ಚಿತ್ರದುರ್ಗ, ಆ.08: ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ಶನಿವಾರ ಹೊಳಲ್ಕೆರೆ ತಾಲ್ಲೂಕಿನ ರಂಗಾಪುರ, ರಾಮಗಿರಿ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಮತ್ತು ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದರು.
ಕೃಷಿ ಅಧಿಕಾರಿಗಳಿಂದ ಬೆಳೆ ಬಿತ್ತನೆ, ವಿಮೆ ಹಾಗೂ ಹಾನಿಯ ಕುರಿತು ಮಾಹಿತಿ ಪಡೆದ ಸಚಿವರು, ರೈತರಿಗೆ ಬೆಳೆ ವಿಮೆಯ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ರಾಗಿ ಬಿತ್ತನೆಗೆ ಇನ್ನೂ ಅವಕಾಶವಿದ್ದು, ರಾಗಿ ಬಿತ್ತನೆ ಮಾಡ ಬಯಸುವ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಂಡು ಬಿತ್ತನೆ ಮಾಡಬೇಕು. ಮಳೆ ಅಭಾವ ಅಥವಾ ವೈಪರೀತ್ಯ ಉಂಟಾದರೂ ವಿಮೆ ವ್ಯಾಪ್ತಿಯಡಿ ರೈತರಿಗೆ ಆರ್ಥಿಕ ನಷ್ಟ ತಡೆಯಲು ಪರಿಹಾರ ಸಿಗಲಿದೆ ಎಂದು ಸಚಿವರು ಹೇಳಿದರು.

ಅಲ್ಲದೆ, ಮಧ್ಯಂತರ ಬೆಳೆ ನಷ್ಟ, ಪ್ರಿವೆಂಟಿವ್ ಸೋಯಿಂಗ್ ಹಾಗೂ ರೆಗ್ಯುಲರ್ ವಿಮೆ ನಿಯಮಗಳಡಿ ಪ್ರತಿಯೊಬ್ಬ ಅರ್ಹ ರೈತರಿಗೂ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ, ಹೊಳಲ್ಕೆರೆ ತಾಲ್ಲೂಕಿನಲ್ಲಿ 50,000 ಹೆಕ್ಟೇರ್ ಕೃಷಿ ಭೂಮಿಯಿದ್ದು, ಒಟ್ಟು 48,000 ರೈತರ ಪೈಕಿ ಇದುವರೆಗೆ 26,000 ಕ್ಕೂ ಹೆಚ್ಚು ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಎರಡು ತಿಂಗಳಿಂದ ಮಳೆ ಬಾರದ ಹಿನ್ನೆಲೆಯಲ್ಲಿ ಮುಸುಕಿನ ಜೋಳ ಬಿತ್ತನೆ ತೀವ್ರ ಕುಂಠಿತಗೊಂಡಿದೆ. ನಿಗದಿತ 38,678 ಹೆಕ್ಟೇರ್ ಪೈಕಿ ಕೇವಲ 5,035 ಹೆಕ್ಟೇರ್ (ಶೇ 13) ಮಾತ್ರ ಬಿತ್ತನೆಯಾಗಿದೆ. ಹೀಗಾಗಿ ರೈತರು ಪರ್ಯಾಯ ಬೆಳೆಯಾಗಿ ರಾಗಿ ಬಿತ್ತನೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ರಾಗಿ ಬಿತ್ತನೆಗೆ 6,550 ಹೆಕ್ಟೇರ್ ಗುರಿ ಹೊಂದಲಾಗಿದ್ದು, ಈಗಾಗಲೇ 1,265 ಹೆಕ್ಟೇರ್ ಬಿತ್ತನೆಯಾಗಿದೆ. ರಾಗಿ ಬಿತ್ತನೆಗೆ ಕಾಲಾವಕಾಶವಿದ್ದು, ಬೆಳೆವಿಮೆ ಮಾಡಿಸಿ ರಾಗಿ ಬಿತ್ತನೆ ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು,ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾಂತರಾಜ್ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.










