ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 21 : ಚಂದ್ರವಳ್ಳಿ ಮತ್ತು ತಿಮ್ಮಣ್ಣನಾಯಕನಕೆರೆಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸುವಂತೆ ಕರುನಾಡ ವಿಜಯಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ಚಿತ್ರದುರ್ಗಕ್ಕೆ ಹಿರಿಯೂರಿನ ವಾಣಿವಿಲಾಸಸಾಗರ ಹಾಗೂ ಶಾಂತಿಸಾಗರದ ನೀರು ಪೂರೈಕೆಯಾಗುತ್ತಿರುವುದು ಜನಸಂಖ್ಯೆಗೆ ಸಾಕಾಗುತ್ತಿಲ್ಲ. ಹಾಗಾಗಿ ರಾಜ ಮಹಾರಾಜರ ಕಾಲದ ತಿಮ್ಮಣ್ಣನಾಯಕನಕೆರೆ. ಭರಮಣ್ಣನಾಯಕ ಕಟ್ಟಿಸಿರುವ ಸಂತೆಹೊಂಡ ಹಾಗೂ ಚಂದ್ರವಳ್ಳಿಗೆ ಭದ್ರಾ ಯೋಜನೆಯ ನೀರು ಹರಿಸಿದರೆ ಚಿತ್ರದುರ್ಗದ ಜನತೆಗೆ ಕುಡಿಯುವ ನೀರು ಪೂರೈಸಬಹುದು. ಜೊತೆಗೆ ಅಂತರ್ಜಲ ಮಟ್ಟ ಕೂಡ ಹೆಚ್ಚಿ ಜನ ಜಾನುವಾರುಗಳು ಹಾಗೂ ರೈತರಿಗೆ ಅನುಕೂಲವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಗರಕ್ಕೆ ಸಮೀಪವಿರುವ ಕೆರೆಗಳನ್ನು ತುಂಬಿಸಿ ಯಾದವ ಮಠದ ಮುಂಭಾಗ ಹಾಗೂ ಗುಡ್ಡದ ಹಿಂಭಾಗದಲ್ಲಿರುವ ಜಾಗಗಳಲ್ಲಿ ಓವರ್ ಹೆಡ್ ಟ್ಯಾಂಕ್‍ಗಳನ್ನು ನಿರ್ಮಿಸಿ ನೀರು ಶೇಖರಿಸಿದರೆ ಜನತೆಗೆ ಕುಡಿಯಲು ಅನುಕೂಲವಾಗುತ್ತದೆಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಕಾರ್ಯದರ್ಶಿ ಜಗದೀಶ್, ಉಪಾಧ್ಯಕ್ಷ ಮುಜಾಹಿದ್, ನಗರಾಧ್ಯಕ್ಷ ಅವಿನಾಶ್, ಮಣಿಕಂಠ, ತಿಪ್ಪೇಸ್ವಾಮಿ, ಪ್ರದೀಪ್ ಆರ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










