೇನೆ : ಸಚಿವ ಎಸ್.ಸಂತೋಷ್‍ಲಾಡ್ ಭರವಸೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 23 : ದೇಶ ಯಾವ ಪಕ್ಷಗಳ ಸ್ವತ್ತಲ್ಲ. ನಿಮ್ಮದು. ನಿಮ್ಮ ಹೆಗಲ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ. ವಿಜ್ಞಾನ, ಸಂಶೋಧನೆ, ಅಭಿವೃದ್ದಿ ಬಗ್ಗೆ ವಿಚಾರ ಮಾಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಕಾರ್ಮಿಕ ಸಚಿವ ಎಸ್.ಸಂತೋಷ್‍ಲಾಡ್ ಯುವ ಜನಾಂಗಕ್ಕೆ ಕರೆ ನೀಡಿದರು.

ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ವತಿಯಿಂದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ 2025 ನೇ ಸಾಲಿನ ಜೀವ ರಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ದೇಶಕ್ಕೆ ಅನ್ನ ನೀಡುತ್ತಿರುವ ರೈತರ ಸಮಸ್ಯೆ ಹೊಸದೇನಲ್ಲ. ಬೆಳೆ ಇದ್ದಾಗ, ಬೆಲೆ ಇರಲ್ಲ. ಬೆಲೆ ಇದ್ದಾಗ ಬೆಳೆ ಸಿಗಲ್ಲ. ನಾನು ಎಂದಿಗೂ ಪ್ರಶಸ್ತಿಗೆ ಆಸೆ ಪಟ್ಟವನಲ್ಲ. ಜೀವ ರಕ್ಷಕ ಪ್ರಶಸ್ತಿಗೆ ನಾನು ಅರ್ಹನಿದ್ದೇನೋ ಏನೊ ಗೊತ್ತಿಲ್ಲ. ಅಪಘಾತದಲ್ಲಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರ ಜೀವ ರಕ್ಷಣೆಯಲ್ಲಿ ತೊಡಗಿರುವ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‌ನ ಜೊತೆ ನಾನು ಸದಾ ಇರುತ್ತೇನೆಂದು ಭರವಸೆ ನೀಡಿದರು.

ರಾಜಕಾರಣ ತುಂಬಾ ಕಷ್ಟ. ಈ ದೇಶ ಕಾಂಗ್ರೆಸ್, ಬಿಜೆಪಿ, ಜೆಡಿಎಸ್.ಗೆ ಸೇರಿದ್ದಲ್ಲ. ಪ್ರಜೆಗಳಿಗೆ ಸಂಬಂಧಿಸಿದ್ದು, ರಾಜಕೀಯವನ್ನು ಹತ್ತಿರದಿಂದ ವಿಮರ್ಶೆ ಮಾಡಿದಾಗ ಸಮಾಜದಲ್ಲಿ ಬದಲಾವಣೆ ತರಬಹುದು. ಬಿಗ್‍ಬಾಸ್ ನೋಡುವುದರಲ್ಲಿ ನಮ್ಮ ದೇಶ ಪ್ರಥಮ ಸ್ಥಾನದಲ್ಲಿದೆ. ಫೇಸ್‍ಬುಕ್, ವಾಟ್ಸ್‍ಪ್‍ನಲ್ಲಿ ಕಾಲ ಕಳೆಯುವುದರಿಂದ  ಪ್ರಯೋಜನವಿಲ್ಲ. ಕೈಗಾರಿಕೆಗಳು ಬದಲಾಗುತ್ತಿರುವುದರಿಂದ ಮುಂದೆ ಅಪಾಯವಿದೆ. ಶಿಕ್ಷಣದ ಜೊತೆ ಕೌಶಲ್ಯಾಧಾರಿತ ಶಿಕ್ಷಣ ಬೇಕು. ಯುವ ಜನಾಂಗ ಡ್ರಗ್ಸ್ ಗೆ ಬಲಿಯಾಗುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿ ಎಂದು ಸಚಿವ ಎಸ್.ಸಂತೋಷ್‍ಲಾಡ್ ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿರುವ ಜನಸಂಖ್ಯೆಯಲ್ಲಿ ಶೇ.90 ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ದೇವರು, ಧರ್ಮವನ್ನು ರಾಜಕೀಯ ಪಕ್ಷಗಳು ಬಳಸಬಾರದು. ಭಾರತದಲ್ಲಿ ಅಣ್ಣ-ತಮ್ಮಂದಿರಂತೆ ಎಲ್ಲರೂ ಬದುಕುತ್ತಿದ್ದಾರೆ. ಶಾಸನಬದ್ದ, ಕಾನೂನಾತ್ಮಕ ಮಸೂದೆಗಳನ್ನು ಜಾರಿಗೆ ತಂದ ಸಂವಿಧಾನಶಿಲ್ಪಿ ಡಾ.ಬ.ಆರ್.ಅಂಬೇಡ್ಕರ್, ಬುದ್ದ, ಬಸವಣ್ಣನವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ಜೀವ ರಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಗಾಟಿಸಿ ಮಾತನಾಡಿದ ಪತ್ರಕರ್ತರ ವಿಶ್ಲೇಷಕ ದಿನೇಶ್ ಅಮೀನ್‍ಮಟ್ಟು ಎಲ್ಲಿ ದುರಂತ ಸಂಭವಿಸಿದರೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೊದಲು ನೆನಪಾಗುವುದು ಸಚಿವ ಎಸ್.ಸಂತೋಷ್‍ಲಾಡ್. ಕೇದಾರ ದುರಂತ, ಪಹಲ್ಗಾಮ್‍ನಲ್ಲಿ ಉಗ್ರರ ದಾಳಿಗೆ ಕನ್ನಡಿಗರು ಬಲಿಯಾದಾಗ ಯಾವ ಹೆದರಿಕೆಯೂ ಇಲ್ಲದೆ ಆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಸಿಲುಕಿದ್ದ ಕನ್ನಡಿಗರನ್ನು ರಕ್ಷಿಸಿ ಸಾಹಸ ಮೆರೆದಿದ್ದಾರೆ. ಇಂತಹವರನ್ನು ಗುರುತಿಸಿ ಜೀವ ರಕ್ಷಕ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣ. ದೇಶದ ಮೊದಲ ಕಾರ್ಮಿಕ ಸಚಿವರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕರಿಗೆ ಸಮಾನ ವೇತನ ನೀಡಬೇಕೆಂಬ ಕಾನೂನು ಜಾರಿಗೆ ತಂದರು. ರಾಜ್ಯದಲ್ಲಿರುವ ಮೂರು ಕೋಟಿ ಕಾರ್ಮಿಕರ ರಕ್ಷಣೆ ಜವಾಬ್ದಾರಿಯನ್ನು ಸಚಿವ ಸಂತೋಷ್‍ಲಾಡ್ ಹೊತ್ತಿದ್ದಾರೆಂದು ಪ್ರಶಂಶಿಸಿದರು.

ಹೆಣ್ಣು ಮಕ್ಕಳಿಗೆ ಮುಟ್ಟಿನ ರಜೆ ನೀಡಬೇಕೆಂಬ ಯೋಜನೆ ಸಂತೋಷ್‍ಲಾಡ್‍ರವರದು. ನಕಲಿ ಕಾರ್ಮಿಕರ ಗುರುತಿನ ಚೀಟಿಗಳನ್ನು ಪತ್ತೆ ಹಚ್ಚಿ ನಿಜವಾದ ಕಾರ್ಮಿಕರಿಗೆ ನ್ಯಾಯ ಒದಗಿಸಿದ್ದಾರೆ. ಸಮಾಜ ಸೇವಕರು ಅಳಿವಿನಂಚಿನಲ್ಲಿರುವುದರಿಂದ ಸಮಾಜ ಸೇವೆಗೆ ಬರುವವರು ಕಡಿಮೆಯಾಗುತ್ತಿದ್ದಾರೆ. ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರನ್ನು ಹುಡುಕುವಂತಾಗಿದೆ. ನೆಮ್ಮದಿಯಾಗಿ ನಿದ್ರೆ ಮಾಡಬೇಕಾದರೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆಂದು ಹೇಳಿದರು.

ಗಂಟೆಗೆ 475 ಮಂದಿ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಮದ್ಯಪಾನ ನಿಷೇಧಿಸಿದರೆ ಶೇ.50 ರಷ್ಟು ಅಪಘಾತಗಳು ಕಡಿಮೆಯಾಗುತ್ತದೆ. ಒಂದು ಕಾಲದಲ್ಲಿ ಅವಿದ್ಯಾವಂತರು ಸಮಾಜ ಸೇವೆಯಲ್ಲಿ ತೊಡಗುತ್ತಿದ್ದರೆಂದರು.
ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ಸೇವೆ ಹೆಸರಿನಲ್ಲಿ ಸ್ವಾಹ ಮಾಡುವವರೆ ಜಾಸ್ತಿಯಾಗಿರುವ ಇಂದಿನ ಕಾಲದಲ್ಲಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನವರು ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿರುವವರನ್ನು ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸುವ ಮಾನವೀಯತೆಯ ಕೆಲಸ ಮಾಡುತ್ತಿರುವುದು ಸುಲಭವಲ್ಲ. ಜೀವ ರಕ್ಷಣೆ ಮಾಡುವ ಮನುಷ್ಯ ಭಕ್ಷಕನಾಗಬಾರದು ಎಂದು ಹೇಳಿದರು.

ಮಾತು ಸಾಧನೆಯಾಗಬಾರದು. ಸಾಧನೆಯೇ ಮಾತಾಗಬೇಕೆನ್ನುವಂತೆ ಕಾರ್ಮಿಕ ಸಚಿವ ಎಸ್.ಸಂತೋಷ್‍ಲಾಡ್ ಸಾಧನೆಯನ್ನೆ ಮಾತಾಗಿಸಿಕೊಂಡಿದ್ದಾರೆ. ಭಗವಂತನ ಒಲುಮೆ ಪಡೆಯಬೇಕಾದರೆ ನಿಸ್ವಾರ್ಥ ಸೇವೆ ಮಾಡಬೇಕು. ವಿದ್ಯಾವಂತರಿಗೂ ಜೀವಿಗಳ ರಕ್ಷಣೆ ಬಗ್ಗೆ ಗೌರವವಿಲ್ಲದಂತಾಗಿದೆ. ಮದರ್ ಥೆರೇಸಾ ಕೊನೆಯುಸಿರಿರುವತನಕ ಕುಷ್ಟರೋಗಿಗಳು ನೊಂದವರ ಸೇವೆಯಲ್ಲಿ ಸಾರ್ಥಕತೆಯನ್ನು ಕಂಡುಕೊಂಡಿದ್ದರು. ಸೇವೆಯಲ್ಲಿ ಸಿಗುವ ಸಂತೃಪ್ತಿ ಬೇರೆ ಯಾವುದರಲ್ಲಿಯೂ ಇಲ್ಲ. ಧನದ ಸಂಪತ್ತಿಗಿಂತ ಭೌದ್ದಿಕ, ನೈತಿಕ ಸಂಪತ್ತಿದ್ದಾಗ ಕಷ್ಟದಲ್ಲಿರುವವರಿಗೆ ಸ್ಪಂದಿಸಲು ಸಾಧ್ಯ. ತೊಂದರೆಯಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಜೀವದ ಹಂಗು ತೊರೆದು ಪಹಲ್ಗಾಂಗೆ ತೆರಳಿ ಅಲ್ಲಿನ ಕನ್ನಡಿಗರನ್ನು ರಕ್ಷಿಸಿದ ಸಚಿವ ಸಂತೋಷ್‍ಲಾಡ್‍ಗೆ ಜೀವ ರಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ನಿಜಕ್ಕೂ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ. ಸಮಾಜ ಸೇವೆಯಲ್ಲಿ ತೊಡಗಿರುವವರು ಲೇವಡಿ, ಟೀಕೆಗಳಿಗೆ ಹೆದರಬೇಕಿಲ್ಲ. ಅವಹೇಳನವಾದಾಗ ಶಾಂತಿ, ಸಮಾಧಾನವನ್ನು ಕಳೆದುಕೊಳ್ಳಬಾರದು. ಇದ್ದುದರಲ್ಲಿಯೇ ರೈತರು ಸತ್ಯವಂತರು, ಪ್ರಾಮಾಣಿಕರು. ಸಮಾಜ ಸೇವೆಯ ಕಾಯಕವನ್ನಾಗಿಸಿಕೊಳ್ಳಲಿ ಎಂದು ಸಚಿವ ಎಸ್.ಸಂತೋಷ್‍ಲಾಡ್‍ಗೆ ಸ್ವಾಮೀಜಿ ಶುಭ ಹಾರೈಸಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‍ನ ಪದಾಧಿಕಾರಿಗಳು ಸಮುದಾಯದ ನಿಜವಾದ ರತ್ನಗಳು. ಯಾವ ಪ್ರತಿಫಲಾಪೇಕ್ಷೆಯನ್ನು ಬಯಸದೆ ಸಚಿವ ಸಂತೋಷ್‍ಲಾಡ್ ಜೀವ ರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆಂದರೆ ಅಂಬೇಡ್ಕರ್‍ರವರ ವಿಚಾರಧಾರೆಗಳೆ ಅವರಿಗೆ ಪ್ರೇರಣೆ. ಸಮಾಜ ಸೇವೆಯನ್ನು ಚಟ, ಹಠವನ್ನಾಗಿಸಿಕೊಂಡಿರುವ ಲಾಡ್‍ರವರ ಸಮಾಜ ಸೇವೆ ಹೀಗೆಯೆ ಮುಂದುವರೆಯಲಿ ಎಂದು ಆಶಿಸಿದರು.
ಜೀವ ರಕ್ಷಕ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷ ರಂಗಸ್ವಾಮಿ, ಸಂಸ್ಥಾಪಕ ಕಾರ್ಯದರ್ಶಿ ಸೌಮ್ಯ ಮಂಜುನಾಥ್ ಇವರುಗಳು ಮಾತನಾಡಿದರು.

ಜೀವ ರಕ್ಷಕ ಟ್ರಸ್ಟ್‍ನ ಜಿಲ್ಲಾಧ್ಯಕ್ಷ ಬಿ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ, ಡಾ.ಸಂದೀಪ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೆಸಿಂಗ್, ಮುಬಾರಕ್, ಬಸವರಾಜ್ ಬಚ್ಚಬೋರನಹಟ್ಟಿ, ಹನುಮಂತಪ್ಪ ಗೋಡೆಮನೆ, ಕುರಿಗಾಹಿಗಳ ಸಂಘದ ರಾಜ್ಯಾಧ್ಯಕ್ಷ ಗಿರೀಶ್, ದಾದರ್ ಇವರುಗಳು ವೇದಿಕೆಯಲ್ಲಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now