ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 10 : ಗರ್ಭಕಂಠದ ಕ್ಯಾನ್ಸರ್ ತಡೆಯುವುದಕ್ಕಾಗಿ 9 ವರ್ಷದಿಂದ ಹದಿನೈದು ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಹೆಚ್.ಪಿ.ವಿ.ಲಸಿಕೆ ನೀಡುತ್ತಿರುವುದು ನಿಜಕ್ಕೂ ಸಮಾಜಮುಖಿ ಕೆಲಸವೆಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚನ್ನಯ್ಯಸ್ವಾಮೀಜಿ ಪ್ರಶಂಶಿಸಿದರು.


ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪಾಲ್ಗುಣೇಶ್ವರ ಮತ್ತು ಆಂಜನೇಯಸ್ವಾಮಿ ದೇವಸ್ಥಾನ ಸಮಿತಿಯವರು ಹಮ್ಮಿಕೊಂಡಿರುವ ಪೂಜಾ ಕಾರ್ಯಕ್ರಮಗಳ ಅಂಗವಾಗಿ ಕೀರ್ತಿ ಆಸ್ಪತ್ರೆಯಲ್ಲಿ ಹೆಚ್.ಪಿ.ವಿ.ಲಸಿಕೆಗೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯವೇ ಪ್ರತಿಯೊಬ್ಬರಿಗೂ ದೊಡ್ಡ ಸಂಪತ್ತು. ಅಮೇರಿಕಾ ದೇಶವನ್ನು ಬಿಟ್ಟರೆ ಭಾರತವೂ ಆರೋಗ್ಯ ಸುಧಾರಣೆಯತ್ತ ಮುಂದೆ ಸಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ನಮ್ಮ ದೇಶದ ಪ್ರಧಾನಿ ಮೋದಿರವರು ಉಚಿತವಾಗಿ ಲಸಿಕೆಗಳನ್ನು ಒದಗಿಸಿದ್ದರ ಪರಿಣಾಮವಾಗಿ ಸಾವು-ನೋವುಗಳ ಸಂಖ್ಯೆ ಕಡಿಮೆಯಾಯಿತು. ಗರ್ಭಕೋಶದ ಕ್ಯಾನ್ಸರ್ನಿಂದ ಪ್ರತಿ 8 ನಿಮಿಷಕ್ಕೆ ಒಬ್ಬ ಮಹಿಳೆ ಸಾವನ್ನಪ್ಪುತ್ತಿರುವುದು ನೋವಿನ ಸಂಗತಿ. ಈ ನಿಟ್ಟಿನಲ್ಲಿ ಪಾಲ್ಗುಣೇಶ್ವರ ದೇವಸ್ಥಾನ ಸಮಿತಿಯವರು ಹೆಚ್.ಪಿ.ವಿ. ಲಸಿಕೆ ಕೊಡಿಸುತ್ತಿರುವುದರ ಪ್ರಯೋಜನವನ್ನು ಹೆಣ್ಣು ಮಕ್ಕಳು ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಯೋಜನೆಗಳಿಗೆ ಕೈಜೋಡಿಸಿ ಅಗತ್ಯ ನೆರವು ಕಲ್ಪಿಸಬೇಕು. ಸಮಾಜಕ್ಕೆ ಉಪಯುಕ್ತವಾದ ಲಸಿಕೆ ನೀಡುತ್ತಿರುವುದು ದೇವರ ಕೆಲಸ ಮಾಡಿದಂತೆ. ಆರೋಗ್ಯದ ಬಗ್ಗೆ ಎಲ್ಲರಲ್ಲಿಯೂ ಕಾಳಜಿ ಮೂಡಿಸುವ ಕೆಲಸವಾಗಬೇಕೆಂದರು.
ಕೀರ್ತಿ ಆಸ್ಪತ್ರೆಯ ಡಾ.ಮಲ್ಲಿಕಾರ್ಜುನ್, ವನಜಾಕ್ಷಮ್ಮ, ಪಾಲ್ಗುಣೇಶ್ವರ ಮತ್ತು ಆಂಜನೇಯ ಸೇವಾ ಸಮಿತಿ ಅಧ್ಯಕ್ಷ ಹೆಚ್.ರಂಗಸ್ವಾಮಿ, ಕೆ.ಜಿ.ಟಿ.ಗುರುಮೂರ್ತಿ
ಎಸ್.ಬಿ.ಎಲ್.ಮಲ್ಲಿಕಾರ್ಜುನ್, ಎಸ್.ಟಿ.ನವೀನ್ಕುಮಾರ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.










