Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉತ್ತಮ ವೈದ್ಯರಾಗಲು ಮಾನವೀಯತೆ, ಜ್ಞಾನ ಮತ್ತು ಸಮರ್ಪಣೆ ಅಗತ್ಯ: ಡಾ. ಎಸ್.ಎಚ್. ದೇವರಾಜ್

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 19 : ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ವಿ ವೈದ್ಯರಾಗಿ ಗುರುತಿಸಿಕೊಳ್ಳಲು ಜ್ಞಾನ ಮತ್ತು ಕೌಶಲ್ಯದ ಜತೆಗೆ ರೋಗಿಗಳ ಬಗೆಗಿನ ಮಾನವೀಯ ಕಳಕಳಿ, ನಿರಂತರ ಪರಿಶ್ರಮ ಮತ್ತು ವೃತ್ತಿಪರ ಬದ್ಧತೆ ಅತ್ಯಂತ ಅವಶ್ಯಕವಾಗಿದೆ ಎಂದು ಜಿಲ್ಲಾಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ಡಾ. ಎಸ್.ಎಚ್.ದೇವರಾಜ್ ಅಭಿಪ್ರಾಯಪಟ್ಟರು.

ನಗರದ ಜೆಎಂಐಟಿ ಆವರಣದ ಬಸವೇಶ್ವರ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಚಿತ್ರದುರ್ಗ ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ವೈದ್ಯಕೀಯ ವೃತ್ತಿ ಎಂಬುದು ಕೇವಲ ಉದ್ಯೋಗವಲ್ಲ, ಅದೊಂದು ಪರಮ ಪವಿತ್ರವಾದ ಸೇವೆ. ಪ್ರತಿಯೊಬ್ಬ ವೈದ್ಯನಿಗೆ ನಿರಂತರ ಅಧ್ಯಯನದ ಜ್ಞಾನ, ರೋಗಿಗಳನ್ನು ಪ್ರೀತಿಯಿಂದ ಗುಣಪಡಿಸುವ ಕೌಶಲ್ಯ, ಕಠಿಣ ಪರಿಶ್ರಮ ಹಾಗೂ ಸಂಪೂರ್ಣ ಸಮರ್ಪಣಾ ಭಾವ ಇರಬೇಕು. ಇವೆಲ್ಲದರ ಜೊತೆಗೆ ಮಾನವೀಯ ಮೌಲ್ಯಗಳು ಮೇಳೈಸಿದಾಗ ಮಾತ್ರ ಸಮಾಜದಲ್ಲಿ ಉತ್ತಮ ವೈದ್ಯರಾಗಲು ಸಾಧ್ಯ ಯುವ ವೈದ್ಯರಿಗೆ ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಯುವ ವೈದ್ಯರಲ್ಲಿ ರೋಗಿಗಳನ್ನು ದೈಹಿಕವಾಗಿ ಪರೀಕ್ಷಿಸುವ ವಿಧಾನ ಕಡಿಮೆಯಾಗುತ್ತಿದ್ದು, ಸಿಟಿ ಸ್ಕ್ಯಾನ್, ಎಂಆರ್‌ಐ, ರಕ್ತ ಪರೀಕ್ಷೆಗಳಂತಹ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಲ್ಯಾಬ್ ವರದಿಗಳ ಮೇಲೆಯೇ ಅತಿಯಾಗಿ ಅವಲಂಬಿತರಾಗುತ್ತಿದ್ದಾರೆ. ಮೊದಲು ರೋಗಿಯ ಇತಿಹಾಸವನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು. ದೈಹಿಕವಾಗಿ ರೋಗಿಯನ್ನು ತಪಾಸಣೆ ನಡೆಸಿ ಕಾಯಿಲೆ ಪತ್ತೆಹಚ್ಚುವ ಹಳೆಯ ‘ಕ್ಲಿನಿಕಲ್’ ಪದ್ಧತಿಗೆ ಹೆಚ್ಚಿನ ಒತ್ತು ನೀಡಬೇಕು. ತದನಂತರವಷ್ಟೇ ಅಗತ್ಯವಿದ್ದರೆ ತಾಂತ್ರಿಕ ತಪಾಸಣೆಗಳ ಮೊರೆ ಹೋಗಬೇಕು ಎಂದು ಯುವ ವೈದ್ಯರಲ್ಲಿ ಮನವಿ ಮಾಡಿದರು.

ಇದೇ ತಿಂಗಳು ವಯೋನಿವೃತ್ತಿ ಹೊಂದಲಿರುವ ಜಿಲ್ಲಾಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ಡಾ. ಎಸ್. ಎಚ್.ದೇವರಾಜ್ ಅವರ ಸುದೀರ್ಘ ಹಾಗೂ ಯಶಸ್ವಿ ಸೇವೆಯನ್ನು ಶ್ಲಾಘಿಸಿ, ಐಎಂಎ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಬಸವೇಶ್ವರ ವೈದ್ಯಕೀಯ ಕಾಲೇಜಿನ ಡೀನ್ ಡಾ. ರಾಜೇಶ್, ಐಎಂಎ ಚಿತ್ರದುರ್ಗ ಶಾಖೆಯ ಅಧ್ಯಕ್ಷರಾದ ಡಾ. ಡಾ.ಪಾಲಾಕ್ಷಯ್ತ, ಪ್ರಧಾನ ಕಾರ್ಯದರ್ಶಿ ಡಾ. ಎನ್. ಬಿ. ಪ್ರಹ್ಲಾದ್ ಹಾಗೂ ಖಜಾಂಚಿ ಮತ್ತು ಹಿರಿಯ ಮೂಳೆ ರೋಗ ತಜ್ಞರಾದ ಡಾ. ಕೆ. ಎಮ್. ಬಸವರಾಜ್, ಡಾ.ನಾರಾಯಣಮೂರ್ತಿ ಸೇರಿದಂತೆ ಮತ್ತಿತರರು ಇದ್ದರು.

ಪೋಟೋ ವಿವರ: ಚಿತ್ರದುರ್ಗನಗರದ ಜೆಎಂಐಟಿ ಆವರಣದ ಬಸವೇಶ್ವರ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜಿಲ್ಲಾ ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆಯಲ್ಲಿ ಜಿಲ್ಲಾಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ಡಾ.ಎಸ್.ಎಚ್.ದೇವರಾಜ್ ಹಾಗೂ ಅವರ ಪತ್ನಿ ಎಸ್.ಜೆ.ಶ್ವೇತಾ ಅವರನ್ನು ಸನ್ಮಾನಿಸಲಾಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now