ದೆಹಲಿ.ಸೆಪ್ಟೆಂಬರ್. 24: ಅಧಿಕ ಪ್ರಮಾಣದಲ್ಲಿ ಉಪ್ಪು, ಸಕ್ಕರೆ ಅಥವಾ ಕೊಬ್ಬನ್ನು ಹೊಂದಿರುವ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮುಂಭಾಗದಲ್ಲಿ ಸ್ಪಷ್ಟವಾಗಿ ಕಾಣುವ ಕೆಂಪು ಬಣ್ಣದ ಎಚ್ಚರಿಕೆ ಲೇಬಲ್ ಅನ್ನು ಅಳವಡಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪ್ರಸ್ತಾಪಿಸಿದೆ.
ಫ್ರಂಟ್-ಆಫ್-ಪ್ಯಾಕ್ ನ್ಯೂಟ್ರಿಷನ್ ಲೇಬಲಿಂಗ್’ (FoPL) ನಿಯಮವನ್ನು ಹಂತ ಹಂತವಾಗಿ ತರುವ ಬದಲು ಒಂದೇ ಬಾರಿಗೆ ಕಡ್ಡಾಯವಾಗಿ ಜಾರಿಗೆ ತರಲು ಪ್ರಾಧಿಕಾರ ಯೋಜಿಸಿದ್ದು, ಈ ಕುರಿತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದೆ. ಆಹಾರ ನಿಯಂತ್ರಕ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದಿಂದ ಮುಂಭಾಗದ ಎಚ್ಚರಿಕೆ ಲೇಬಲ್ ಜಾರಿಗೆ ನಿರ್ದಿಷ್ಟ ಕಾಲಮಿತಿಯನ್ನು ನ್ಯಾಯಾಲಯ ಕೇಳಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಪ್ರಸ್ತಾವಿತ ನಿಯಮಾವಳಿಯ ಪ್ರಕಾರ, ನಿಗದಿತ ಮಿತಿಗಿಂತ ಹೆಚ್ಚು ಅನಾರೋಗ್ಯಕರ ಪೋಷಕಾಂಶಗಳನ್ನು ಹೊಂದಿರುವ ಆಹಾರ ಪ್ಯಾಕೆಟ್‌ಗಳ ಮುಂಭಾಗದಲ್ಲಿ, ಬಿಳಿ ಚೌಕಾಕಾರದ ಹಿನ್ನೆಲೆಯ ಮೇಲೆ ಕೆಂಪು ಬಣ್ಣದ ಷಡ್ಭುಜಾಕೃತಿಯ (ಆರು ಮೂಲೆಗಳ ಆಕಾರ) ಚಿಹ್ನೆಯನ್ನು ಪ್ರದರ್ಶಿಸುವುದು ಕಡ್ಡಾಯವಾಗಿರುತ್ತದೆ. ಗ್ರಾಹಕರು ಖರೀದಿಸುವ ವೇಳೆಯಲ್ಲೇ ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಸುಲಭವಾಗಿ ಅರ್ಥಮಾಡಿಕೊಂಡು, ತಮ್ಮ ಆರೋಗ್ಯಕ್ಕೆ ಪೂರಕವಾದ ನಿರ್ಧಾರ ಕೈಗೊಳ್ಳಲು ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕೆನಡಾದಲ್ಲಿ ಚಾಲ್ತಿಯಲ್ಲಿರುವ ಮಾದರಿಯನ್ನೇ ಹೋಲುವ ಈ ವ್ಯವಸ್ಥೆಯು ಅತಿಯಾದ ಸೇವನೆಯಿಂದ ಆರೋಗ್ಯಕ್ಕೆ ಹಾನಿಯುಂಟುಮಾಡುವ ಪೋಷಕಾಂಶಗಳನ್ನು ಎತ್ತಿ ತೋರಿಸುತ್ತದೆ ಎಂದು ನಿಯಂತ್ರಕ ಸಂಸ್ಥೆ ಸ್ಪಷ್ಟಪಡಿಸಿದೆ.
ಯಾವುದೇ ಆಹಾರ ಉತ್ಪನ್ನದಲ್ಲಿ ಉಪ್ಪು, ಸಕ್ಕರೆ ಅಥವಾ ಕೊಬ್ಬಿನ ಪೈಕಿ ಯಾವುದಾದರೂ ಒಂದು ಅಂಶವು ನಿಗದಿತ ಮಿತಿಗಿಂತ ಹೆಚ್ಚಿದ್ದರೂ ಸಹ ಈ ಎಚ್ಚರಿಕೆ ಲೇಬಲ್ ಅನ್ವಯವಾಗಲಿದೆ. ಇಂತಹ ಸಂದರ್ಭಗಳಲ್ಲಿ ಆ ನಿರ್ದಿಷ್ಟ ಪೋಷಕಾಂಶದ ಹೆಸರನ್ನು ಕೆಂಪು ಷಡ್ಭುಜಾಕೃತಿಯೊಳಗೆ ನಮೂದಿಸಲಾಗುತ್ತದೆ. ಒಂದು ವೇಳೆ ಎರಡು ಅಥವಾ ಮೂರೂ ಅಂಶಗಳು ನಿಗದಿತ ಮಿತಿಯನ್ನು ಮೀರಿದ್ದರೆ, ಅವೆಲ್ಲವನ್ನೂ ಅದೇ ಒಂದೇ ಎಚ್ಚರಿಕೆ ಚಿಹ್ನೆಯೊಳಗೆ ತೋರಿಸಲಾಗುತ್ತದೆ. ನಿಯಮಗಳನ್ನು ಅಂತಿಮಗೊಳಿಸುವ ಮುನ್ನ ಸಾರ್ವಜನಿಕರು ಹಾಗೂ ಆಹಾರೋದ್ಯಮದ ಜತೆ ಸಮಾಲೋಚನೆ ನಡೆಸಲಾಗುವುದು ಎಂದಿರುವ FSSAI, ಎಲ್ಲಾ ನಿಯಂತ್ರಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಂತಿಮ ಕರಡು ನಿಯಮಗಳನ್ನು ಹೊರಡಿಸಲು ಸುಮಾರು ನಾಲ್ಕು ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಅಂದಾಜಿಸಿದೆ.










