ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜೂನಿಯರ್ ಅಸೋಸಿಯೇಟ್ (Customer Support & Sales) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ವಿಶೇಷ ನೇಮಕಾತಿ ಅಭಿಯಾನದಡಿ ಒಟ್ಟು 1,538 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 7, 2026ರಿಂದ ಆರಂಭವಾಗಿದ್ದು, ಆಗಸ್ಟ್ 27, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು SBIಯ ಅಧಿಕೃತ ಕೆರಿಯರ್ಸ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳು ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ (UT) ಖಾಲಿ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಲ್ಲದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ನಿಗದಿಪಡಿಸಿರುವ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
SBI ಕ್ಲರ್ಕ್ ಆಯ್ಕೆ ಪ್ರಕ್ರಿಯೆ
ನೇಮಕಾತಿ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಅಗತ್ಯವಿರುವ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LLPT) ಇರಲಿದೆ.
SBI ಕ್ಲರ್ಕ್ ಪೂರ್ವಭಾವಿ ಪರೀಕ್ಷೆಯನ್ನು ಸೆಪ್ಟೆಂಬರ್ 2026ರಲ್ಲಿ ನಡೆಸಲು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ. ಮುಖ್ಯ ಪರೀಕ್ಷೆಯು ಅಕ್ಟೋಬರ್ ಅಥವಾ ನವೆಂಬರ್ 2026ರಲ್ಲಿ ನಡೆಯುವ ನಿರೀಕ್ಷೆಯಿದೆ.

ಪೂರ್ವಭಾವಿ ಪರೀಕ್ಷೆ ಹೇಗಿರಲಿದೆ?
ಆನ್‌ಲೈನ್ ಮೂಲಕ ನಡೆಯುವ ಪೂರ್ವಭಾವಿ ಪರೀಕ್ಷೆ ಒಟ್ಟು 100 ಅಂಕಗಳಿಗೆ ಇರಲಿದೆ. ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುವ ಪರೀಕ್ಷೆಯ ಅವಧಿ ಒಂದು ಗಂಟೆಯಾಗಿದ್ದು, ವಿವಿಧ ವಿಭಾಗಗಳಿಗೆ ಸಮಯವನ್ನು ನಿಗದಿಪಡಿಸಲಾಗುತ್ತದೆ.
ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಒಟ್ಟಾರೆ ಅರ್ಹತಾ ಅಂಕಗಳನ್ನು ಪರಿಗಣಿಸಲಾಗುತ್ತದೆ. ಪ್ರತ್ಯೇಕ ವಿಭಾಗಗಳಿಗೆ ಕನಿಷ್ಠ ಅರ್ಹತಾ ಅಂಕಗಳನ್ನು ನಿಗದಿಪಡಿಸುವುದಿಲ್ಲ ಎಂದು ನೇಮಕಾತಿ ನಿಯಮಗಳಲ್ಲಿ ತಿಳಿಸಲಾಗಿದೆ.
10 ಅಥವಾ 12ನೇ ತರಗತಿಯಲ್ಲಿ ಸಂಬಂಧಿತ ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡದ ಅಭ್ಯರ್ಥಿಗಳು ನೇಮಕಾತಿಗೆ ತಾತ್ಕಾಲಿಕವಾಗಿ ಆಯ್ಕೆಯಾದ ಬಳಿಕ ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LLPT) ಎದುರಿಸಬೇಕಾಗುತ್ತದೆ.ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಸ್ಥಳೀಯ ಭಾಷೆಯ ಓದು, ಬರವಣಿಗೆ, ಮಾತನಾಡುವಿಕೆ ಹಾಗೂ ಗ್ರಹಿಕೆ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ.
ವಯೋಮಿತಿ ಎಷ್ಟು?
ಏಪ್ರಿಲ್ 1, 2026ರ ವೇಳೆಗೆ ಅಭ್ಯರ್ಥಿಯ ವಯಸ್ಸು:
ಕನಿಷ್ಠ 20 ವರ್ಷ ಇರಬೇಕು.
ಗರಿಷ್ಠ 28 ವರ್ಷ ಮೀರಿರಬಾರದು.
ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು SBIಯ ಅಧಿಕೃತ ಕೆರಿಯರ್ಸ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ನೋಂದಣಿ ಪೂರ್ಣಗೊಳಿಸಿದ ಬಳಿಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿ ನಮೂನೆಯನ್ನು ಪರಿಶೀಲಿಸಿ ಸಲ್ಲಿಸಬೇಕು. ಬಳಿಕ ಅನ್ವಯವಾಗುವ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.ನೇಮಕಾತಿಗೆ ಸಂಬಂಧಿಸಿದ ಪರೀಕ್ಷಾ ದಿನಾಂಕ, ಪ್ರವೇಶ ಪತ್ರ ಹಾಗೂ ಇತರ ಮಾಹಿತಿಯನ್ನು ಅಭ್ಯರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್‌ಗೆ ಕಳುಹಿಸಲಾಗುತ್ತದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅಭ್ಯರ್ಥಿಗಳು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಸಕ್ರಿಯವಾಗಿರಿಸಿಕೊಳ್ಳುವಂತೆ ಸೂಚಿಸಲಾಗಿದೆ.










