ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 04 : ಸಾಂಕ್ರಾಮಿಕ ರೋಗಗಳು ಹರಡದಿರಲಿ, ಊರಿನ ಮಂದಿಗೆ ಒಳಿತಾಗಲಿ ಹಾಗೂ ಕಾಲಕಾಲಕ್ಕೆ ಉತ್ತಮ ಮಳೆಯಾಗಿ ನಾಡು ಸಮೃದ್ಧಿಗೊಳ್ಳಲಿ ಎಂದು ಪ್ರಾರ್ಥಿಸಿ ಆಷಾಢ ಮಾಸದ ಮಂಗಳವಾರದಂದು ನಗರದಲ್ಲಿ ‘ಹೋಳಿಗೆಮ್ಮ’ ಹಬ್ಬವನ್ನು ಭಕ್ತಾದಿಗಳು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ನಗರದ ವಿದ್ಯಾ ನಗರ,ಬಸವೇಶ್ವರ ನಗರ ಪೊಲೀಸ್ ಕ್ವಾರ್ಟರ್ಸ್, ಪಿಳ್ಳೇಕೇರೇನಹಳ್ಳಿ, ಜಯಲಕ್ಷ್ಮಿ ಬಡಾವಣೆ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹೋಳಿಗೆಮ್ಮನ ಪೂಜಾ ಕೈಂಕರ್ಯಗಳು ವೈಭವದಿಂದ ಜರುಗಿದವು. ಯಾವುದೇ ಜಾತಿ-ಮತ ಭೇದವಿಲ್ಲದೆ ಶತಮಾನಗಳಿಂದಲೂ ಬುಡಕಟ್ಟು ಸಂಪ್ರದಾಯ ಹಾಗೂ ಸ್ಥಳೀಯ ಸಂಸ್ಕೃತಿಯ ನೆರಳಿನಲ್ಲಿ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ತನ್ನದೇ ಆದ ವಿಶಿಷ್ಟ ನಂಬಿಕೆ ಮತ್ತು ಜಾನಪದ ಹಿನ್ನೆಲೆಯನ್ನು ಹೊಂದಿದೆ.
ಚಿತ್ರದುರ್ಗ ನಗರದ ಜಯಲಕ್ಷ್ಮಿ ಬಡಾವಣೆಯಲ್ಲಿ ಹೋಳಿಗೆ ಅಮ್ಮ ಆಚರಣೆ
ಹಬ್ಬದ ವಿಶೇಷತೆ ಮತ್ತು ನಂಬಿಕೆ :
ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಯಾವುದೇ ದೊಡ್ಡ ಸಾಂಪ್ರದಾಯಿಕ ಹಬ್ಬಗಳು ಬರುವುದಿಲ್ಲ. ಈ ಬಿಡುವಿನ ಸಮಯದಲ್ಲಿ ರೈತಾಪಿ ವರ್ಗ ಹಾಗೂ ಶ್ರಮಜೀವಿಗಳು ಜಾನಪದ ಶೈಲಿಯ ಇಂತಹ ಆಚರಣೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆಷಾಢದ ಮಂಗಳವಾರ ಹಾಗೂ ಶುಕ್ರವಾರಗಳಂದು ಈ ಹಬ್ಬಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಬಹುತೇಕ ಎಲ್ಲರೂ ಮಂಗಳವಾರದಂದು ಈ ಹಬ್ಬವನ್ನು ಆಚರಿಸಿದರೆ, ನೆರೆಯ ದಾವಣಗೆರೆ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಶುಕ್ರವಾರ ಆಚರಿಸುವ ರೂಢಿಯಿದೆ.
ಚಿತ್ರದುರ್ಗ ನಗರದ ಹೊರವಲಯದ ಪಿಳ್ಳೆಕೆರೆನಹಳ್ಳಿಯಲ್ಲಿ ಹೋಳಿಗೆ ಅಮ್ಮ ಆಚರಣೆ
ಪೂಜಾ ವಿಧಾನ ಹಾಗೂ ಸಂಪ್ರದಾಯ :
ಹಬ್ಬದ ದಿನದಂದು ಮುಂಜಾನೆಯಿಂದಲೇ ಮನೆಮನೆಗಳಲ್ಲಿ ಸಂಭ್ರಮದ ವಾತಾವರಣ ನೆಲೆಸಿತ್ತು. ಮಹಿಳೆಯರು ಮಡಿಯಿಂದ ಮನೆ ಹಾಗೂ ದೇವರ ಮನೆಯನ್ನು ಸ್ವಚ್ಛಗೊಳಿಸಿ, ವಿಶೇಷವಾಗಿ ಬಿಸಿಬಿಸಿ ಹೋಳಿಗೆ ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿದರು.
ಚಿತ್ರದುರ್ಗ ನಗರದ ಬಸವೇಶ್ವರ ನಗರದ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಹೋಳಿಗೆ ಅಮ್ಮ ಆಚರಣೆ
ಅರಿಶಿನ, ಕುಂಕುಮ, ಗಾಜಿನ ಬಳೆ, ಬೇವಿನ ಸೊಪ್ಪು, ತೆಂಗಿನಕಾಯಿ ಹೋಳುಗಳು ಹಾಗೂ ಮಡಿಯಿಂದ ಸಿದ್ಧಪಡಿಸಿದ ಹೋಳಿಗೆಯನ್ನು ಮೊರದಲ್ಲಿ ಜೋಡಿಸಿ ಪ್ರಥಮವಾಗಿ ಮನೆಯಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಊರಿನ ದೇವಾಲಯದ ಅಥವಾ ಹೊರವಲಯದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಅವುಗಳನ್ನು ಇಟ್ಟು ಸಾಂಕ್ರಾಮಿಕ ರೋಗದಿಂದ ಮಕ್ಕಳನ್ನು ಕಾಪಾಡು ತಾಯಿ ಎಂದು ನಮಿಸಿದರು.
ಆಧುನಿಕ ಯುಗದಲ್ಲೂ ಜೀವಂತವಿರುವ ಶ್ರದ್ಧೆ
ಮಕ್ಕಳಿಗೆ ಅಮ್ಮ, ಧಡಾರ, ಸಿಡುಬು ಮುಂತಾದ ಕಷ್ಟಕರ ಸಾಂಕ್ರಾಮಿಕ ರೋಗಗಳು ತಗಲದಿರಲಿ, ಗ್ರಾಮಕ್ಕೆ ಯಾವುದೇ ದುಷ್ಟಶಕ್ತಿಗಳು ಪ್ರವೇಶಿಸದಿರಲಿ ಎಂಬ ಹಾರೈಕೆಯೊಂದಿಗೆ ಭಕ್ತರು ದೇವಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದ ಆಧುನಿಕ ಯುಗದಲ್ಲೂ ಜನಪದೀಯ ನಂಬಿಕೆ ಹಾಗೂ ಆರೋಗ್ಯದ ಕಾಳಜಿಯನ್ನು ಮೈಗೂಡಿಸಿಕೊಂಡು ಬಂದಿರುವ ಈ ಪುರಾತನ ಸಂಪ್ರದಾಯವು ಇಂದಿಗೂ ಮುಂದುವರಿದಿರುವುದು ಈ ಹಬ್ಬದ ವಿಶೇಷತೆಯಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














