ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಪರ್ಷಿಯನ್ ಗಲ್ಫ್ ಪ್ರದೇಶವು ಜಗತ್ತಿನಲ್ಲೇ ಅತಿಹೆಚ್ಚು ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿರುವ ಸ್ಥಳವಾಗಿದೆ. ಪರ್ಷಿಯನ್ ಗಲ್ಫ್ ತೈಲ ಮತ್ತು ಅನಿಲದ ಜಲಾನಯನ ಪ್ರದೇಶವು ಸುಮಾರು ಅಂದಾಜು 241000 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಜಗತ್ತಿನಲ್ಲಿ ಸಾಬೀತಾದ ತೈಲ ನಿಕ್ಷೇಪಗಳಲ್ಲಿ ಸುಮಾರು ಮೂರನೇ ಎರಡರಷ್ಟು (2/3) ಮತ್ತು ನೈಸರ್ಗಿಕ ಅನಿಲದಲ್ಲಿ ಮೂರನೇ ಒಂದು ಭಾಗ (1/3) ಈ ಪ್ರದೇಶದಲ್ಲಿದೆ. ಈ ಪ್ರದೇಶವು ಇಷ್ಟೊಂದು ಅದ್ಭುತ ಸಂಪನ್ಮೂಲವನ್ನು ಹೊಂದಿರಲು ಭೂವೈಜ್ಞಾನಿಕ ಭೌಗೋಳಿಕ ಮತ್ತು ತಾಂತ್ರಿಕ ಕಾರಣಗಳಿವೆ. ಇದನ್ನು ವಿವರವಾಗಿ ನೋಡಿದಲ್ಲಿ ಸುಮಾರು 200 ರಿಂದ 250 ಮಿಲಿಯನ್ ವರ್ಷಗಳ ಹಿಂದೆ ಈ ಪ್ರದೇಶವು “ಟೆಥಿಸ್” ಸಮುದ್ರ ಎಂಬ ವಿಶಾಲವಾದ ಬೆಚ್ಚಗಿನ ಮತ್ತು ಆಳವಿಲ್ಲದ ಸಮುದ್ರದಿಂದ ಅವೃತವಾಗಿತ್ತು.

ಈ ಸಮುದ್ರದಲ್ಲಿ ಸಮುದ್ರದ ಜೀವಿಗಳು (ಪ್ಲಾಂಕ್ಟಿನ್, ಪಾಚಿ, ಸಣ್ಣ ಮೀನುಗಳು) ಅತಿಯಾಗಿ ಬೆಳೆದಿದ್ದವು. ಈ ಜೀವಿಗಳು ಸತ್ತನಂತರ ಸಮುದ್ರದ ತಳದಲ್ಲಿ ಶೇಖರಗೊಂಡು ಆಮ್ಲಜನಕವಿಲ್ಲದ ಪರಿಸರದಲ್ಲಿ ಕೊಳೆತವು. ಕೊಟ್ಯಾಂತರ ವರ್ಷಗಳ ಕಾಲ ಮಣ್ಣು ಮತ್ತು ಕೆಸರಿನ ಪದರಗಳು ಈ ಜೈವಿಕ ವಸ್ತುಗಳ ಮೇಲೆ ಶೇಖರಣೆಯಾಗಿ, ಅತಿಯಾದ ಶಾಖ ಮತ್ತು ಒತ್ತಡದಿಂದ ಇವು ತೈಲ ಮತ್ತು ಅನಿಲವಾಗಿ ಬದಲಾದವು. ಪರ್ಷಿಯನ್ ಗಲ್ಫ್ ಪ್ರದೇಶವು ಆರೇಬಿಯನ್ ಪ್ಲೇಟ್ ಮತ್ತು ಯುರೇಶಿಯನ್ ಪ್ಲೇಟ್ ಸಂಧಿಸುವ ಸ್ಥಳದಲ್ಲಿದೆ. ಕಳೆದ 35 ಮಿಲಿಯನ್ ವರ್ಷಗಳಿಂದ ಅರೇಬಿಯನ್ ಪ್ಲೇಟ್ ಉತ್ತರಕ್ಕೆ ಚಲಿಸಿ ಯುರೇಶಿಯ ಪ್ಲೇಟ್‌ಗೆ ಡಿಕ್ಕಿ ಹೊಡೆಯುತ್ತದೆ.
ಈ ಘರ್ಷದಿಂದ ಇರಾನ್ ಕಡೆಗೆ ಜಾಕ್ರೋಸ್ ಪರ್ವಗಳು ಉದ್ಭವಿಸಿದವು, ಈ ಪರ್ವತಗಳ ಭಾರದಿಂದಾಗಿ ಪಕ್ಕದ ಭೂಮಿ ಕೆಳಗೆ ಕುಸಿದು ಪೋಲ್ಯಾಡ್ ಬೇಸಿನ್ ಎಂಬ ದೊಡ್ಡ ತಗ್ಗು ಪ್ರದೇಶ ಸೃಷ್ಠಿಯಾಯಿತು. ಇದು ತೈಲ ಶೇಖರಣೆಗೆ ಸೂಕ್ತವಾದ ಜಾಗವಾಯಿತು. ತೈಲವು ಬಂಡೆಗಳ ಅಡಿಯಲ್ಲಿ ಸಿಕ್ಕಿಹಾಕಿಕೊಳ್ಳಲು ವಿಶೇಷ ರಚನೆಗಳು ಬೇಕು, ಭೂಫಲಕಗಳ ಒತ್ತಡದಿಂದಾಗಿ ಇಲ್ಲಿನ ಬಂಡೆಗಳು ಮಡಚಲ್ಪಟ್ಟವು (Folding) ದೊಡ್ಡ ಗುಮ್ಮಟಾಕಾರದ ಅಂಟಿಕ್ಲೈನ್‌ಗಳನ್ನು ಸೃಷ್ಟಿಸಿದೆ. ಇದು ತೈಲವನ್ನು ಹಿಡಿದಿಟ್ಟುಕೊಳ್ಳವ ಬೃಹತ್ ಟ್ಯಾಂಕ್‌ಗಳಾಗಿವೆ. ಈ ತೈಲ ಶೇಖರಣೆಯ ಮೇಲೆ ಅನೈಡ್ರೈಟ್ ((Anhydrite)) ಮತ್ತು ಉಪ್ಪು ಪದರಗಳಿವೆ. ಇವು ತೈಲ ಅಥವಾ ಅನಿಲ ಹೊರಹೋಗದಂತೆ ತಡೆಯುವ ಕ್ಯಾಪ್‌ರಾಕ್ಸ್ ((Caprocks)) ಆಗಿ ಕಾರ್ಯನಿರ್ವಹಿಸುತ್ತವೆ. ಈ ಪ್ರದೇಶದಲ್ಲಿ ಜುರಾಸಿಕ್ ಕಾಲದ ಕಾರ್ಬೋನೇಟ್ ಬಂಡೆಗಳು ಅತಿಹೆಚ್ಚು ತೈಲವನ್ನು ಶೇಖರಿಸುವ ಸಮರ್ಥ್ಯ ಹೊಂದಿವೆ.
ಸೌದಿ ಅರೇಬಿಯಾದ ಘವಾರಾ ಜಗತ್ತಿನ ಅತಿದೊಡ್ಡ ತೈಲ ಕ್ಷೇತ್ರವಾಗಿದ್ದು, ಇದು ಅರೇಬಿಯನ್ ಪ್ಲೇಟ್ ಬೃಹತ್ ಡೋಮ್ ರಚನೆಯಲ್ಲಿದೆ. ಇರಾನ್ ಮತ್ತು ಕತಾರ್ ಹಂಟಿಕೊಳ್ಳುವ ಈ ಕ್ಷೇತ್ರವು ಜಗತ್ತಿನ ಅತಿದೊಡ್ಡ ಅನಿಲ ಕ್ಷೇತ್ರವಾಗಿದೆ. ಈ ಪ್ರದೇಶದಲ್ಲಿ ಭೂಮಿ ಹೆಚ್ಚಾಗಿ ಸವೆದು ಹೋಗದ ಕಾರಣ ತೈಲ ಮತ್ತು ಅನಿಲವು ಲಕ್ಷಾಂತರ ವರ್ಷಗಳಿಂದ ಭೂಮಿಯ ಆಳದಲ್ಲಿ ಸುರಕ್ಷಿತವಾಗಿ ಉಳಿದುಕೊಂಡಿದೆ.
ಪರ್ಷಿಯನ್ ಗಲ್ಭ್ ಪ್ರದೇಶವು ಬೃಹತ್ ಪ್ರಮಾಣದ ಜೈವಿಕ ಶೇಖರಣೆ ಸೂಕ್ತವಾದ ಶೇಖರಣಾ ಬಂಡೆಗಳು ಮತ್ತು ಅದನ್ನು ಮುಚ್ಚಿಡುವ ಬಂಡೆಗಳು ((Seal)) ಈ ಮೂರು ಅಂಶಗಳ ಅದ್ಭುತ ಸಮ್ಮಿಶ್ರಣವನ್ನು ಹೊಂದಿರುವುದರಿಂದ ಜಗತ್ತಿನ ಇತರ ಯಾವುದೇ ಪ್ರದೇಶಕ್ಕಿಂತ ಹೆಚ್ಚಿನ ತೈಲ ಮತ್ತು ಅನಿಲಗಳನ್ನು ಹೊಂದಿದೆ.














