ಶಿವಮೊಗ್ಗ: ಹ್ಯಾಟ್ರಿಕ್ ಹೀರೋ ಶಿವ ರಾಜ್‍ಕುಮಾರ್ ಸದ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಮಧು ಬಂಗಾರಪ್ಪಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಕ್ಕಿರುವುದು ಹಾಗೂ ಗೀತಾ ಅವರು ಕೂಡ ಕಾಂಗ್ರೆಸ್ ಸೇರ್ಪಡೆಯಾಗಿರುವ ಕಾರಣ ಶಿವಣ್ಣ ಕಾಂಗ್ರೆಸ್ ಪರ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ನಿನ್ನೆಯೆಲ್ಲಾ ಸಿದ್ದರಾಮಯ್ಯ ಅವರ ಪರವಾಗಿ ವರುಣಾದಲ್ಲಿ ಪ್ರಚಾರ ನಡೆಸಿ ಬಂದಿದ್ದಾರೆ.
ಸಿದ್ದರಾಮಯ್ಯ ಅವರ ಪರ ಶಿವಣ್ಣ ಪ್ರಚಾರ ಮಾಡಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಅವರು ವ್ಯಂಗ್ಯವಾಡಿದ್ದರು. ಇದಕ್ಕೆ ಸ್ವತಃ ಶಿವ ರಾಜ್‍ಕುಮಾರ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ಮಧು ಬಂಗಾರಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಶಿವಣ್ಣ, ಅಲ್ಲಿ ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ಬರೀ ಪ್ರಚಾರದಲ್ಲಿ ಇದ್ದೇನೆ. ನನಗೀಗ 61 ವರ್ಷ. ಯಾರು ಶತ್ರುಗಳಿಲ್ಲ ಎಂದಿದ್ದಾರೆ.
ಸಂಸದ ಪ್ರತಾಪ್ ಸಿಂಹ ಹಾಗೂ ವಿ ಸೋಮಣ್ಣ ನನಗೆ ತುಂಬಾ ಆಪ್ತರು. ನಾನು ಎಲ್ಲರಿಗೂ ಗೌರವ ಕೊಡುತ್ತೇನೆ. ಪ್ರಚಾರ ಎನ್ನುವುದನ್ನು ಮಧು ಬಂಗಾರಪ್ಒಗಾಗಿ ಆರಂಭಿಸಿದ್ದೇನೆ. ರಾಹುಲ್ ಗಾಂಧಿಯವರನ್ನು ಮೀಟ್ ಮಾಡಬೇಕು ಎಂದುಕೊಂಡಿದ್ದೆ. ಮೀಟ್ ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಏರಿಯಾದಲ್ಲಿಯೇ ಇದ್ದಿದ್ದರಿಂದ ಅವರನ್ನು ಭೇಟಿ ಮಾಡಿದ್ದೆ. ಬೇರೆ ಪಕ್ಷದವರು ಪ್ರಚಾರಕ್ಕೆ ಕರೆದಿದ್ದರೆ ಖಂಡಿತ ಹೋಗುತ್ತಿದ್ದೆ ಎಂದಿದ್ದಾರೆ.